Advertisement

ಸಾರಥಿ-4ರಡಿ ಸಿಗುತ್ತೆ  22 ಸೇವೆ

04:46 PM Jun 08, 2018 | Team Udayavani |

ಹುಬ್ಬಳ್ಳಿ: ವಾಹನ ಚಾಲನಾ ಪರವಾನಗಿ ಸೇರಿದಂತೆ 22 ಸೇವೆಗಳನ್ನು ಮಧ್ಯವರ್ತಿ ಗಳಿಲ್ಲದೆ ನೇರವಾಗಿ ಸೌಲಭ್ಯ ಒದಗಿಸಲು ಆರ್‌ಟಿಒ ಕಚೇರಿಗಳಲ್ಲಿ ಸಾರಥಿ-4 ಆನ್‌ ಲೈನ್‌ ಸೇವೆ ದೊರೆಯಲಿದ್ದು, ಅವಳಿನಗರದಲ್ಲಿನ ಎರಡು ಆರ್‌ಟಿಒ ಕಚೇರಿಗಳಲ್ಲಿ ಸಾರಥಿ-4 ಅಳವಡಿಕೆಯಾಗಿದೆ.

Advertisement

ಕೇಂದ್ರ ಸರ್ಕಾರ ಸಾರಥಿ-4 ಎನ್ನುವ ಆನ್‌ಲೈನ್‌ ವೆಬ್‌ಸೈಟ್‌ ವ್ಯವಸ್ಥೆ ಜಾರಿಗೊಳಿಸಿದ್ದು, ರಾಜ್ಯಾದ್ಯಂತ ಎಲ್ಲಾ ಆರ್‌ಟಿಒ ಕಚೇರಿಗಳಲ್ಲಿ ಅನುಷ್ಠಾನಗೊಂಡಿದೆ. ಜೂ.4ರಿಂದ ಸಾರಥಿ ಆನ್‌ಲೈನ್‌ ಸೇವೆ ಆರಂಭವಾಗಿದ್ದು, ಆರಂಭದಲ್ಲಿ 22 ಸೇವೆಗಳನ್ನು ಅಡಕಗೊಳಿಸಿದೆ. ವಾಹನ ಕಲಿಕಾ ಚಾಲನಾ ಪರವಾನಗಿ (ಎಲ್‌ಎಲ್‌ ಆರ್‌)ಯಿಂದ ಹಿಡಿದು ಪ್ರತಿಯೊಂದು ಸೇವೆಯನ್ನು ಆನ್‌ಲೈನ್‌ ಅರ್ಜಿ ಸಲ್ಲಿಸಿ ನೇರವಾಗಿ ಮನೆ ವಿಳಾಸಕ್ಕೆ ದಾಖಲೆಗಳನ್ನು ಪಡೆಯಬಹುದಾಗಿದೆ.

ಏನಿದು ಸಾರಥಿ?: ಹಿಂದೆ ಚಾಲನಾ ಪರವಾನಗಿ ಹಾಗೂ ಕಲಿಕಾ ಪರವಾನಗಿ ಪಡೆಯಲು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಮಾತ್ರ ಅವಕಾಶ ನೀಡಲಾಗಿತ್ತು. ಇದೀಗ //parivahan.gov.in.sarathiservices ಸಾರಥಿ-4 ರಲ್ಲಿ ಆನ್‌ಲೈನ್‌ ಅರ್ಜಿ ಸಲ್ಲಿಸಿ, ಪೂರಕ ದಾಖಲೆಗಳನ್ನು ಕೂಡ ಆನ್‌ಲೈನ್‌ ಮೂಲಕವೇ ಅಪ್‌ಲೋಡ್‌ ಮಾಡಿ, ಸೇವೆಯ ಶುಲ್ಕವನ್ನು ಆನ್‌ ಲೈನ್‌ ಮೂಲಕ ಅಥವಾ ಕಚೇರಿಗೆ ತೆರಳಿ ಪಾವತಿಸಬಹುದಾಗಿದೆ. ಮೂಲ ದಾಖಲೆಗಳನ್ನು ಸ್ಕ್ಯಾನ್‌ ಮಾಡಿ ಅಪ್‌ ಲೋಡ್‌ ಮಾಡಿ ಶುಲ್ಕ ಪಾವತಿಸಿದ ನಂತರ ಕಲಿಕಾ ಚಾಲನಾ ಪರವಾನಗಿ ಪರೀಕ್ಷೆಗೆ ಹಾಜರಾಗಲು ಸಮಯ ನಿಗದಿ ಮಾಡಿಕೊಳ್ಳಬಹುದು. ಚಾಲನಾ ಪರವಾನಗಿ ಪತ್ರ ಇನ್ನಿತರ ಸೇವೆಗಳಿಗೆ ಅಗತ್ಯ ಮಾಹಿತಿ ನೀಡಿಕೆ ಪ್ರಕ್ರಿಯೆ ಮುಗಿದ ನಂತರ ನೋಂದಾಯಿಸಿದ ಮೊಬೈಲ್‌ ಸಂಖ್ಯೆಗೆ ಅರ್ಜಿ ಸಂಖ್ಯೆ ಹಾಗೂ ಪರೀಕ್ಷೆಗೆ ಹಾಜರಾಗುವ ದಿನಾಂಕ, ಸಮಯದ ಸಂದೇಶ ಬರುತ್ತದೆ. 

ಸಾರಥಿ ಅನುಷ್ಠಾನ: ಜಿಲ್ಲೆಯಲ್ಲಿರುವ ಪೂರ್ವ ಹಾಗೂ ಪಶ್ಚಿಮ ಆರ್‌ಟಿಒ ಕಚೇರಿಗಳಲ್ಲಿ ಕಲಿಕಾ ಚಾಲನಾ ಪರವಾನಗಿ ಪರೀಕ್ಷೆಗೆ ಪೂರಕವಾಗಿ ತಂತ್ರಾಂಶ ಆಧಾರಿತ ಪರಿಕ್ಷಾ ಕೊಠಡಿಯನ್ನು ಸಿದ್ಧಗೊಳಿಸಲಾಗಿದೆ. ಚಾಲನಾ ಕಲಿಕಾ ಪರವಾನಗಿ ಪತ್ರ ಪಡೆಯುವ ಪರೀಕ್ಷೆಯಲ್ಲಿ 15 ನಿಮಿಷದ ಪರೀಕ್ಷೆಯಲ್ಲಿ 15 ಪ್ರಶ್ನೆಗಳಿಗೆ ಉತ್ತರಿಸಬೇಕು. ಇದರಲ್ಲಿ 10 ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಿದರೆ ಮಾತ್ರ ಉತ್ತೀರ್ಣ. ಕನ್ನಡ, ಹಿಂದಿ, ಇಂಗ್ಲಿಷ್‌ ಸೇರಿದಂತೆ 7 ಭಾಷೆಯಲ್ಲಿ ಯಾವುದಾದರೂ ಆಯ್ಕೆ ಮಾಡಿಕೊಳ್ಳಬಹುದು. ಪರೀಕ್ಷೆ ಪ್ರಕ್ರಿಯೆ ಪಾರದರ್ಶಕವಾಗಿ ನಡೆಯಲಿದ್ದು, ಅಧಿಕಾರಿಗಳ ಅನುಮೋದನೆಯೊಂದಿಗೆ ಸಂಜೆ 6 ಗಂಟೆಗೆ ವೆಬ್‌ಸೈಟ್‌ ಮೂಲಕ ಚಾಲನಾ ಕಲಿಕಾ ಪರವಾನಗಿ ಪತ್ರ ಪಡೆಯಬಹುದಾಗಿದೆ.

ಜು.2ಕ್ಕೆ ಚಾಲನಾ ಪರವಾನಗಿ: ಸದ್ಯ ಕಲಿಕಾ ಚಾಲನಾ ಪರವಾನಗಿ ಮಾತ್ರ ಸಾರಥಿ-4 ರಲ್ಲಿ ಆರಂಭವಾಗಿದ್ದು, ಜು.2ರಿಂದ ಚಾಲನಾ ಪರವಾನಗಿ ಸೇವೆ ಆರಂಭಗೊಳ್ಳಲಿದೆ. ಇತರೆ ಸೇವೆಗಳನ್ನು ಸಾಫ್ಟ್ವೇರ್‌ಗೆ ಅಳವಡಿಸುವ ಕಾರ್ಯ ಪ್ರಗತಿಯಲ್ಲಿದೆ. ಸಾರಥಿಯಲ್ಲಿ ಎಲ್‌ ಎಲ್‌ಆರ್‌ ಪಡೆದವರು ಮಾತ್ರ ನಕಲು ಪ್ರತಿ, ವಿಳಾಸ ಬದಲು, ಹೆಸರು ತಿದ್ದುಪಡಿ ಸೇರಿದಂತೆ ಇತರೆ ಸೇವೆಗಳನ್ನು ಪಡೆಯಬಹುದು. ಹಳೆಯ ದಾಖಲೆಗಳ ನಕಲು ಪ್ರತಿಗಳು ಇದೇ ವ್ಯವಸ್ಥೆಯಲ್ಲಿ ದೊರಕಿಸುವ ನಿಟ್ಟಿನಲ್ಲಿ ಡಾಟಾ ಸಂಗ್ರಹ ಕಾರ್ಯ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಆರ್‌ಟಿಒ ಕಚೇರಿಗಳು ಕಾಗದ ರಹಿತ ಕಚೇರಿ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ.

Advertisement

‌ಕಲಿಕಾ ಚಾಲನಾ ಪರವಾನಗಿಯಿಂದ ಹಿಡಿದು ಪ್ರತಿಯೊಂದು ಸೇವೆಗಳನ್ನು ಸಾರಥಿ-4 ವ್ಯವಸ್ಥೆಯಲ್ಲಿ ಪಡೆಯುವುದು ಕಡ್ಡಾಯ. ಇದರಿಂದ ಜನರಿಗೆ ಸಾಕಷ್ಟು ಅನುಕೂಲವಾಗಿದೆ. ಆಯ್ಕೆ ಮಾಡಿಕೊಂಡ ಸಮಯದಲ್ಲಿ ಚಾಲನಾ ಪರೀಕ್ಷೆಗೆ ಹಾಜರಾಗಬಹುದು. ಸದ್ಯ ಕಲಿಕಾ ಚಾಲನಾ ಪರವಾನಗಿ ನೀಡುತ್ತಿದ್ದು, ಜು.2ರ ನಂತರ ಎಲ್ಲಾ ಸೇವೆಗಳು ಸಾರಥಿಯಲ್ಲಿ ದೊರೆಯಲಿವೆ. 
ಅಪ್ಪಯ್ಯ ನಾಲತ್ವಾಡಮಠ,
ಪ್ರಾದೇಶಿಕ ಸಾರಿಗೆ ಅಧಿಕಾರಿ, ಧಾರವಾಡ ಪೂರ್ವ

Advertisement

Udayavani is now on Telegram. Click here to join our channel and stay updated with the latest news.

Next