Advertisement

ಕೋವಿಡ್-19 ಕಾಟದ ಮಧ್ಯೆಯೇ ಮುಂಗಾರು ಹಂಗಾಮಿಗೆ ಸಿದ್ಧತೆ

10:00 PM Apr 28, 2020 | Sriram |

ಉಡುಪಿ: ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆ ನಿಧಾನವಾಗಿ ಆರಂಭವಾಗುತ್ತಿದ್ದು, ಶನಿವಾರದೊಳಗೆ ಭತ್ತ ಬಿತ್ತನೆ ಬೀಜ ಜಿಲ್ಲೆಯ ರೈತ ಸಂಪರ್ಕ ಕೇಂದ್ರಗಳಿಗೆ ತಲುಪುವ ನಿರೀಕ್ಷೆಯಿದೆ.

Advertisement

ಜಿಲ್ಲೆಯಲ್ಲಿ 9 ರೈತ ಸಂಪರ್ಕ ಕೇಂದ್ರಗಳಲ್ಲಿ ಭತ್ತದ ಬಿತ್ತನೆ ಬೀಜ ವಿತರಣೆಗೆ ಸಿದ್ಧತೆ ನಡೆದಿದೆ. ರಾಜ್ಯ ಬಿತ್ತನೆ ಬೀಜ ನಿಗಮಕ್ಕೆ 2350 ಕಿಂಟ್ವಾಲ್‌ ಬೀಜಕ್ಕೆ ಬೇಡಿಕೆ ಸಲ್ಲಿಸಲಾಗಿದೆ. ಜಿಲ್ಲೆಯಲ್ಲಿ 2.9 ಲಕ್ಷ ಮಂದಿ ಕೃಷಿಕರಿದ್ದಾರೆ. ಈ ಪೈಕಿ 54 ಸಾವಿರ ಮಂದಿ 36 ಸಾವಿರ ಹೆಕ್ಟೇರ್‌ ಭೂಮಿಯಲ್ಲಿ ಭತ್ತ ಬೆಳೆಯುತ್ತಾರೆ.

ಬೀಜ ಕೊರತೆಗೆ ಸಂಗ್ರಹಣೆ ದಾರಿ
ಭತ್ತದ ಕೃಷಿಕರಿಗೆ ಎಂಒ-4 ಮಾದರಿ ಭತ್ತವನ್ನು ವಿತರಿಸಲಾಗುತ್ತದೆ. ಬೀಜಕ್ಕೆ 1.ಕೆ.ಜಿ. 32 ರೂ. ದರವಿದೆ. 8 ರೂ. ಸಬ್ಸಿಡಿ ದೊರಕುತ್ತದೆ. ಮೂರು ವರ್ಷಕ್ಕೆ ಬೇಕಾಗುವಷ್ಟು ಬೀಜವನ್ನು ಸ್ವತಃ ರೈತರೇ ಈ ವರ್ಷದಿಂದ ಸಂಗ್ರಹಿಸಿಟ್ಟಕೊಂಡರೆ ಉತ್ತಮ. ಇದರಿಂದ ಗುಣಮಟ್ಟ ಬದಲಾವಣೆಯಾಗದು ಹಾಗೂ ಬೀಜದ ದಾಸ್ತಾನು ಕೊರತೆ ತಪ್ಪಿಸಬಹುದು ಎನ್ನುತ್ತಾರೆ ಅಧಿಕಾರಿಗಳು.

ಹೊಸ ಯೋಜನೆಯ ನಿರೀಕ್ಷೆ
ಪ್ರಸ್ತುತ ಯಂತ್ರೋಪಕರಣ ಖರೀದಿ ಸೇರಿದಂತೆ ಎಲ್ಲವೂ ಹಳೆಯ ಯೋಜನೆಗಳೇ ಚಾಲ್ತಿಯಲ್ಲಿದ್ದು, ಹೊಸತು ಪ್ರಕಟವಾಗಿಲ್ಲ. ಈ ಹಿನ್ನೆಲೆಯಲ್ಲಿ ಸರಕಾರ ಹಾಗೂ ಕೃಷಿ ಇಲಾಖೆಯ ಹೊಸ ಯೋಜನೆಗಳತ್ತ ರೈತರು ನೋಟ ಹರಿಸಿದ್ದಾರೆ.

ಬಾಡಿಗೆ ಆಧಾರಿತ ಸೇವಾ ಕೇಂದ್ರ
ಬಾಡಿಗೆ ಆಧಾರಿತ ಸೇವಾ ಕೇಂದ್ರಗಳಲ್ಲಿ ಕೃಷಿ ಚಟುವಟಿಕೆಗಳ ಯಂತ್ರಗಳು ಬಾಡಿಗೆಗೆ ದೊರಕುತ್ತವೆ. ಬ್ರಹ್ಮಾವರ,ಅಜೆಕಾರು, ಬೈಂದೂರು 3 ರೈತ ಸಂಪರ್ಕ ಕೇಂದ್ರಗಳ ವ್ಯಾಪ್ತಿಗೆ ಶ್ರೀ ಕ್ಷೇ.ಧ. ಗ್ರಾ ಯೋಜನೆ ಹಾಗೂ ಉಳಿದ 6 ಕೇಂದ್ರಗಳ ವ್ಯಾಪ್ತಿಗೆ ಈಝಿ ಲೈಫ್ ಸಂಸ್ಥೆಯು ಕೃಷಿ ಯಂತ್ರಗಳನ್ನು ಪೂರೈಸುತ್ತಿದೆ. ಯಂತ್ರಗಳು ಬೇಕಿದ್ದಲ್ಲಿ ಶೇ. 20 ರಷ್ಟು ದರ ನೀಡಿ ನೋಂದಾಯಿಸಿಕೊಳ್ಳಬೇಕು. ಮಾಹಿತಿಗೆ ರೈತ ಸಂಪರ್ಕ ಕೇಂದ್ರಗಳನ್ನು ಸಂಪರ್ಕಿಸಬಹುದು.

Advertisement

ವಿಮಾ ಸೌಲಭ್ಯವಿದೆ
ಕೃಷಿಕರು ಚಾಲ್ತಿಯಲ್ಲಿರುವ ವಿಮೆ ಪಡೆಯಲು ಬ್ಯಾಂಕ್‌ಗಳಲ್ಲಿ ರೈತರು ಹೆಸರು ನೋಂದಾಯಿಸಿಕೊಳ್ಳಬೇಕು. ಸಾಲಗಾರ ರಾಗಿದ್ದರೆ ನೋಂದಣಿ ಮಾಡಬೇಕಿಲ್ಲ ಎನ್ನುತ್ತಾರೆ ಕೃಷಿ ಅಧಿಕಾರಿಗಳು.

ರಸಗೊಬ್ಬರ ಖರೀದಿಗೆ ಆಧಾರ್‌ ಸಾಕು
ಕೋವಿಡ್-19 ಸಮಸ್ಯೆಯಿಂದ ರೈತರು ರಸಗೊಬ್ಬರ ಖರೀದಿ ವೇಳೆ ಬೆರಳಚ್ಚು ನೀಡಬೇಕಿಲ್ಲ. ಆಧಾರ್‌ ಚೀಟಿ ಹಾಗೂ ಗುರುತಿನ ಚೀಟಿ ತೋರಿಸಿದರೆ ಸಾಕು. ಜಿಲ್ಲೆಯಲ್ಲಿ 113 ಬಿಡಿ ಮಾರಾಟ ಮಳಿಗೆ ಹಾಗೂ 11 ಸಗಟು ರಸಗೊಬ್ಬರ ಖರೀದಿ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ಲೈಸೆನ್ಸ್‌ ಪಡೆದ 14 ಬಿತ್ತನೆ ಬೀಜ ವಿತರಣೆ ಕೇಂದ್ರಗಳು ಹಾಗೂ 4 ರಾಸಾಯನಿಕ ಕೀಟನಾಶಕ ಮಾರಾಟ ಅಧಿಕೃತ ಕೇಂದ್ರಗಳಲ್ಲಿ ಗೊಬ್ಬರ, ಕೀಟನಾಶಕ ಲಭ್ಯವಿದೆ. ರೈತರು ಬಿಲ್‌ ಪಡೆಯಬೇಕಾದದ್ದು ಕಡ್ಡಾಯ.

ಸಹಕಾರ ನೀಡಲಾಗುವುದು
ಜಿಲ್ಲೆಯಲ್ಲಿ ಕೃಷಿ ಚಟುವಟಿಕೆ ಆರಂಭವಾಗುವುದು ಮಳೆ ಬಿದ್ದ ಮೇಲೆಯೇ. ಹವಾಮಾನ ಇಲಾಖೆಯ ಸೂಚನೆಗಳನ್ನು ಆಧರಿಸಿ ಕೃಷಿ ಚಟುವಟಿಕೆ ಆರಂಭಿಸಲಾಗುತ್ತದೆ. ಕೋವಿಡ್‌-19ರಿಂದ ಹೊಸ ಘೋಷಣೆಗಳು ಆಗಿಲ್ಲ. ಕೃಷಿಗೆ ಸಂಬಂಧಿಸಿ ಮಾಹಿತಿ ಬೇಕಿದ್ದಲ್ಲಿ ಇಲಾಖೆಯ ರೈತ ಸಂಪರ್ಕ ಕೇಂದ್ರವನ್ನು ಸಂಪರ್ಕಿಸಬಹುದು.
– ಕೆಂಪೇಗೌಡ, ಜಂಟಿ ಕೃಷಿ ನಿರ್ದೇಶಕರು ಕೃಷಿ ಇಲಾಖೆ, ಉಡುಪಿ

ರೈತ ಸಂಪರ್ಕ ಕೇಂದ್ರಗಳ ಸಂಪರ್ಕ ಸಂಖ್ಯೆ
ಕೋಟ 8277929753
ಬ್ರಹ್ಮಾವರ 8277932503
ಉಡುಪಿ 8277929751 (8277932515 ಸಹಾಯಕ ನಿರ್ದೇಶಕರು)
ಕಾಪು 8277929752
ಕುಂದಾಪುರ 8277929754 (8277932503 ಸಹಾಯಕ ನಿರ್ದೇಶಕರು)
ವಂಡ್ಸೆ 8277929755
ಬೈಂದೂರು 8277932520
ಕಾರ್ಕಳ 8277932523(8277932505 ಸಹಾಯಕ ನಿರ್ದೇಶಕರು)
ಅಜೆಕಾರು 8277932527

ಪ್ರತಿ ಗುರುವಾರ ರೈತಸೇತು
ಲಾಕ್‌ಡೌನ್‌ ಹಿನ್ನೆಲೆಯಲ್ಲಿ ತಮ್ಮ ಬೆಳೆಗಳನ್ನು ಮಾರಲಾಗದೆ ಸಂಕಷ್ಟದಲ್ಲಿರುವ ರೈತರಿಗೆ ಗ್ರಾಹಕರೊಂದಿಗೆ ಸಂಪರ್ಕ ಕಲ್ಪಿಸಲು ಉದಯವಾಣಿಯು ಆರಂಭಿಸಿದ ರೈತಸೇತುಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಹಲವಾರು ಮಂದಿ ಇದರ ಪ್ರಯೋಜನ ಪಡೆದಿದ್ದಾರೆ. ಇದನ್ನು ಮುಂದೆ ವಾರಕ್ಕೊಮ್ಮೆಯಾದರೂ ಪ್ರಕಟಿಸುವಂತೆ ರೈತರು ಕೋರಿದ್ದಾರೆ. ಈ ಹಿನ್ನೆಲೆಯಲ್ಲಿ ಇನ್ನು ಮುಂದೆ ಪ್ರತಿ ಗುರುವಾರ ರೈತಸೇತು ಪ್ರಕಟವಾಗಲಿದೆ. ತಮ್ಮ ಬೆಳೆ ಹಾಗೂ ಸಂಪರ್ಕ ಸಂಖ್ಯೆಯನ್ನು ನಮ್ಮ ವಾಟ್ಸಪ್‌ಗೆ ಕಳುಹಿಸಬೇಕು. ನೀಡಬೇಕಾದ ಮಾಹಿತಿ: ಹೆಸರು, ಉತ್ಪನ್ನದ ಹೆಸರು, ಲಭ್ಯವಿರುವ ಬೆಳೆ ಪ್ರಮಾಣ, ಊರಿನ ಹೆಸರು, ಸಂಪರ್ಕ ಸಂಖ್ಯೆ, ಉತ್ಪನ್ನದ ಬೆಲೆ.

ವಾಟ್ಸಪ್‌ ಸಂಖ್ಯೆ: 76187 74529

Advertisement

Udayavani is now on Telegram. Click here to join our channel and stay updated with the latest news.

Next