ಬೆಂಗಳೂರು: ರಾಜ್ಯದಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ ಮತ್ತಷ್ಟು ಏರಿಕೆಯಾಗಿದೆ. ಇಂದು ಮತ್ತೆ 239 ಜನರಿಗೆ ಕೋವಿಡ್-19 ಸೋಂಕು ತಾಗಿರುವುದು ದೃಢವಾಗಿದ್ದು, ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ 5452ಕ್ಕೆ ಏರಿಕೆಯಾಗಿದೆ.
ಇಂದು ಕಲಬುರಗಿ ಮತ್ತು ಯಾದಗಿರಿಯಲ್ಲಿ ಅತೀ ಹೆಚ್ಚು ಅಂದರೆ ಸೋಂಕು ಪ್ರಕರಣಗಳು ಕಂಡು ಬಂದಿದೆ. ಉಭಯ ಜಿಲ್ಲೆಗಳಲ್ಲಿ ತಲಾ 39 ಪ್ರಕರಣಗಳು ಪತ್ತೆಯಾಗಿದೆ.
ಬೆಳಗಾವಿಯಲ್ಲಿ 38 ಪ್ರಕರಣಗಳು, ಬೆಂಗಳೂರು ನಗರದಲ್ಲಿ 23 ಪ್ರಕರಣಗಳು ದೃಢವಾಗಿದ್ದರೆ, ದಾವಣಗೆರೆ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ತಲಾ 17 ಸೋಂಕು ಪ್ರಕರಣಗಳು ಇಂದು ದೃಢವಾಗಿದೆ. ಕಳೆದ ಕೆಲವು ದಿನಗಳಲ್ಲಿ ಭಾರಿ ಸಂಖ್ಯೆಯ ಸೋಂಕಿತರ ಪತ್ತೆಯಾಗಿದ್ದ ಉಡುಪಿ ಜಿಲ್ಲೆಯಲ್ಲಿ ಇಂದು 13 ಜನರಿಗೆ ಸೋಂಕು ಪತ್ತೆಯಾಗಿದೆ.
ಮಲೆನಾಡು ಜಿಲ್ಲೆ ಶಿವಮೊಗ್ಗದಲ್ಲಿ ಇಂದು 12 ಜನರಿಗೆ ಸೋಂಕು ದೃಢವಾಗಿದ್ದರೆ, ವಿಜಯಪುರದಲ್ಲಿ ಒಂಬತ್ತು, ಬೀದರ್ ನಲ್ಲಿ ಏಳು, ಬಳ್ಳಾರಿಯಲ್ಲಿ ಆರು, ಬೆಂಗಳೂರು ಗ್ರಾಮಾಂತರ ಮತ್ತು ಹಾಸನದಲ್ಲಿ ತಲಾ ಐದು ಪ್ರಕರಣಗಳು ದೃಢವಾಗಿದೆ.
ಧಾರವಾಡದಲ್ಲಿಂದು ಮೂವರಿಗೆ ಕೋವಿಡ್-19 ಸೋಂಕು ತಾಗಿದ್ದರೆ, ಗದಗ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ತಲಾ ಇಬ್ಬರಿಗೆ ಸೋಂಕು ತಾಗಿದೆ. ಮಂಡ್ಯ ಮತ್ತು ರಾಯಚೂರಿನಲ್ಲಿ ತಲಾ ಓರ್ವರು ಸೋಂಕಿತರಾಗಿದ್ದಾರೆ.
ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ 5452ಕ್ಕೆ ಏರಿಕೆಯಾಗಿದೆ. ಇಂದು 143 ಜನರು ಗುಣಮುಖರಾಗಿದ್ದು, ಒಟ್ಟು 2132 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇಂದು ಇಬ್ಬರು ಸೋಂಕಿನ ಕಾರಣದಿಂದ ಮರಣ ಹೊಂದಿದ್ದು, ರಾಜ್ಯದಲ್ಲಿ ಇದುವರೆಗೆ 61 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಇಬ್ಬರು ಕೋವಿಡ್ ಅಲ್ಲದ ಕಾರಣದಿಂದ ಸಾವನ್ನಪ್ಪಿದ್ದಾರೆ