Advertisement

ಮುಂಬಯಿ ಕಾಲ್ತುಳಿತ ಮೃತರ ಸಂಖ್ಯೆ 23 

06:05 AM Oct 01, 2017 | |

ಮುಂಬೈ: ದೇಶವಿಡೀ ಶುಕ್ರವಾರ ನವರಾತ್ರಿಯ ಸಂಭ್ರಮದಲ್ಲಿ ಮುಳುಗಿದ್ದರೆ, ವಾಣಿಜ್ಯ ನಗರಿ ಮುಂಬೈ ಭೀಕರ ದುರಂತವೊಂದಕ್ಕೆ ಸಾಕ್ಷಿಯಾಗಿದೆ. ಎರಡು ರೈಲು ನಿಲ್ದಾಣಗಳಿಗೆ ಸಂಪರ್ಕ ಕಲ್ಪಿಸುವ ಮೇಲ್ಸೇತುವೆಯಲ್ಲಿ ಕಾಲು¤ಳಿತ ಉಂಟಾದ ಪರಿಣಾಮ, ಇಬ್ಬರು ಕನ್ನಡಿಗರು ಸೇರಿದಂತೆ 23 ಮಂದಿ ಮೃತಪಟ್ಟು, 38 ಮಂದಿ ಗಾಯಗೊಂಡಿದ್ದಾರೆ.

Advertisement

ಒಂದೆಡೆ, ಆಯುಧಪೂಜೆಯ ದಿನ ಸಂಭವಿಸಿದ ಈ ದುರಂತವು ವಾಣಿಜ್ಯ ನಗರಿಯನ್ನು ಬೆಚ್ಚಿಬೀಳಿಸಿದರೆ, ಮತ್ತೂಂದೆಡೆ ಅವಘಡಕ್ಕೆ ಸಂಬಂಧಿಸಿ ರಾಜಕೀಯ ಕೆಸರೆರಚಾಟಗಳೂ ಪ್ರಾರಂಭವಾಗಿವೆ. ರೈಲ್ವೆ ಮೂಲಸೌಕರ್ಯಗಳ ಕೊರತೆ ಕುರಿತು ಮಿತ್ರಪಕ್ಷ ಶಿವಸೇನೆ ಹಾಗೂ ಪ್ರತಿಪಕ್ಷಗಳು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿವೆ. ಎಮ್ಮೆನ್ನೆಸ್‌ ಮುಖ್ಯಸ್ಥ ರಾಜ್‌ ಠಾಕ್ರೆ ಅವರೂ ಖಡಕ್‌ ಮಾತುಗಳ ಮೂಲಕ ಸರ್ಕಾರವನ್ನು ತಿವಿದಿದ್ದಾರೆ. ಇದೇ ವೇಳೆ, ರೈಲ್ವೆ ಮಂಡಳಿಯ ಉನ್ನತ ಮಟ್ಟದ ಸಭೆ ಕರೆದಿರುವ ರೈಲ್ವೆ ಸಚಿವ ಪಿಯೂಷ್‌ ಗೋಯಲ್‌, ರೈಲ್ವೆ ಸುರಕ್ಷತೆಗೆ ಸಂಬಂಧಿಸಿ ಮಹತ್ವದ ಘೋಷಣೆಗಳನ್ನು ಮಾಡಿದ್ದಾರೆ.

ಘಟನೆ ನಡೆದಿದ್ದು ಹೇಗೆ?: ಎಲ್ಫಿನ್‌ಸ್ಟೋನ್‌ ರಸ್ತೆ ಮತ್ತು ಪರೇಲ್‌ ಸಬ್‌ಅರ್ಬನ್‌ ಸ್ಟೇಷನ್‌ಗಳನ್ನು ಸಂಪರ್ಕಿಸುವ ಮೇಲ್ಸೇತುವೆಯಲ್ಲಿ ಬೆಳಗ್ಗೆ 10.40ರ ಸುಮಾರಿಗೆ ದುರ್ಘ‌ಟನೆ ಸಂಭವಿಸಿದೆ. ಜನನಿಬಿಡ ನಿಲ್ದಾಣದಲ್ಲಿ ಎಂದಿನಂತೆ ಭಾರೀ ಸಂಖ್ಯೆಯ ಪ್ರಯಾಣಿಕರು ಸೇರಿದ್ದರು. ಎರಡೂ ನಿಲ್ದಾಣಗಳಿಗೆ ಹೋಗುವ ಮಂದಿ ಈ ಮೇಲ್ಸೇತುವೆ ಮೂಲಕವೇ ಹತ್ತುವುದು, ಇಳಿಯುವುದು ಮಾಮೂಲಿ. ಆದರೆ, ಶುಕ್ರವಾರ ದಿಢೀರನೆ ಮಳೆ ಆರಂಭವಾದ ಕಾರಣ, ಮಳೆಯಿಂದ ರಕ್ಷಣೆ ಪಡೆಯಲೆಂದು ಎಲ್ಲರೂ ಮೇಲ್ಸೇತುವೆಯತ್ತ ಓಡಿದ್ದಾರೆ. 

ಹೀಗಾಗಿ, ಸೇತುವೆಯಲ್ಲಿ ಜನದಟ್ಟಣೆ ಸಹಜವಾಗಿಯೇ ಹೆಚ್ಚಾಯಿತು. ಅಷ್ಟರಲ್ಲಿ, ಭಾರೀ ಶಬ್ದದೊಂದಿಗೆ ಬಂದ ಸಿಡಿಲಿನ ಜೊತೆಗೆ ಸೇತುವೆಯ ಮತ್ತೂಂದು ಬದಿಯಿಂದ ಶಾರ್ಟ್‌ ಸರ್ಕ್ನೂಟ್‌ ಆದಂತಹ ಸುದ್ದಿ ಜನರನ್ನು ಕಂಗೆಡಿಸಿತು. ಅದೇ ಸಂದರ್ಭದಲ್ಲಿ ನೂಕುನುಗ್ಗಲಿನ ಪರಿಣಾಮ ಮಹಿಳೆಯೊಬ್ಬರು ಸೇತುವೆಯಿಂದ ಕೆಳಗೆ ತಳ್ಳಲ್ಪಟ್ಟರು. ಈ ಎಲ್ಲವುಗಳನ್ನು ನೋಡಿ ಆತಂಕಕ್ಕೀಡಾದ ಜನ ದಿಕ್ಕಾಪಾಲಾಗಿ ಓಡಲು ಯತ್ನಿಸಿದಾಗ, ಕಾಲ್ತುಳಿತ ಉಂಟಾಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಘಟನೆ ಬಗ್ಗೆ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌, ಪ್ರಧಾನಿ ನರೇಂದ್ರ ಮೋದಿ, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾಗಾಂಧಿ, ಉಪಾಧ್ಯಕ್ಷ ರಾಹುಲ್‌ ಗಾಂಧಿ ಸೇರಿದಂತೆ ಅನೇಕರು ಆಘಾತ ವ್ಯಕ್ತಪಡಿಸಿದ್ದು, ಸಂತ್ರಸ್ತರ ಕುಟುಂಬಗಳಿಗೆ ಸಾಂತ್ವನ ಹೇಳಿದ್ದಾರೆ.

Advertisement

ಎಸಿ ರೂಂಗಳಿಂದ ಹೊರಬನ್ನಿ: ಅಧಿಕಾರಿಗಳಿಗೆ ಸಚಿವ ಗೋಯಲ್‌
ದುರಂತದ ಬೆನ್ನಲ್ಲೇ ಅಂದರೆ ಶನಿವಾರ ರೈಲ್ವೆ ಮಂಡಳಿಯ ಅಧಿಕಾರಿಗಳೊಂದಿಗೆ ರೈಲ್ವೆ ಸಚಿವ ಪಿಯೂಷ್‌ ಗೋಯಲ್‌ ಅವರು ಮಹತ್ವದ ಸಭೆ ನಡೆಸಿದ್ದಾರೆ. ಈ ವೇಳೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಅವರು, “ಮೊದಲು ನೀವೆಲ್ಲ ಎಸಿ ರೂಂಗಳಿಂದ ಹೊರಬನ್ನಿ’ ಎಂದು ಖಡಕ್ಕಾಗಿ ನುಡಿದಿದ್ದಾರೆ. ಜತೆಗೆ, ಸ್ಥಳೀಯ ರೈಲ್ವೆ ಸುರಕ್ಷತೆಗಾಗಿ ಹಲವು ಕ್ರಮಗಳನ್ನೂ ಕೈಗೊಂಡಿದ್ದಾರೆ.

ಸುರಕ್ಷತಾ ಕ್ರಮಗಳೇನು?
– ಎಲ್ಲ ಪ್ರಯಾಣಿಕರೂ ಕಡ್ಡಾಯವಾಗಿ “ಪಾದಚಾರಿಗಳ ಮೇಲ್ಸೇತುವೆ’ಯನ್ನೇ ಬಳಸಬೇಕು
– 15 ತಿಂಗಳೊಳಗಾಗಿ ಮುಂಬೈಯ ಎಲ್ಲ ಸಬ್‌ಅರ್ಬನ್‌ ರೈಲು ನಿಲ್ದಾಣಗಳಲ್ಲೂ ಸಿಸಿಟಿವಿ ಅಳವಡಿಕೆ
– ಮುಂಬೈನ ಜನದಟ್ಟಣೆಯಿರುವ ನಿಲ್ದಾಣಗಳಲ್ಲಿ ಹೆಚ್ಚುವರಿ ಎಸ್ಕಲೇಟರ್‌ಗಳ ನಿರ್ಮಾಣ
– ಪ್ರಧಾನ ಕಚೇರಿಯಲ್ಲಿರುವ 200 ಮಂದಿ ಅಧಿಕಾರಿಗಳನ್ನು ವರ್ಗಾಯಿಸಿ, ಫೀಲ್ಡ್‌ಗಳಿಗೆ ರವಾನೆ. ಈ ಮೂಲಕ ಯೋಜನೆಗಳ ಅನುಷ್ಠಾನಕ್ಕೆ ಒತ್ತು
– ಅನುಷ್ಠಾನದಲ್ಲಾಗುವ ವಿಳಂಬವನ್ನು ತಡೆಯಲು ಕ್ರಮ. ಸುರಕ್ಷತಾ ಕ್ರಮಗಳಿಗೆ ಅಗತ್ಯವಿರುವ ಹಣವನ್ನು ವೆಚ್ಚ ಮಾಡಲು ಜಿಎಂಗಳಿಗೆ ಅಧಿಕಾರ

ಬುಲೆಟ್‌ ರೈಲಿಗೆ ಮುನ್ನ ಇರುವುದನ್ನು ಸರಿಪಡಿಸಿ: ಪ್ರತಿಪಕ್ಷಗಳ ವಾಗ್ಬಾಣ
ಪದೇ ಪದೆ ಸಂಭವಿಸುತ್ತಿರುವ ರೈಲು ದುರಂತಗಳು, ಮೂಲಸೌಕರ್ಯಗಳ ಕೊರತೆಯನ್ನು ಎತ್ತಿಕೊಂಡು ಪ್ರತಿಪಕ್ಷಗಳಷ್ಟೇ ಅಲ್ಲದೆ, ಮಿತ್ರಪಕ್ಷ ಶಿವಸೇನೆ ಕೂಡ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿವೆ. ಶಿವಸೇನೆಯು ಶುಕ್ರವಾರದ ದುರಂತವನ್ನು “ನರಹತ್ಯೆ’ ಎಂದು ಕರೆದಿದ್ದು, ಇದಕ್ಕೆ ಸರ್ಕಾರ ಮತ್ತು ರೈಲ್ವೆ ಇಲಾಖೆಯೇ ಹೊಣೆ ಎಂದು ಆರೋಪಿಸಿದೆ. ಹಳೆಯ ಮತ್ತು ಶಿಥಿಲಾವಸ್ಥೆಯಲ್ಲಿರುವ ಸೇತುವೆಯನ್ನು ನವೀಕರಿಸಿ ಎಂದು ಎಷ್ಟು ಬಾರಿ ಕೇಳಿಕೊಂಡರೂ, ಸರ್ಕಾರ ಕ್ರಮ ಕೈಗೊಳ್ಳಲಿಲ್ಲ ಎಂದು ಶಿವಸೇನೆ ಸಂಸದ ಸಂಜಯ್‌ ರಾವತ್‌ ಆರೋಪಿಸಿದ್ದಾರೆ. ಇನ್ನೊಂದೆಡೆ, ಎಮ್ಮೆನ್ನೆಸ್‌ ಮುಖ್ಯಸ್ಥ ರಾಜ್‌ ಠಾಕ್ರೆ ಕೂಡ ಖಾರವಾಗಿ ಪ್ರತಿಕ್ರಿಯಿಸಿದ್ದು, ಪ್ರಧಾನಿ ಮೋದಿ ಅವರು ಸುಳ್ಳುಗಾರ ಎಂದು ಕರೆದಿದ್ದಾರೆ. ಜತೆಗೆ, “ಸ್ಥಳೀಯ ರೈಲಿನ ಮೂಲಸೌಕರ್ಯಗಳನ್ನು ಸುಧಾರಿಸುವವರೆಗೂ ಮುಂಬೈನಲ್ಲಿ ಬುಲೆಟ್‌ ರೈಲು ಯೋಜನೆಗೆ ಒಂದೇ ಒಂದು ಇಟ್ಟಿಗೆಯನ್ನೂ ಜೋಡಿಸಲು ಬಿಡುವುದಿಲ್ಲ. ನಮ್ಮ ಜನರನ್ನು ಕೊಲ್ಲಲು ಪಾಕಿಸ್ತಾನದ ಭಯೋತ್ಪಾದಕರು ಬೇಕಿಲ್ಲ, ನಮ್ಮ ರೈಲ್ವೆ ಇಲಾಖೆಯೇ ಸಾಕು’ ಎಂದಿದ್ದಾರೆ.

ನೋಟು ಅಮಾನ್ಯದಂತೆ ಎಂದ ಚಿದಂಬರಂ:
“ನೋಟು ಅಮಾನ್ಯದಂತೆಯೇ ಪ್ರಧಾನಿ ಮೋದಿ ಅವರ ಬುಲೆಟ್‌ ರೈಲು ಯೋಜನೆ ಕೂಡ ಎಲ್ಲವನ್ನೂ ಕೊಂದುಹಾಕಲಿದೆ. ಅದರ ಬದಲಿಗೆ, ಆ ಹಣವನ್ನು ರೈಲ್ವೆ ಸುರಕ್ಷತೆಗೆ ವೆಚ್ಚ ಮಾಡಲಿ’ ಎಂದು ಕೇಂದ್ರದ ಮಾಜಿ ಸಚಿವ, ಕಾಂಗ್ರೆಸ್‌ ನಾಯಕ ಚಿದಂಬರಂ ಹೇಳಿದ್ದಾರೆ. ಬುಲೆಟ್‌ ರೈಲು ಇರುವುದು ಜನಸಾಮಾನ್ಯರಿಗಲ್ಲ. ಅದು ಶ್ರೀಮಂತ ಮತ್ತು ಉನ್ನತ ಮಟ್ಟದಲ್ಲಿರುವವರು ಮಾಡುವ ಪ್ರತಿಷ್ಠೆಯ ಪ್ರಯಾಣವಾಗಲಿದೆ. ರೈಲ್ವೆ ಇಲಾಖೆಯು ಜನರ ಸುರಕ್ಷತೆಗೆ, ಮೂಲಸೌಕರ್ಯಕ್ಕೆ ಹಣ ವೆಚ್ಚ ಮಾಡಬೇಕೇ ಹೊರತು ಬುಲೆಟ್‌ ರೈಲಿಗಲ್ಲ ಎಂದಿದ್ದಾರೆ ಚಿದಂಬರಂ.

ಎಲ್ಲಿ?- ಮುಂಬೈನ ಎಲ್ಫಿನ್‌ಸ್ಟೋನ್‌ ಮತ್ತು ಪರೇಲ್‌ ಸಬ್‌ಅರ್ಬನ್‌ ಸ್ಟೇಷನ್‌ಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆಯಲ್ಲಿ
ಆಗಿದ್ದೇನು?- ರೈಲು ನಿಲ್ದಾಣದ ಮೇಲ್ಸೇತುವೆಯಲ್ಲಿ ಕಾಲು¤ಳಿತ
ಸಾವು– 23 ಮಂದಿ
ಗಾಯಾಳುಗಳು– 38 ಮಂದಿ
ಯಾವಾಗ?– ಶುಕ್ರವಾರ ಬೆಳಗ್ಗೆ 10.40
ಪರಿಹಾರ– ಮೃತರ ಕುಟಂಬಗಳಿಗೆ ತಲಾ 10 ಲಕ್ಷ ರೂ.(ರೈಲ್ವೆ ಸಚಿವರಿಂದ 5 ಲಕ್ಷ ರೂ, ಸಿಎಂ ಫ‌ಡ್ನವೀಸ್‌ರಿಂದ 5 ಲಕ್ಷ ರೂ. ಘೋಷಣೆ)

ಭೀಕರ ಕಾಲು¤ಳಿತ ದುರಂತಗಳು
ರಾಜ್ಯ                      ವರ್ಷ                   ಸಾವಿನ ಸಂಖ್ಯೆ
ರಾಜಸ್ಥಾನ(ಜೋಧ್‌ಪುರ)         2008                    224
ಮಹಾರಾಷ್ಟ್ರ               2005                     340
ಕೇರಳ(ಶಬರಿಮಲೆ)     2011                    102
ಹಿಮಾಚಲ ಪ್ರದೇಶ(ನೈನಾ ದೇವಿ ದೇಗುಲ)        2008                     146
ಮಧ್ಯಪ್ರದೇಶ(ದಾಟಿಯಾ)             2013                     115

434  - 2008
110-2009
113-2010
489-2011
070-2012
400-2013
178-2014
480- 2015
(ಮಾಹಿತಿ ಆಧಾರ- ರಾಷ್ಟ್ರೀಯ ಅಪರಾಧ  ದಾಖಲೆಗಳ ಮಂಡಳಿ)

Advertisement

Udayavani is now on Telegram. Click here to join our channel and stay updated with the latest news.

Next