Advertisement

ಭಾರತ-ಬಾಂಗ್ಲಾ 22 ಒಪ್ಪಂದ; ಟೀಸ್ತಾ ನದಿ ನೀರು ಒಪ್ಪಂದವಿಲ್ಲ 

03:45 AM Apr 09, 2017 | |

ನವದೆಹಲಿ: ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಬಾಂಧವ್ಯ ವೃದ್ಧಿಯ ಪ್ರಮುಖ ಹೆಜ್ಜೆಯೆಂಬಂತೆ, ಶನಿವಾರ ಉಭಯ ದೇಶಗಳು ನಾಗರಿಕ ಪರಮಾಣು ಸಹಕಾರ, ರಕ್ಷಣೆ ಸೇರಿದಂತೆ 22 ಒಪ್ಪಂದಗಳಿಗೆ ಸಹಿ ಹಾಕಿವೆ.

Advertisement

ಭಾರತ ಪ್ರವಾಸದಲ್ಲಿರುವ ಬಾಂಗ್ಲಾ ಪ್ರಧಾನಿ ಶೇಖ್‌ ಹಸೀನಾ ಅವರು ನಮ್ಮ ಪ್ರಧಾನಿ ಮೋದಿ ಅವರೊಂದಿಗೆ ಮಾತುಕತೆ ನಡೆಸಿದ ಬಳಿಕ, ಅವರ ಸಮ್ಮುಖದಲ್ಲೇ ಎರಡೂ ದೇಶಗಳು ಈ ಒಪ್ಪಂದವನ್ನು ಮಾಡಿಕೊಂಡಿವೆ. ಸೇನಾ ಸಾಮಗ್ರಿಗಳ ಖರೀದಿಗಾಗಿ ಭಾರತದಿಂದ ಬಾಂಗ್ಲಾಗೆ 500 ದಶಲಕ್ಷ ಡಾಲರ್‌(3,213.50 ಕೋಟಿ ರೂ.) ಸಾಲ, ಬಾಂಗ್ಲಾದಲ್ಲಿನ ಯೋಜನೆಗಳ ಅನುಷ್ಠಾನಕ್ಕಾಗಿ 4.5 ಶತಕೋಟಿ ಡಾಲರ್‌(28,900 ಕೋಟಿ ರೂ.) ವಿನಾಯ್ತಿ ದರದ ಸಾಲ ಕೂಡ ಈ ಒಪ್ಪಂದಗಳಲ್ಲಿ ಸೇರಿವೆ.

ಆದರೆ, ಎರಡೂ ದೇಶಗಳ ನಡುವಿನ ನದಿ ನೀರು ಹಂಚಿಕೆ ವಿವಾದಕ್ಕೆ ಕಾರಣವಾದ “ಟೀಸ್ತಾ ನೀರು ಹಂಚಿಕೆ’ ಕುರಿತು ಯಾವುದೇ ಒಪ್ಪಂದ ನಡೆದಿಲ್ಲ. ಈ ಬಗ್ಗೆ ಮಾತನಾಡಿರುವ ಪ್ರಧಾನಿ ಮೋದಿ, “7 ವರ್ಷಗಳಿಂದಲೂ ಇರುವ ವಿವಾದವನ್ನು ಆದಷ್ಟು ಬೇಗ ಪರಿಹರಿಸುವ ವಿಶ್ವಾಸವಿದೆ’ ಎಂದಿದ್ದಾರೆ. 2011ರಲ್ಲಿ ಅಂದಿನ ಪ್ರಧಾನಿ ಮನಮೋಹನ್‌ಸಿಂಗ್‌ ಅವರು ಬಾಂಗ್ಲಾ ಪ್ರವಾಸ ಮಾಡಿದ್ದಾಗ ಟೀಸ್ತಾ ನದಿ ನೀರು ಒಪ್ಪಂದಕ್ಕೆ ಸಹಿ ಹಾಕಲು ಮುಂದಾಗಿದ್ದರು. ಆದರೆ, ಪಶ್ಚಿಮ ಬಂಗಾಳದ ವಿರೋಧದಿಂದಾಗಿ ಕೊನೇ ಕ್ಷಣದಲ್ಲಿ ಅದು ಸಾಧ್ಯವಾಗಿರಲಿಲ್ಲ.

ಪ್ರಾಯೋಗಿಕ ರೈಲಿಗೆ ಚಾಲನೆ: ಮಾತುಕತೆ ಬಳಿಕ ಪ್ರಧಾನಿ ಮೋದಿ ಹಾಗೂ ಹಸೀನಾ ಅವರು ಕೋಲ್ಕತ್ತಾದಿಂದ ಬಾಂಗ್ಲಾದ ಖುಲಾ° ನಗರದ ನಡುವೆ ಸಂಚರಿಸುವ ಬಸ್‌, ಪ್ರಯಾಣಿಕ ರೈಲಿನ ಪ್ರಾಯೋಗಿಕ ಸಂಚಾರಕ್ಕೆ ಚಾಲನೆ ನೀಡಿದರು. ಈ ವೇಳೆ, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರೂ ಇದ್ದರು. 

ಪಾಕ್‌ ವಿರುದ್ಧ ಮೋದಿ ವಾಗ್ಧಾಳಿ:  1971ರ ಬಾಂಗ್ಲಾ ಸ್ವಾತಂತ್ಯÅ ಸಮರದಲ್ಲಿ ಮಡಿದ ಹುತಾತ್ಮರ ಕುಟುಂಬಗಳ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಪ್ರಧಾನಿ, “ಭಾರತ-ಬಾಂಗ್ಲಾ ಸಂಬಂಧವು ರಕ್ತದಲ್ಲೇ ಇರುವಂಥದ್ದು. ನಮ್ಮ ಜನರ ಸುರಕ್ಷಿತ ಭವಿಷ್ಯಕ್ಕಾಗಿ ಇರುವಂಥ ಬಂಧವಿದು,’ ಎಂದರು. ಇದೇ ವೇಳೆ, ಉಗ್ರವಾದಕ್ಕೆ ಪ್ರೇರಣೆ ಕೊಡುತ್ತಿರುವ ಪಾಕಿಸ್ತಾನದ ವಿರುದ್ಧವೂ ಅವರು ಕಿಡಿಕಾರಿದರು. “ಅದು ಭಯೋತ್ಪಾದನೆಯನ್ನು ಹುಟ್ಟುಹಾಕುವ, ಸ್ಫೂರ್ತಿ ನೀಡುವ ಮತ್ತು ಬೆಳೆಸುವ ದೇಶ. ಮಾನವೀಯತೆ ಅವರ ಆದ್ಯತೆ ಅಲ್ಲ. ಬದಲಿಗೆ ಪ್ರತ್ಯೇಕತಾವಾದ ಮತ್ತು ಉಗ್ರವಾದವೇ ಆ ದೇಶದ ಜೀವಾಳ,’ ಎಂದು ಪಾಕಿಸ್ತಾನದ ಹೆಸರನ್ನು ಪ್ರಸ್ತಾಪಿಸದೇ ವಾಗ್ಧಾಳಿ ನಡೆಸಿದರು.

Advertisement

“ಸ್ಟೆಪ್‌ ಡೌನ್‌’ ಎಂದ ನಿರೂಪಕ!
ಕಾರ್ಯಕ್ರಮದ ನಿರೂಪಕ ಬಳಸಿದ “ಸ್ಟೆಪ್‌ ಡೌನ್‌’ ಎಂಬ ಪದವು ಪ್ರಧಾನಿ ಮೋದಿ ಹಾಗೂ ಶೇಖ್‌ ಹಸೀನಾ ಅವರನ್ನು ಒಂದು ಕ್ಷಣ ದಂಗುಬಡಿಸಿದ ಘಟನೆ ನಡೆದಿದೆ. ಉಭಯ ನಾಯಕರ ಜಂಟಿ ಸುದ್ದಿಗೋಷ್ಠಿ ಬಳಿಕ ಇಬ್ಬರಿಗೂ ವೇದಿಕೆಯಿಂದ ಕೆಳಗಿಳಿಯುವಂತೆ ಕಾರ್ಯ ಕ್ರಮದ ನಿರೂಪಕರು ಮನವಿ ಮಾಡಬೇಕಿತ್ತು. ಈ ವೇಳೆ ಅವರು, “ಪ್ಲೀಸ್‌ ಸ್ಟೆಪ್‌ ಅವೇ ಫ್ರಂ ದಿ ಡಯಾಸ್‌'(ದಯವಿಟ್ಟು ವೇದಿಕೆಯನ್ನು ಬಿಟ್ಟುಕೊಡಬೇಕಾಗಿ ವಿನಂತಿ) ಎನ್ನುವ ಬದಲು ತಪ್ಪಾಗಿ, “ಐ ರಿಕ್ವೆಸ್ಟ್‌ ಬೋತ್‌ ಪ್ರೈಮ್‌ ಮಿನಿಸ್ಟರ್ಸ್‌ ಟು ಸ್ಟೆಪ್‌ ಡೌನ್‌’ ಎಂದರು. ಸ್ಟೆಪ್‌ ಡೌನ್‌ ಎನ್ನುವುದು ಪದತ್ಯಾಗ ಮಾಡಿ ಎಂದು ಕೋರಿಕೊಳ್ಳುವ ಪದ. ನಿರೂಪಕನಿಂದ ಈ ಮಾತು ಹೊರಬೀಳುತ್ತಿದ್ದಂತೆಯೇ, ಪ್ರಧಾನಿ ಮೋದಿ, ಶೇಖ್‌ ಹಸೀನಾ ಸೇರಿದಂತೆ ಇಡೀ ಸುದ್ದಿಗೋಷ್ಠಿ ನಗೆಗಡಲಲ್ಲಿ ತೇಲಿದ್ದು ಕಂಡುಬಂತು.

Advertisement

Udayavani is now on Telegram. Click here to join our channel and stay updated with the latest news.

Next