ನವದೆಹಲಿ: ರಷ್ಯಾದಿಂದ ಖರೀದಿಸಲಿರುವ ಎಸ್-400 ಕ್ಷಿಪಣಿ ರಕ್ಷಣಾ ವ್ಯವಸ್ಥೆ ಖರೀದಿ ಬಗ್ಗೆ ಅಮೆರಿಕದ ಆಕ್ಷೇಪ ವಿಚಾರವನ್ನು ಸೆ.6ರಂದು ನಡೆಯಲಿರುವ 2+2 ಮಾತುಕತೆಯಲ್ಲಿ ಪ್ರಸ್ತಾಪ ಮಾಡಲಾಗುತ್ತದೆ. ಈ ಬಗ್ಗೆ ಹಿರಿಯ ಅಧಿಕಾರಿಯೊಬ್ಬರು ನವದೆಹಲಿಯಲ್ಲಿ ಭಾನುವಾರ ಮಾಹಿತಿ ನೀಡಿದ್ದಾರೆ.
ಅಮೆರಿಕ ಸರ್ಕಾರ ಈಗಾಗಲೇ ಪ್ರಕಟಿಸಿದಂತೆ, ಭಾರತವು ರಷ್ಯಾದ ಜತೆ ಹೊಸತಾಗಿ ರಕ್ಷಣಾ ಒಪ್ಪಂದ ಮಾಡಿದರೆ ಅದಕ್ಕೆ ವಿನಾಯಿತಿ ನೀಡಲು ಸಾಧ್ಯವಾಗದು ಎಂಬ ಪೆಂಟಗನ್‌ನ ಇಂಗಿತದ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ.
ಪ್ರಾದೇಶಿಕ ಭದ್ರತೆಗೆ ಹಿನ್ನೆಲೆಯಲ್ಲಿ ಭಾರತಕ್ಕೆ ವಿನಾಯಿತಿ ನೀಡಬೇಕು ಎಂಬ ಅಂಶವನ್ನು ಮಾತುಕತೆಯಲ್ಲಿ ಪ್ರಸ್ತಾಪಿಸಲಾಗುತ್ತದೆ. ಟ್ರಂಪ್ ಸರ್ಕಾರ ಕಳೆದ ವರ್ಷ ಜಾರಿಯಾಗಿರುವ ಅಮೆರಿಕದ ವಿರುದ್ಧದ ಹಿತಾಸಕ್ತಿಗಳನ್ನು ಎದುರಿಸುವ ದಿಗ್ಬಂಧನ ಕಾಯ್ದೆ (ಕಾಟ್ಸಾ) ಮೂಲಕ ರಷ್ಯಾ ವಿರುದ್ಧ ನಿರ್ಬಂಧ ಹೇರಿದೆ. ಹೀಗಾಗಿ, ರಷ್ಯಾಕ್ಕೆ ಜಾರಿ ಮಾಡಿದ ನಿಯಮವನ್ನು ಭಾರತಕ್ಕೆ ಜಾರಿ ಮಾಡಬಾರದು ಎಂಬ ವಿಚಾರವನ್ನು ಅಮೆರಿಕ ಸಚಿವದ್ವಯರಿಗೆ ಮನವರಿಕೆ ಮಾಡಿಕೊಡಲಾಗುತ್ತದೆ.
ಇನ್ನೊಂದೆಡೆ ಇರಾನ್ ಜತೆಗಿನ ವಹಿವಾಟು ಬೇಡ ಎಂದು ಟ್ರಂಪ್ ಸರ್ಕಾರ ಆದೇಶ ನೀಡಿರುವ ಹಿನ್ನೆಲೆಯಲ್ಲಿ, ಭಾರತ ಮುಂದಿನ ದಿನಗಳಲ್ಲಿ ಉಂಟಾಗುವ ಯಾವುದೇ ಸಮಸ್ಯೆಯನ್ನು ಎದುರಿಸಲು ಸಿದ್ಧ ಎಂದು ಹಣಕಾಸು ಸಚಿವಾಲಯದ ಪ್ರಧಾನ ವಿತ್ತ ಸಲಹೆಗಾರ ಸಂಜೀವ್ ಸನ್ಯಾಲ್ ತಿಳಿಸಿದ್ದಾರೆ. ಇರಾನ್‌ಗೆ ನಿಷೇಧ ಹೇರಿದರೆ ಅದರಿಂದ ತೀರಾ ಪ್ರತಿಕೂಲದ ಸ್ಥಿತಿ ಉಂಟಾಗದು ಎಂದು ಹೇಳಿದ್ದಾರೆ ಸನ್ಯಾಲ್.