Advertisement

ಮೈಸೂರು: ಭಾರೀ ಮಳೆಗೆ ನೆಲಕ್ಕುರುಳಿದ 220 ವರ್ಷದ ಅರಮನೆ ಕೋಟೆ

04:23 PM Oct 19, 2022 | Team Udayavani |

ಮೈಸೂರು: ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ಶಿಥಿಲಾವಸ್ಥೆಯಲ್ಲಿದ್ದ ಮೈಸೂರು ಅರಮನೆಯ ಕೋಟೆ ಮಂಗಳವಾರ ಮುಂಜಾನೆ ಕುಸಿದು ಬಿದ್ದಿದೆ. ನಗರದ ಅಂಬಾವಿಲಾಸ ಅರಮನೆಯ ಸುತ್ತಲು ಇರುವ 30 ಅಡಿ ಎತ್ತರದ 20 ಅಡಿ ಅಗಲ ವಿಸ್ತೀರ್ಣದ ಕೋಟೆ ಫಿರಂಗಿ ತಾಲೀಮಿನ ವೇಳೆ ಉಂಟಾಗುವ ಭಾರೀ ಸದ್ದಿನಿಂದ ಬಿರುಕು ಬಿಟ್ಟು ಶಿಥಿಲಗೊಂಡಿತ್ತು.

Advertisement

ಜೊತೆಗೆ ಇತ್ತೀಚೆಗೆ ಸುರಿದ ಭಾರಿ ಮಳೆ, ಅಸಮರ್ಪಕ ನಿರ್ವಹಣೆಯಿಂದಾಗಿ ಕೋಟೆ ಮಾರಮ್ಮ ದೇಗುಲ ಸಮೀಪ 20 ಅಡಿ ಉದ್ದದಷ್ಟು ಕೋಟೆ ಮಂಗಳವಾರ ಮುಂಜಾನೆ ಕುಸಿದಿದೆ. ಕಲ್ಲು, ಮಣ್ಣು ಮತ್ತು ಸುರ್ಕಿ ಗಾರೆಯಿಂದ ನಿರ್ಮಾಣ ಮಾಡಿರುವ ಅರಮನೆಯ ಕೋಟೆಗೆ ಬರೋಬ್ಬರಿ 220 ವರ್ಷ ಆಗಿದೆ. ಇಂದಿಗೂ ಗಟ್ಟಿಮುಟ್ಟಾಗಿ ನಿಂತಿದೆ. ಆದರೆ, ಇತ್ತೀಚೆಗೆ ಕೋಟೆಯ ಮೇಲೆ ಮತ್ತು ಸುತ್ತಲು ಇರುವ ಗಿಡಗಂಟಿ ತೆರವು, ವಾಕಿಂಗ್‌ ಪಾತ್‌ನಲ್ಲಿ ನೀರು ನಿಲ್ಲದಂತೆ ನಿರ್ವಹಣೆ ಮಾಡದ ಹಿನ್ನೆಲೆ ಕೋಟೆ ಶಿಥಿಲಗೊಂಡು ಕುಸಿದಿದೆ.

ಅರಮನೆ ಮಂಡಳಿ ಕಾಲ ಕಾಲಕ್ಕೆ ಸಮರ್ಪಕ ನಿರ್ವಹಣೆ ಮಾಡಿಕೊಂಡು ಬಂದರೆ, ಇನ್ನೂ ನೂರು ವರ್ಷ ಗಟ್ಟಿಮುಟ್ಟಾಗಿ ಇರಲಿದೆ ಎಂದು ಇತಿಹಾಸ ತಜ್ಞ ಪ್ರೊ.ರಂಗರಾಜು ಉದಯವಾಣಿಗೆ ತಿಳಿಸಿದ್ದಾರೆ.

ಕಾರಣ ಹಲವು: ಪ್ರಸ್ತುತ ಕೋಟೆ ಕುಸಿದಿರುವ ಸಮೀಪದಲ್ಲೇ ಇರುವ ಮಾರಮ್ಮ ದೇವಾಲಯ ಬಳಿ ಪ್ರತಿ ದಸರಾ ಉತ್ಸವಕ್ಕೂ ಮುನ್ನಾ ಮೂರು ಹಂತದಲ್ಲಿ ಆನೆ ಮತ್ತು ಅಶ್ವಗಳಿಗೆ 21 ಸುತ್ತು ಫಿರಂಗಿ ಸಿಡಿಮದ್ದು ತಾಲೀಮು ನಡೆಸಲಾಗುತ್ತದೆ. ಈ ವೇಳೆ ಹೊರಡುವ ಭಾರಿ ಪ್ರಮಾಣದ ಸದ್ದಿನಿಂದ (105.3 ಡೆಸಿಬಲ್‌) ಹಳೆಯದಾದ ಕೋಟೆ ಬಿರುಕು ಬಿಟ್ಟಿತ್ತು. ಇದನ್ನು ಗಮನಿಸಿದ ಅರಮನೆ ಮಂಡಳಿ 2022ರ ದಸರಾ ಉತ್ಸವದ ಎರಡು ಮತ್ತು ಮೂರನೇ ಹಂತದ ಫಿರಂಗಿ ತಾಲೀಮನ್ನು ಬೇರೆಡೆ ನಡೆಸುವಂತೆ ನಗರ ಪೊಲೀಸ್‌ ಆಯುಕ್ತರಿಗೆ ಮನವಿ ಮಾಡಿತ್ತು. ಬಳಿಕ ನಗರದ ವಸ್ತು ಪ್ರದರ್ಶನ ಆವರಣದಲ್ಲಿ ತಾಲೀಮು ನಡೆಸಲಾಗಿತ್ತು.

ನಿರ್ವಹಣೆ ಕೊರತೆ: ಕಟ್ಟಡ ಕುಸಿತಕ್ಕೆ ಇದಿಷ್ಟೇ ಅಲ್ಲದೆ, ಇತ್ತೀಚೆಗೆ ಸುರಿದ ಭಾರೀ ಮಳೆ ಹಾಗೂ ನಿರ್ವಹಣೆಯ ಕೊರತೆಯೂ ಎದ್ದು ಕಾಣುತ್ತಿದೆ. ಕೋಟೆಯಲ್ಲಿ ಬಿರುಕು ಕಾಣಿಸಿಕೊಂಡ ಬಳಿಕ ಅದನ್ನು ಸುರುಕಿ ಗಾರೆ ಹಾಕಿ ಮುಚ್ಚದೆ ಅಥವಾ ಪ್ಲಾಸ್ಟಿಕ್‌ ಹೊದಿಕೆ ಹಾಕದೇ ನಿರ್ಲಕ್ಷ್ಯ ವಹಿಸಿದ ಹಿನ್ನೆಲೆ ಕಳೆದೊಂದು ವಾರದಿಂದ ಸುರಿದ ಭಾರಿ ಮಳೆಯಿಂದ ನೀರು ಬಿರುಕಿನಲ್ಲಿ ಸೇರಿ, ಕಟ್ಟಡ ಮತ್ತಷ್ಟು ಶಿಥಿಲಗೊಂಡು ಕುಸಿದಿದೆ ಎಂದು ತಜ್ಞರು ತಿಳಿಸಿದ್ದಾರೆ.

Advertisement

220 ವರ್ಷ ಹಳೆಯದು: ಈಗಿರುವ ಅಂಬಾವಿಲಾಸ ಅರಮನೆಯ ಜಾಗದಲ್ಲಿ ಇದ್ದ ಸೌಂದರ್ಯ ವಿಲಾಸ ಅರಮನೆ 1790ಕ್ಕೂ ಮುನ್ನಾ ಸಿಡಿಲು ಬಡಿದು ಸಂಪೂರ್ಣ ನಾಶವಾಗಿತ್ತು. ಬಳಿಕ ಟಿಪ್ಪುನ ಆಳ್ವಿಕೆ ಕೊನೆಗೊಂಡು ಮುಮ್ಮಡಿ ಕೃಷ್ಣರಾಜ ಒಡೆಯರ್‌ ಅವರು ರಾಜ್ಯಭಾರ ನಡೆಸುವಾಗ ಸೌಂದರ್ಯ ವಿಲಾಸ ಅರಮನೆ ಇದ್ದ ಜಾಗದಲ್ಲಿ 1801ರಲ್ಲಿ ಮರದ ಅರಮನೆ ಕಟ್ಟಿಸಿದರು. ನಂತರ ಅರಮನೆಯ ಸುತ್ತ 1802ರಲ್ಲಿ ಕಟ್ಟು, ಮಣ್ಣು ಮತ್ತು ಸುರ್ಕಿ ಗಾರೆ ಬಳಿಸಿ
ಬಲಿಷ್ಟವಾದ ಕೋಟೆ ನಿರ್ಮಿಸಿದ್ದರು. ಇದಾದ ನಂತರ ಆಕಸ್ಮಿಕ ಬೆಂಕಿಗೆ ಮರದ ಅರಮನೆ ನಾಶವಾಗಿತ್ತು. ಬಳಿಕ ಈಗಿನ ಅಂಬಾ ವಿಲಾಸ ಅರಮನೆ ನಿರ್ಮಾಣ ಮಾಡಲಾಗಿತ್ತು. ಹೀಗೆ 220 ವರ್ಷಗಳಿಂದ ತನ್ನ ಅಸ್ತಿತ್ವವನ್ನು ಕೋಟೆ ಸಧ್ಯಕ್ಕೆ ಶಿಥಿಲಗೊಂಡಿದ್ದು, ಮತ್ತಷ್ಟು ಕುಸಿಯುವ ಹಂತದಲ್ಲಿದೆ.

ಟಾರ್ಪಲ್‌ ಹೊದಿಕೆ: ಕೋಟೆ ಕುಸಿದು ಬಿದ್ದಿರುವ ಸಂಬಂಧ ಪತ್ರಿಕೆಗೆ ಪ್ರತಿಕ್ರಿಯಿಸಿರುವ ಅರಮನೆ ಮಂಡಳಿ ನಿರ್ದೇಶಕ ಟಿ.ಎಸ್‌.ಸುಬ್ರಹ್ಮಣ್ಯ, ವರಾಹ ದ್ವಾರ ಹಾಗೂ ಜಯಮಾರ್ತಾಂಡ ದ್ವಾರದ ಮಧ್ಯದಲ್ಲಿರುವ ಕುಸಿದ ಭಾಗವು, ಕೋಟೆಯ ಆಗ್ನೇಯ ಮೂಲೆಯಲ್ಲಿದೆ. 20 ಮೀಟರ್‌ ಅಗಲ ಹಾಗೂ 7 ಮೀಟರ್‌ ಎತ್ತರದ ಗೋಡೆ ಕುಸಿದಿದೆ. ಅರಮನೆ ಮಂಡಳಿಯು ಕೋಟೆ ಭಾಗಕ್ಕೆ ಟಾರ್ಪಲ್‌ ಹೊದಿಸಿ ಮತ್ತೆ ಕುಸಿಯದಂತೆ ಸಂರಕ್ಷಣಾ ಕ್ರಮ ತೆಗೆದುಕೊಂಡಿದೆ ಎಂದು ಹೇಳಿದ್ದಾರೆ.

ಕೋಟೆ ಮಾರಮ್ಮ ದೇವಾಲಯ
ಸಮೀಪ ಅರಮನೆ ಕೋಟೆ ಕುಸಿದಿದ್ದು, ಶಿಥಿಲಗೊಂಡಿರುವ ಕೋಟೆಯ 50 ಮೀಟರ್‌ ಉದ್ದದ ದುರಸ್ತಿಗೆ 39 ಲಕ್ಷ ರೂ. ಮೊತ್ತದ ಟೆಂಡರ್‌ ಕರೆಯಲಾಗಿತ್ತು. ಇದರಲ್ಲಿ ಕುಸಿದ ಭಾಗವು ಸೇರಿತ್ತು. ಬುಧವಾರದಿಂದ ಕಾಮಗಾರಿ ಆರಂಭಗೊಳ್ಳಲಿದೆ. ಈಗಾಗಲೇ ದುರಸ್ತಿ ಕಾರ್ಯ ನಡೆದಿದೆ. ಪಾರಂಪರಿಕ ಕಟ್ಟಡವಾಗಿರುವುದರಿಂದ ಮೂಲ ಸ್ವರೂಪ ಹಾಗೂ ಕಟ್ಟಲು ಬಳಸಲಾಗಿದ್ದ ವಸ್ತುಗಳಿಂದಲೇ ದುರಸ್ತಿ ಕಾಮಗಾರಿ ನಡೆಯಲಿದೆ. 90 ದಿನಗಳೊಳಗೆ ಕಾಮಗಾರಿ ಮುಗಿಯಲಿದೆ.
ಟಿ.ಎಸ್‌. ಸುಬ್ರಹ್ಮಣ್ಯ, ನಿರ್ದೇಶಕರು,
ಅರಮನೆ ಮಂಡಳಿ.

Advertisement

Udayavani is now on Telegram. Click here to join our channel and stay updated with the latest news.

Next