ಹೊಸದಿಲ್ಲಿ: ನೋಟು ಅಪಮೌಲ್ಯ ಘೋಷಿಸಿ ಒಂದು ವರ್ಷ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಈ ವರೆಗೆ ಒಟ್ಟು 2.24 ಲಕ್ಷ ನಕಲಿ ಕಂಪೆನಿಗಳ ನೋಂದಣಿ ರದ್ದು ಮಾಡಲಾಗಿದೆ ಎಂದು ಕೇಂದ್ರ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ ತಿಳಿಸಿದೆ. 56 ಬ್ಯಾಂಕ್‌ಗಳು ಆರಂಭದಲ್ಲಿ 35 ಸಾವಿರ ಕಂಪೆನಿಗಳು ಮತ್ತು 58 ಸಾವಿರ ಅನುಮಾನಾಸ್ಪದ ಖಾತೆಗಳ ಬಗ್ಗೆ ಸರಕಾರಕ್ಕೆ ವರದಿ ನೀಡಿದ್ದವು. ಇದರ ಆಧಾರದ ಮೇಲೆ ನಡೆಸಿದ ತನಿಖೆ ವೇಳೆ ನೋಟು ಅಪಮೌಲ್ಯದ ಬಳಿಕ ಈ ಕಂಪೆನಿಗಳು ಬ್ಯಾಂಕ್‌ಗಳಲ್ಲಿ 17 ಸಾವಿರ ಕೋಟಿ ರೂ. ಜಮೆ ಮಾಡಿ ಅನಂತರ ಹಿಂಪಡೆದಿದ್ದವು ಎಂಬುದು ತಿಳಿದುಬಂದಿದೆ.
ಈ ಪೈಕಿ ಒಂದು ಕಂಪೆನಿಯಂತೂ 2,134 ಖಾತೆಗಳನ್ನು ಹೊಂದಿತ್ತು. ಅಲ್ಲದೆ ಇನ್ನೊಂದು ಕಂಪೆನಿಯ ಖಾತೆ ನೋಟು ಅಪಮೌಲ್ಯಕ್ಕೂ ಮೊದಲು ನಷ್ಟದಲ್ಲಿತ್ತು. ಆದರೆ ನೋಟು ಅಪ ಮೌಲ್ಯದ ಅನಂತರ ಆ ಖಾತೆಯಲ್ಲಿ 2,484 ಕೋಟಿ ರೂ. ಜಮೆ ಆಗಿತ್ತು.
ಈ ಹಿನ್ನೆಲೆಯಲ್ಲಿ ಕಂಪೆನಿಗಳ ವಿರುದ್ಧ ಹಲವು ಕ್ರಮಗಳನ್ನು ತೆಗೆದು ಕೊಳ್ಳಲಾಗಿದೆ. ಈ ಸಂಸ್ಥೆಗಳ ಬ್ಯಾಂಕ್ ಖಾತೆ ನಿಷ್ಕ್ರಿಯಗೊಳಿಸಲಾಗಿದೆ. ಅಲ್ಲದೆ ಕಂಪೆನಿಗಳ ಚರಾಸ್ತಿ ಮತ್ತು ಸ್ಥಿರಾಸ್ತಿಯ ಸಾಗಣೆ ಮತ್ತು ಮಾರಾಟಕ್ಕೆ ನಿರ್ಬಂಧ ಹೇರಲಾಗಿದೆ. ಅಲ್ಲದೆ ಇಂಥ ಕಂಪೆನಿ ಗಳ ಇತರ ವಹಿವಾಟುಗಳನ್ನು ಸ್ಥಗಿತ ಗೊಳಿಸುವಂತೆಯೂ ರಾಜ್ಯ ಸರಕಾರ ಗಳಿಗೆ ಕೇಂದ್ರ ಸೂಚನೆ ನೀಡಿದೆ.
3 ಲಕ್ಷ ನಿರ್ದೇಶಕರು ಅನರ್ಹ: ಕಾರ್ಪೊರೇಟ್ ವ್ಯವಹಾರಗಳ ಸಚಿ ವಾಲಯ 3.09 ಲಕ್ಷ ನಿರ್ದೇಶಕರನ್ನು ಅನರ್ಹಗೊಳಿಸಿದೆ. ಸತತ ಮೂರು ತ್ತೈಮಾಸಿಕದಲ್ಲೂ ಹಣಕಾಸು ವರದಿ ಯನ್ನು ಈ ಕಂಪೆನಿಗಳ ನಿರ್ದೇ ಶಕರು ಸಲ್ಲಿಸಿರಲಿಲ್ಲ. 2013ರ ಕಂಪೆನಿಗಳ ಕಾಯ್ದೆ ಅಡಿ ಹಣಕಾಸು ವರದಿ ಯನ್ನು ಪ್ರತಿ ತ್ತೈಮಾಸಿಕದಲ್ಲೂ ಸಲ್ಲಿಸು ವುದು ಕಡ್ಡಾಯ. ಸುಮಾರು 3 ಸಾವಿರ ನಿರ್ದೇಶಕರು 20ಕ್ಕೂ ಹೆಚ್ಚು ಕಂಪೆನಿಗಳಲ್ಲಿ ನಿರ್ದೇಶಕರಾಗಿದ್ದಾರೆ. ಅಲ್ಲದೆ ಎರಡಕ್ಕಿಂತ ಹೆಚ್ಚು ಪದರಗಳಲ್ಲಿ ವಿವಿಧ ಕಂಪೆನಿಗಳಲ್ಲಿ ಹೂಡಿಕೆ ಮಾಡಿ ರುವುದೂ ಪತ್ತೆಯಾಗಿದೆ. ನಿರ್ದೇಶಕ ಗುರುತು ಸಂಖ್ಯೆ (ಡಿಐಎನ್)ಅನ್ನು ಆಧಾರ್ ಮತ್ತು ಪಾನ್ ಕಾರ್ಡ್‌ಗೆ ಲಿಂಕ್ ಮಾಡುವ ಮೂಲಕ ನಕಲಿ ನಿರ್ದೇಶಕರನ್ನು ಗುರುತಿಸಲಾಗಿದೆ ಎಂದೂ ಸಚಿವಾಲಯ ಹೇಳಿದೆ.
ಡಿಜಿಟಲ್ ವಹಿವಾಟು ಹೆಚ್ಚಳ
ನೋಟು ಅಪಮೌಲ್ಯದ ಅನಂತರ ಡಿಜಿಟಲ್ ಪೇಮೆಂಟ್ ಕಂಪೆನಿಗಳ ವಹಿವಾಟು ಭಾರೀ ಪ್ರಮಾಣದಲ್ಲಿ ಹೆಚ್ಚಳ ಕಂಡಿದೆ. ಕಳೆದ 12 ತಿಂಗಳಲ್ಲಿ ವಹಿವಾಟು 3 ಪಟ್ಟು ಹೆಚ್ಚಳವಾಗಿದೆ ಎಂದು ಪ್ರಮುಖ ಡಿಜಿಟಲ್ ವಹಿವಾಟು ಕಂಪೆನಿ ಅಟೊಮ್ ಟೆಕ್ನಾಲಜಿಸ್ ನಿರ್ದೇಶಕ ದೇವಂಗ್ ನೆರಲ್ಲಾ ಹೇಳಿದ್ದಾರೆ. ಈ ಹಿಂದೆ ವರ್ಷಂಪ್ರತಿ ಶೇ. 20ರಿಂದ 50ರಷ್ಟು ವಹಿವಾಟು ಹೆಚ್ಚಳವಾಗುತ್ತಿತ್ತು. ಈಗ ಶೇ. 40ರಿಂದ 70ರಷ್ಟು ಹೆಚ್ಚಳ ಕಾಣುತ್ತಿದೆ.