Advertisement

24.21 ಲಕ್ಷ ಜಾನುವಾರುಗಳಿಗೆ ಚರ್ಮಗಂಟು ಲಸಿಕೆ

11:06 PM Nov 04, 2022 | Team Udayavani |

ಬೆಂಗಳೂರು: ರಾಜ್ಯಾದ್ಯಂತ ಚರ್ಮಗಂಟು ರೋಗ ಹರಡುವಿಕೆ ತಡೆಗಟ್ಟಲು ಈವರೆಗೆ 24.21 ಲಕ್ಷ ಜಾನುವಾರುಗಳಿಗೆ ರೋಗ ನಿರೋಧಕ ಲಸಿಕೆ ಹಾಕಲಾಗಿದೆ ಎಂದು ಪಶುಸಂಗೋಪನೆ ಸಚಿವ ಪ್ರಭು ಬಿ. ಚೌವ್ಹಾಣ್‌ ತಿಳಿಸಿದ್ದಾರೆ.

Advertisement

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಚರ್ಮಗಂಟು ರೋಗ ಪೀಡಿತ ಗ್ರಾಮಗಳಿಗೆ ಭೇಟಿ ನೀಡಿ ಜಾನುವಾರುಗಳನ್ನು ಪರಿಶೀಲಿಸಿದ್ದೇನೆ. ರಾಜ್ಯಾದ್ಯಂತ ಚರ್ಮಗಂಟು ರೋಗದ ಬಗ್ಗೆ ರೈತರಲ್ಲಿ ಅರಿವು ಮೂಡಿಸಲಾಗುತ್ತಿದೆ. ಪ್ರತಿಯೊಂದು ಹಳ್ಳಿಗೆ ಭೇಟಿ ನೀಡಿ ಶಿಬಿರ ಆಯೋಜಿಸಿ ಲಸಿಕೆ ಹಾಕಲಾಗುತ್ತಿದೆ ಎಂದು ಹೇಳಿದ್ದಾರೆ.

ರೋಗ ನಿವಾರಣೆಗಾಗಿ ಜಾನುವಾರುಗಳಿಗೆ ರೋಗ ನಿರೋಧಕ ಲಸಿಕೆ ಹಾಕುವ ಮೂಲಕ ರೋಗ ಬಾರದಂತೆ ತಡೆಗಟ್ಟಲಾಗುತ್ತಿದೆ. ರೈತರು ಆತಂಕಕ್ಕೆ ಒಳಗಾಗಬಾರದು. ಸೂಕ್ತ ರೀತಿಯಲ್ಲಿ ಪಾಲನೆ ಪೋಷಣೆ ಮಾಡುವುದರಿಂದ ರೋಗ ನಿವಾರಣೆ ಮಾಡಬಹುದು ಎಂದು ಸಲಹೆ ನೀಡಿದ್ದಾರೆ.

ರೋಗ ಹರಡುವುದನ್ನು ತಡೆಯಲು ಜಾನುವಾರು ಸಂತೆ, ಜಾತ್ರೆ, ಜಾನುವಾರು ಸಾಗಾಟವನ್ನು ನಿಷೇಧಿಸಿ ಆದೇಶ ಹೊರಡಿಸಲು ಆಯಾ ಜಿಲ್ಲಾಧಿಕಾರಿಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಿರ್ದೇಶನ ನೀಡಿದ ಪರಿಣಾಮ ಚರ್ಮಗಂಟು ರೋಗ ನಿಯಂತ್ರಣದಲ್ಲಿದೆ. ಚರ್ಮಗಂಟು ರೋಗ ಬಂದಿರುವ ಹಿನ್ನೆಲೆಯಲ್ಲಿ ಹಾಲು, ಮೊಸರು, ತುಪ್ಪ ಬಳಸುವುದರಿಂದ ಜನರಿಗೆ ಯಾವುದೇ ತೊಂದರೆಯಾಗುವುದಿಲ್ಲ. ಈ ಬಗ್ಗೆ ಸುಳ್ಳು ಸುದ್ದಿಗಳು ಹರಡುತ್ತಿದ್ದು, ಜನರು ಇದಕ್ಕೆ ಕಿವಿಗೊಡುವ ಅಗತ್ಯವಿಲ್ಲ ಎಂದು ಹೇಳಿದರು.

ರಾಜ್ಯದ 8124 ಗ್ರಾಮಗಳ, 107084 ಜಾನುವಾರುಗಳಲ್ಲಿ ಚರ್ಮರೋಗ ಕಂಡು ಬಂದಿದ್ದು, ಶೇ.80ರಷ್ಟು ಜಾನುವಾರುಗಳು ಚಿಕಿತ್ಸೆಯಿಂದ ಗುಣಮುಖ ಹೊಂದಿವೆ.

Advertisement

ರೋಗದಿಂದ 6953 ಜಾನುವಾರುಗಳ ಮರಣ ಹೊಂದಿವೆ. ಮರಣ ಹೊಂದಿದ ಜಾನುವಾರುಗಳ ಮಾಲೀಕರ ಬ್ಯಾಂಕ್‌ ಖಾತೆಗೆ ನೇರವಾಗಿ ಡಿಬಿಟಿ ಮೂಲಕ ಪರಿಹಾರ ಧನ ಪಾವತಿ ಮಾಡಲಾಗುತ್ತಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next