ಉಡುಪಿ: ಕಳೆದ ಎರಡು ದಿನಗಳಿಂದ ಯಾವುದೇ ಕೋವಿಡ್ 19 ಸೋಂಕಿತರು ಪತ್ತೆಯಾಗದೇ ನಿರಾಳವಾಗಿದ್ದ ಉಡುಪಿ ಜಿಲ್ಲೆಯಲ್ಲಿಂದು ಮತ್ತೆ ಸೋಂಕು ಕಾಣಿಸಿಕೊಂಡಿದೆ. ಇಂದು ಮತ್ತೆ 22 ಜನರಿಗೆ ಕೋವಿಡ್ ಸೋಂಕು ತಾಗಿರುವುದು ದೃಢವಾಗಿದೆ.
ಇಂದಿನ ಹೊಸ 22 ಸೋಂಕು ಪ್ರಕರಣಗಳೊಂದಿಗೆ ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 969ಕ್ಕೆ ಏರಿಕೆಯಾಗಿದೆ. ಸದ್ಯ ರಾಜ್ಯದ ಒಟ್ಟು ಸೋಂಕಿತರ ಪಟ್ಟಿಯಲ್ಲಿ ಜಿಲ್ಲೆ ಮೊದಲ ಸ್ಥಾನದಲ್ಲೇ ಮುಂದುವರಿದಿದೆ. ಪ್ರಕರಣಗಳ ಸಂಖ್ಯೆ ಹೀಗೆ ಮುಂದುವರಿದಲ್ಲಿ ಇನ್ನೆರಡು ದಿನದಲ್ಲಿ ಸೋಂಕಿತರ ಸಂಖ್ಯೆ ಸಾವಿರ ದಾಟುವಲ್ಲಿ ಅನುಮಾನವಿಲ್ಲ.
ಜಿಲ್ಲೆಯ ಇಂದಿನ 22 ಪ್ರಕರಣಗಳ ಪೈಕಿ 20 ಪ್ರಕರಣಗಳು ಮಹಾರಾಷ್ಟ್ರದಿಂದ ಬಂದವರಾಗಿದ್ದರೆ, ಇಬ್ಬರ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ ಎಂದು ವರದಿಯಾಗಿದೆ.
ಜಿಲ್ಲೆಯಲ್ಲಿ ಇಂದು 22 ಹೊಸ ಸೋಂಕು ಪ್ರಕರಣಗಳು ದೃಢವಾಗಿದ್ದರೆ, 22 ಜನ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ಮರಳಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೆ 349 ಮಂದಿ ಸೋಂಕಿತರು ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಸದ್ಯ 619 ಸಕ್ರಿಯ ಪ್ರಕರಣಗಳಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ರಾಜ್ಯದಲ್ಲಿಂದು 204 ಹೊಸ ಪ್ರಕರಣಗಳು ದೃಢವಾಗಿದೆ. ಇದರಿಂದ ಒಟ್ಟು ಸೋಂಕಿತರ ಸಂಖ್ಯೆ 6245ಕ್ಕೆ ಏರಿಕೆಯಾಗಿದೆ. ಇಂದು ರಾಜ್ಯದಲ್ಲಿ 114 ಮಂದಿ ಬಿಡುಗಡೆಯಾಗಿ ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ. ಇದುವರೆಗೆ ರಾಜ್ಯದಲ್ಲಿ ಒಟ್ಟು 2976 ಸೋಂಕಿತರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 72 ಮಂದಿ ಸೋಂಕಿನ ಕಾರಣದಿಂದ ಮರಣ ಹೊಂದಿದ್ದರೆ, ರಾಜ್ಯದಲ್ಲಿ ಇಬ್ಬರು ಸೋಂಕಿತರು ಕೋವಿಡ್-19 ಅಲ್ಲದ ಅನ್ಯ ಕಾರಣದಿಂದ ಸಾವನ್ನಪ್ಪಿದ್ದಾರೆ.