ನವದೆಹಲಿ: ಹನುಮ ಜಯಂತಿ ವೇಳೆ ದಿಲ್ಲಿಯ ಜಹಾಂಗೀರ್ ಪುರಿಯಲ್ಲಿ ಶನಿವಾರ ನಡೆದ ಹಿಂಸಾಚಾರದ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡೂ ಸಮುದಾಯದ 23 ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಸೋಮವಾರ (ಏಪ್ರಿಲ್ 18) ತಿಳಿಸಿದ್ದಾರೆ.
ಇದನ್ನೂ ಓದಿ:ರಾಜ್ ಠಾಕ್ರೆ ಎಚ್ಚರಿಕೆ ಬೆನ್ನಲ್ಲೇ ಮಹಾರಾಷ್ಟ್ರದಲ್ಲಿ ಧ್ವನಿವರ್ಧಕಗಳ ಬಳಕೆಗೆ ಮಾರ್ಗಸೂಚಿ
ಹನುಮ ಜಯಂತಿ ಸಂದರ್ಭ ನಡೆದ ಗಲಭೆಯಲ್ಲಿ ಎಂಟು ಮಂದಿ ಪೊಲೀಸರು ಹಾಗೂ ನಾಗರಿಕರು ಗಾಯಗೊಂಡಿದ್ದರು. ಘಟನೆಗೆ ಸಂಬಂಧಿಸಿದಂತೆ ಈವರೆಗೆ 23 ಜನರನ್ನು ಬಂಧಿಸಲಾಗಿದೆ. ಇದರಲ್ಲಿ ಎರಡೂ ಸಮುದಾಯದವರು ಸೇರಿದ್ದಾರೆ. ಇವರಲ್ಲಿ ಎಂಟು ಮಂದಿ ಕ್ರಿಮಿನಲ್ ಆರೋಪಗಳ ದಾಖಲೆ ಹೊಂದಿದ್ದಾರೆ. ಗಲಭೆ ವಿಚಾರದಲ್ಲಿ ಯಾರೇ ತಪ್ಪಿತಸ್ಥರಾಗಿದ್ದರೂ ಯಾವುದೇ ಜಾತಿ, ಧರ್ಮ, ಸಮುದಾಯ ಪರಿಗಣಿಸದೇ ಕಠಿಣಕ್ರಮ ತೆಗೆದುಕೊಳ್ಳುವುದಾಗಿ ದೆಹಲಿ ಪೊಲೀಸ್ ಕಮಿಷನರ್ ರಾಕೇಶ್ ಅಸ್ಥಾನಾ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಜಹಾಂಗೀರ್ ಪುರ್ ಪ್ರದೇಶದಲ್ಲಿ ಹಿಂಸಾಚಾರ ನಡೆಸಿದ ಪ್ರಕರಣದ ಬಗ್ಗೆ ಕ್ರೈಂ ಬ್ರ್ಯಾಂಚ್ ತನಿಖೆ ನಡೆಸುತ್ತಿದೆ. ಆರೋಪಿಗಳ ಪತ್ತೆಗಾಗಿ 14 ತಂಡಗಳನ್ನು ರಚಿಸಲಾಗಿತ್ತು. ಇಂದು ಘಟನೆ ನಡೆದ ಸ್ಥಳಕ್ಕೆ ವಿಧಿ ವಿಜ್ಞಾನ ಪ್ರಯೋಗಾಲಯದ ನಾಲ್ಕು ತಂಡ ಭೇಟಿ ನೀಡಿದ್ದು, ಸ್ಯಾಂಪಲ್ಸ್ ಸಂಗ್ರಹಿಸಿದೆ. ಸಿಸಿಟಿವಿ ಫೂಟೇಜ್ ಅನ್ನು ಪರಿಶೀಲಿಸಲಾಗಿದೆ ಎಂದು ರಾಕೇಶ್ ಮಾಹಿತಿ ನೀಡಿದ್ದಾರೆ.
ಸಾಮಾಜಿಕ ಜಾಲತಾಣದ ಮೂಲಕ ಕೆಲವು ಜನರು ಶಾಂತಿಭಂಗ ಮಾಡಲು ಯತ್ನಿಸಿದ್ದಾರೆ. ನಾವು ಸಾಮಾಜಿಕ ಜಾಲತಾಣಗಳನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತಿದ್ದೇವೆ. ಯಾರು ಸುಳ್ಳು ಮಾಹಿತಿಯನ್ನು ಹರಡಿದ್ದಾರೋ ಅಂತಹವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಿದ್ದೇವೆ. ಸಾರ್ವಜನಿಕರು ಕೂಡಾ ಯಾವುದೇ ಸುಳ್ಳು ಸುದ್ದಿಯನ್ನು ನಂಬಬಾರದು ಎಂದು ರಾಕೇಶ್ ಈ ಸಂದರ್ಭದಲ್ಲಿ ಮನವಿ ಮಾಡಿಕೊಂಡಿದ್ದಾರೆ.