ಪ್ರಯಾಗರಾಜ್ (ಯುಪಿ): ಮಾಘಮೇಳದ ಎರಡನೇ ದಿನವಾದ ಮಕರ ಸಂಕ್ರಾಂತಿಯಂದು ಸಂಜೆ 4 ಗಂಟೆಯವರೆಗೆ ಸುಮಾರು 22 ಲಕ್ಷ ಭಕ್ತರು ಇಲ್ಲಿ ಗಂಗಾಸ್ನಾನ ಮಾಡಿದರು ಎಂದು ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.
ಶನಿವಾರ 14 ಲಕ್ಷ ಸೇರಿದಂತೆ 36 ಲಕ್ಷಕ್ಕೂ ಹೆಚ್ಚು ಜನರು ವಾರಾಂತ್ಯದಲ್ಲಿ ಪುಣ್ಯ ಸ್ನಾನ ಮಾಡಿದ್ದಾರೆ. ಸಂಜೆ 4 ಗಂಟೆಯವರೆಗೆ ಸುಮಾರು 22 ಲಕ್ಷ ಜನರು ಗಂಗಾ ಮತ್ತು ಸಂಗಮದಲ್ಲಿ ಸ್ನಾನ ಮಾಡಿದರು ಎಂದು ಪ್ರಯಾಗರಾಜ್ ಮೇಳ ಪ್ರಾಧಿಕಾರದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮುಂಜಾನೆ 4 ಗಂಟೆಯಿಂದಲೇ ಗಂಗಾನದಿ ಹಾಗೂ ಸಂಗಮದ ದಡದಲ್ಲಿರುವ 14 ಘಾಟ್‌ಗಳಲ್ಲಿ ಭಕ್ತರ ದಂಡು ಹರಿದು ಬಂದಿತ್ತು.
ಪುರಾಣಗಳು ಮಕರ ಸಂಕ್ರಾಂತಿಯನ್ನು ದೇವರುಗಳ ದಿನವೆಂದು ವಿವರಿಸುತ್ತದೆ ಮತ್ತು ಈ ದಿನದಂದು ಮಾಡಿದ ದಾನವನ್ನು ನೂರು ಪಟ್ಟು ಹಿಂತಿರುಗಿಸಲಾಗುತ್ತದೆ. ಈ ದಿನದಂದು ಶುದ್ಧ ತುಪ್ಪ ಮತ್ತು ಹೊದಿಕೆಗಳನ್ನು ದಾನ ಮಾಡುವುದರಿಂದ ಮೋಕ್ಷಕ್ಕೆ ಕಾರಣವಾಗುತ್ತದೆ ಎಂದು ಕಾಶಿ ಸುಮೇರು ಪೀಠಾಧೀಶ್ವರ ಸ್ವಾಮಿ ನರೇಂದ್ರಾನಂದ ಸರಸ್ವತಿ ಹೇಳಿದರು.
ಭಕ್ತರು ಸುಲಭವಾಗಿ ಸ್ನಾನ ಮಾಡಲು ಅನುಕೂಲವಾಗುವಂತೆ ಈ ವರ್ಷ ಒಟ್ಟು 6,000 ಅಡಿ ಉದ್ದದ 14 ಘಾಟ್‌ಗಳನ್ನು ನಿರ್ಮಿಸಲಾಗಿದೆ. ಭಕ್ತರ ಸುಗಮ ಸಂಚಾರಕ್ಕಾಗಿ ಗಂಗಾನದಿಯ ಮೇಲೆ ಐದು ಪೊಂಟೂನ್ ಸೇತುವೆಗಳನ್ನು ನಿರ್ಮಿಸಲಾಗಿದ್ದು, 13 ಪೊಲೀಸ್ ಠಾಣೆಗಳು ಮತ್ತು 38 ಔಟ್‌ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದೆ. ಜಾತ್ರೆಯ ಭದ್ರತೆಗಾಗಿ ಇಬ್ಬರು ಪೊಲೀಸ್ ವರಿಷ್ಠಾಧಿಕಾರಿಗಳು, ಮೂವರು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳು, ಒಂಬತ್ತು ಸರ್ಕಲ್ ಅಧಿಕಾರಿಗಳು ಮತ್ತು 5 ಸಾವಿರ ಪೊಲೀಸ್ ಸಿಬಂದಿಗಳನ್ನು ನಿಯೋಜಿಸಲಾಗಿದೆ ಎಂದು ಮಾಘ ಮೇಳದ ಆಡಳಿತಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮುಂದಿನ ಮಾಘಮೇಳ ಸ್ನಾನವು ಜನವರಿ 21 ರಂದು ಮೌನಿ ಅಮವಾಸ್ಯೆ, ಜನವರಿ 26 ರಂದು ಬಸಂತ್ ಪಂಚಮಿ, ಫೆಬ್ರವರಿ 5 ರಂದು ಮಾಘಿ ಪೂರ್ಣಿಮೆ ನಡೆಯುತ್ತದೆ. ಇದು ಫೆಬ್ರವರಿ 18 ರಂದು ಮಹಾ ಶಿವರಾತ್ರಿಯ ಸ್ನಾನದೊಂದಿಗೆ ಮುಕ್ತಾಯಗೊಳ್ಳುತ್ತದೆ.