ಲಕ್ನೋ: ತನ್ನ ಮಗಳ ಹುಟ್ಟುಹಬ್ಬ ಆಚರಣೆಗೆಂದು 23 ಮಕ್ಕಳನ್ನು ಮನೆಗೆ ಕರೆಯಿಸಿ ಹತ್ತು ಗಂಟೆಗಳ ಕಾಲ ಒತ್ತೆಯಿರಿಸಿಕೊಂಡಿದ್ದ ವ್ಯಕ್ತಿಯನ್ನು ಉತ್ತರ ಪ್ರದೇಶದ ಫಾರೂಖ್ ಬಾದ್ ಜಿಲ್ಲೆಯ ಕಸಾರಿಯಾ ಗ್ರಾಮದಲ್ಲಿ ಪೊಲೀಸರು ಗುಂಡು ಹಾರಿಸಿ ಕೊಂದಿದ್ದಾರೆ. ಆ ಮೂಲಕ ಎಲ್ಲಾ 23 ಮಕ್ಕಳನ್ನು ರಕ್ಷಿಸಲಾಗಿದೆ.
ಕೊಲೆ ಆರೋಪದಲ್ಲಿ ಬಂಧಿತನಾಗಿ ಇತ್ತೀಚಿಗಷ್ಠೇ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ ಸುಭಾಷ್ ಬಾಥಮ್ ಎಂಬ ವ್ಯಕ್ತಿಯು ಮಕ್ಕಳನ್ನು ಒತ್ತೆಯಿರಿಸಿಕೊಂಡಾತ. ಮಕ್ಕಳನ್ನು ಬಿಡುಗಡೆ ಮಾಡಿಸಲು ಪೊಲೀಸರು ಹರಸಾಹಸ ಪಟ್ಟರು ಯಾವುದೇ ಪ್ರಯೋಜನವಾಗದ ಕಾರಣ ಎನ್ ಕೌಂಟರ್ ನಡೆಸುವುದು ಅನಿವಾರ್ಯವಾಯಿತು ಎಂದು ಪೊಲೀಸ್ ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.
ಮಗಳ ಹುಟ್ಟುಹಬ್ಬದ ಪ್ರಯುಕ್ತ ಮಕ್ಕಳು ಮನೆಯೊಳಗೆ ಬಂದ ನಂತರ ಬಾಗಿಲು ಭದ್ರಪಡಿಸಿ ತನ್ನ ಹೆಂಡತಿ ಮತ್ತು ಮಗಳ ಸಹಿತ ಎಲ್ಲರಿಗೂ ಬಂದೂಕು ತೋರಿಸಿ ಒತ್ತೆಯಿರಿಸಿಕೊಂಡಿದ್ದಾನೆ. ಇತ್ತ ತಮ್ಮ ಮಕ್ಕಳು ಮನೆಗೆ ಹಿಂದಿರುಗದಿದ್ದಾಗ ಭಯಗೊಂಡ ಪೋಷಕರು ಸುಭಾಷ್ ಮನೆಗೆ ತೆರಳಿದಾಗ ಆತ ಗುಂಡು ಹಾರಿಸಲು ಆರಂಭಿಸಿದ್ದಾನೆ. ಇದರಿಂದ ಪೋಷಕರು ಪೋಲಿಸರಿಗೆ ಮಾಹಿತಿ ನೀಡಿದ್ದಾರೆ.
ಪೊಲೀಸರು ಆರೋಪಿಯ ಮನೆಗೆ ಪ್ರವೇಶಿಸಲು ಯತ್ನಿಸಿದಾಗ ಆತ ಕಚ್ಚಾಬಾಂಬ್ ಎಸೆಯಲು ಆರಂಭಿಸಿದ. ಈ ಘಟನೆಯ ನಂತರ ಪೊಲೀಸರು ಸ್ಥಳಕ್ಕೆ ಭಯೋತ್ಪಾದನಾ ನಿಗ್ರಹದಳದ ಕಮಾಂಡೋಗಳನ್ನು ನಿಯೋಜಿಸಿದರು. ಒತ್ತೆಯಿರಿಸಿಕೊಂಡಿರುವ ಮಕ್ಕಳಿಗೆ ಯಾವುದೇ ತೊಂದರೆಯಾಗಬಾರದೆಂಬ ಮುನ್ನೆಚ್ಚರಿಕೆಯಲ್ಲಿ ಕಾರ್ಯಾಚರಣೆ ನಡೆಸಿದ ಅವರು ಆರೋಪಿಯ ಮೇಲೆ ಗುಂಡು ಹಾರಿಸಿ ಮಕ್ಕಳನ್ನು ರಕ್ಷಿಸಿದ್ದಾರೆ ಎಂದು ಉತ್ತರ ಪ್ರದೇಶದ ಪೊಲೀಸ್ ಮಹಾನಿರ್ದೇಶಕ ಒ.ಪಿ ಸಿಂಗ್ ಹೇಳಿದ್ದಾರೆ.