ಜಲೇಸರ್ (ಉ.ಪ್ರ.): ಅಯೋಧ್ಯೆಯಲ್ಲಿ ರಾಮಮಂದಿರಕ್ಕೆ ಭೂಮಿಪೂಜೆ ನಡೆದ ವಾರದೊಳಗೆಯೇ ಅಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ಶ್ರೀರಾಮನಿಗೆ ಭಾವೈಕ್ಯವೇ ಮೂರ್ತಿವೆತ್ತ ಉಡುಗೊರೆಯೊಂದು ಸಿದ್ಧ ಗೊಳ್ಳುತ್ತಿದೆ.
2.1 ಟನ್ ಭಾರದ ಬೃಹತ್ ಗಂಟೆ ತಯಾರಿಯಲ್ಲಿ ಹಿಂದೂ- ಮುಸ್ಲಿಂ ಕುಶಲಕರ್ಮಿಗಳು ತೊಡಗಿದ್ದಾರೆ.
ಉತ್ತರ ಪ್ರದೇಶದ ಜಲೇಸರ್‌ನ ದೌ ದಯಾಳ್ ದೇಗುಲಗಳ ಗಂಟೆ ತಯಾರಿಸುವ ವೃತ್ತಿಯವರು. 30 ವರ್ಷಗಳ ವೃತ್ತಿಜೀವನದಲ್ಲಿ ಅವರು ಇಷ್ಟೊಂದು ತೂಕದ ಗಂಟೆಯನ್ನು ತಯಾರಿಸುತ್ತಿರುವುದು ಇದೇ ಮೊದಲು. ಈ ಮಹಾಗಂಟೆಗೆ ಮುಸಲ್ಮಾನ ಕುಶಲಕರ್ಮಿ ಇಕ್ಬಾಲ್ ಮಿಸ್ತ್ರಿ ಅವರು ಆಕರ್ಷಕ ವಿನ್ಯಾಸ- ಹೊಳಪು ನೀಡುತ್ತಿರುವುದು ವಿಶೇಷ.
ಭಾರತದಲ್ಲೇ ಅತೀ ತೂಕದ್ದು
ಈ ಭಾರೀ ಗಂಟೆಗೆ ತಗಲುವ ವೆಚ್ಚ 21 ಲಕ್ಷ ರೂ.! ಒಟ್ಟು 25 ಹಿಂದೂ- ಮುಸ್ಲಿಂ ಕುಶಲಕರ್ಮಿಗಳು ಗಂಟೆಗೆ ಜೀವ ತುಂಬಲಿದ್ದಾರೆ. ದಯಾಳ್- ಮಿಸ್ತ್ರಿ ಜಂಟಿಯಾಗಿ ಈ ಹಿಂದೆ ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ಉಡುಗೊರೆಯಾಗಿ ನೀಡಲು 51 ಕಿಲೋ ತೂಕದ ಗಂಟೆ ನಿರ್ಮಿಸಿದ್ದರು.
ಉತ್ತರಾ ಖಂಡದ ಕೇದಾರನಾಥ ದೇಗುಲಕ್ಕಾಗಿ 101 ಕಿಲೋ ಭಾರದ ಗಂಟೆ ತಯಾರಿಸಿದ್ದರು. ಈಗ ನಿರ್ಮಿಸುತ್ತಿರುವ ಅಯೋಧ್ಯೆಯ ಗಂಟೆ ಭಾರತದಲ್ಲೇ ಅತೀ ತೂಕದ್ದು. ಇದು ಬರೇ ಹಿತ್ತಾಳೆಯ ಗಂಟೆಯಲ್ಲ; ಅಷ್ಟಧಾತುಗಳನ್ನು ಒಳಗೊಂಡ ವಿಶಿಷ್ಟ ಗಂಟೆ. ಇದನ್ನು ಚಿನ್ನ, ಬೆಳ್ಳಿ, ತಾಮ್ರ, ಸತು, ಸೀಸ, ಕಬ್ಬಿಣ, ತವರ ಮತ್ತು ಪಾದರಸಗಳ ಮಿಶ್ರಣದಿಂದ ತಯಾರಿಸಲಾಗುತ್ತಿದೆ.