ಬೆಂಗಳೂರು: ಹತ್ತೂಂಬತ್ತನೇ ಶತಮಾನ ಇಂಗ್ಲೆಂಡ್‌ಗೆ ಸೇರಿದ್ದರೆ, 20ನೇ ಶತಮಾನ ಅಮೆರಿಕಕ್ಕೆ ಸೇರಿತ್ತು. ಆದರೆ 21ನೇ ಶತಮಾನ ಭಾರತಕ್ಕೆ ಸೇರಬೇಕು ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್‌ಜೋಷಿ ಹೇಳಿದ್ದಾರೆ.
ನಗರದಲ್ಲಿ ಎಜುಕೇಷನ್ ಪ್ರಮೋಷನ್ ಸೊಸೈಟಿ ಆಫ್ ಇಂಡಿಯಾ (ಇಪಿಎಸ್‌ಐ) ಮತ್ತು ಕಾಮೆಡ್ ಕೆ ಆಯೋಜಿಸಿದ್ದ ಜಾಗತಿಕ “ಸ್ಪರ್ಧಾತ್ಮಕವಾಗಿ ಭಾರತೀಯ ಉನ್ನತ ಶಿಕ್ಷಣ ವನ್ನು ರೂಪಿಸುವುದು’ ಎಂಬ ಕಾರ್ಯಾಗಾರದ ಸಮಾರೋಪದಲ್ಲಿ ಅವರು ಮಾತನಾಡಿದರು.
2004ರಿಂದ 2014ರ ಮಧ್ಯೆ ಐದು ದುರ್ಬಲ ಆರ್ಥಿಕತೆಗಳಲ್ಲಿ ಒಂದಾಗಿದ್ದ ಭಾರತ ಇಂದು ಐದು ದೊಡ್ಡ ಆರ್ಥಿಕತೆಗಳಲ್ಲಿ ಒಂದಾಗಿ ಹೊರಹೊಮ್ಮಿದೆ. ಶೀಘ್ರದಲ್ಲೇ ಮೂರನೇ ದೊಡ್ಡ ಆರ್ಥಿಕತೆಯಾಗಲಿದೆ. ಮಾನವ ಸಂಪನ್ಮೂಲ ಮತ್ತು ಉತ್ಪಾದನೆ ಚಟುವಟಿಕೆಗಳಲ್ಲಿ ಭಾರತಕ್ಕೆ ಸವಾಲಾಗಿದ್ದ ಚೀನದ ವಿಶ್ವಾಸಾರ್ಹತೆಗೆ ಕುಂದುಂಟಾಗಿರುವುದರ ಪ್ರಯೋಜನವನ್ನು ಭಾರತ ಪಡೆಯುತ್ತಿದೆ ಎಂದರು.
ವೈದ್ಯಕೀಯ ಶಿಕ್ಷಣ ಸಚಿವ ಡಾ| ಶರಣ ಪ್ರಕಾಶ್ ಪಾಟೀಲ್ ಮಾತನಾಡಿ, ನಿರುದ್ಯೋಗ ಸಮಸ್ಯೆ ಹೆಚ್ಚುತ್ತಿದೆ. ಎಂಜಿನಿಯರಿಂಗ್ ಪೂರ್ಣಗೊಳಿಸಿರುವವರಿಗೂ ಉದ್ಯೋಗ ದೊರೆಯುತ್ತಿಲ್ಲ. ಮಷೀನ್ ಟೂಲ್ಸ್ ಕೋರ್ಸ್ ಮಾಡಿದ ಎಲ್ಲರಿಗೂ ಉದ್ಯೋಗ ಸಿಗುತ್ತಿರುವುದು ಇಂದಿನ ಔದ್ಯೋಗಿಕ ಪ್ರಪಂಚದಲ್ಲಿ ಕೌಶಲಕ್ಕಿರುವ ಬೇಡಿಕೆಯನ್ನು ತೋರಿಸುತ್ತದೆ ಎಂದರು.
ಅಖೀಲ ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್ ಅಧ್ಯಕ್ಷ ಡಾ| ಜಿ.ಟಿ. ಸೀತಾರಾಂ ಸಹಿತ ಪ್ರಮುಖರು ಉಪಸ್ಥಿತರಿದ್ದರು.