ಸುರತ್ಕಲ್: ಸುರತ್ಕಲ್ ಪರಿಸರದಲ್ಲಿ 2006ರಲ್ಲಿ ಎಡಿಬಿಯಿಂದ 218 ಕೋಟಿ ರೂ. ಸಾಲ ಪಡೆದು ಮಾಡಿರುವ ಒಳಚರಂಡಿ ಕಾಮಗಾರಿ ಸಂಪೂರ್ಣ ವಿಫಲವಾಗಿದೆ. ಇದರ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸ ಲಾಗುವುದು; ಮುಖ್ಯಮಂತ್ರಿ ಮತ್ತು ನಗರಾಭಿವೃದ್ಧಿ ಕಾರ್ಯದರ್ಶಿ ಯೊಂದಿಗೆ ಚರ್ಚಿಸಿ ಸಿಒಡಿ ತನಿಖೆಗೆ ಶಿಫಾರಸು ಮಾಡಲಾಗುವುದು ಎಂದು ನಗರಾಭಿವೃದ್ಧಿ ಸಚಿವ ರೋಶನ್ ಬೇಗ್ ಹೇಳಿದರು.
ಉದಯವಾಣಿಯೊಂದಿಗೆ ಸುರತ್ಕಲ್ ನಲ್ಲಿ ಮಾತನಾಡಿದ ಅವರು, ಸುರತ್ಕಲ್ ಒಳಚರಂಡಿ ಯೋಜನೆ ಒಂದು ಗೋಲ್‌ಮಾಲ್ ಎಂದು ಬಣ್ಣಿಸಿದರು. ಬಡ್ಡಿಗೆ ಹಣ ಪಡೆದು ಜನರ ಒಳಿತಿಗಾಗಿ ಕಾಮಗಾರಿ ಮಾಡಲಾಗಿತ್ತು. ಆದರೆ ಕಾಮಗಾರಿ ಕಳಪೆಯಾಗಿ ರೇಚಕ ಸ್ಥಾವರಗಳು ಸೋರಿಕೆಯಾಗುತ್ತಿವೆ. ತಯಾರಿಸಿದ ಯೋಜನೆ ವಿಫಲವಾಗಿದೆ. ಗುತ್ತಿಗೆ ದಾರರು ಕಳಪೆ ಕಾಮಗಾರಿ ನಡೆಸಿದ್ದಾರೆ ಎಂದರು.
ಆಸಂದರ್ಭ ಇದ್ದ ಅಧಿಕಾರಿಗಳು ಸರಿಯಾಗಿ ಸ್ಥಳಕ್ಕೆ ಬಂದು ತನಿಖೆ ಮತ್ತು ಪರಿಶೀಲನೆ ನಡೆಸಿಲ್ಲ. ಇದರ ಕನ್ಸಲ್ಟೆನ್ಸಿ ಪಡೆದವರು 4ರಿಂದ 5 ಕೋಟಿ ರೂ. ಪಡೆದಿದ್ದಾರೆ ಆದರೂ ಕಾಮಗಾರಿ ಮಾತ್ರ ವಿಫಲವಾಗಿರುವುದು ಅಧಿಕಾರಿಗಳ ವೈಫಲ್ಯ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇವರೆಲ್ಲರನ್ನು ಬಾಧ್ಯಸ್ಥರನ್ನಾಗಿ ಮಾಡಿ ನಿವೃತ್ತ ಅಧಿಕಾರಿಗಳ ಸಹಿತ ತನಿಖೆ ನಡೆಸಲು ನಿರ್ಧರಿಸ ಲಾಗುವುದು ಎಂದರು. ಈ ವೈಫಲ್ಯ ದಿಂದ ಒಳಚರಂಡಿ ಸೋರಿಕೆಯಾಗಿ ಪರಿಸರದ ಬಾವಿ ನೀರು ಹಾಳಾಗಿದೆ. ಇದು ಆತಂಕದ ವಿಚಾರ. ಸ್ಥಳೀಯರಿಗೆ ಈಗಾಗಲೇ ಪಾಲಿಕೆ ವತಿಯಿಂದ ನಳ್ಳಿ ನೀರು ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ರೇಚಕ ಸ್ಥಾವರ ವೀಕ್ಷಣೆ ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಸಚಿವ ರೋಶನ್ ಬೇಗ್ ಅವರು ಸುರತ್ಕಲ್ ವ್ಯಾಪ್ತಿಯ ಹೊಸಬೆಟ್ಟು ರೇಚಕ ಸ್ಥಾವರ ವೀಕ್ಷಿಸಿದರು. ಸೋರಿಕೆಯಾಗುತ್ತಿರುವ ಸ್ಥಾವರ ಕಂಡು ಸರಿಯಾದ ಮಾಹಿತಿ ನೀಡಲು ವಿಫಲರಾದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. 2006ರಲ್ಲಿ ಆದ ಕಾಮಗಾರಿ ವೈಫಲ್ಯದ ವಿವಿರ ನೀಡುವಂತೆ ಸೂಚಿಸಿದರು. ಬಳಿಕ ಗುಡ್ಡಕೊಪ್ಲ ರೇಚಕ ಸ್ಥಾವರಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಒಳಚರಂಡಿ ಸೋರಿಕೆಯಾಗಿ ಸುತ್ತಮುತ್ತಲಿನ ಬಾವಿ ನೀರು ಹಾಳಾದ ಪರಿಣಾಮ ಜನರು ಪ್ರತಿಭಟನೆ ನಡೆಸಿ ಮುಚ್ಚುವುದಕ್ಕೆ ಒತ್ತಡ ಹೇರಿರುವುದನ್ನು ಸಚಿವರ ಗಮನಕ್ಕೆ ತರಲಾಯಿತು.
ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ನಜೀರ್, ಹಿರಿಯ ಅಭಿಯಂತ ಗಣೇಶ್, ಎಂಜಿನಿಯರ್‌ಗಳು, ನಗರಾಭಿವೃದ್ಧಿ ಇಲಾಖಾ ಅಧಿಕಾರಿಗಳು, ಕುಡ್ಸೆಂಪ್ ಅಧಿಕಾರಿಗಳು ಉಪಸ್ಥಿತರಿದ್ದರು.