ಒಟ್ಟಾವ: ಕೆಲಸಕ್ಕೆ ಹೋಗುವ ವೇಳೆ ಗುಂಡಿನ ದಾಳಿಗೊಳಗಾದ 21 ವರ್ಷದ ಭಾರತೀಯ ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ಕೆನಡಾದ ಟೋರಾಂಟೋ ನಗರದಲ್ಲಿ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ಇಸ್ಲಾಂ ಗೆ ಯುವಕನ ಮತಾಂತರ : ಯುಪಿಯಲ್ಲಿ ವೈದ್ಯನ ವಿರುದ್ಧ ಕೇಸ್ ದಾಖಲು
ಗುರುವಾರ ಸಂಜೆ ಸೈಂಟ್ ಜೇಮ್ಸ್ ನಗರದ ಶೇರ್ಬೋನ್ ಟಿಟಿಸಿ ನಿಲ್ದಾಣದ ಗ್ಲೇನ್ ರಸ್ತೆಯ ಪ್ರವೇಶ ದ್ವಾರದಲ್ಲಿ ವಿದ್ಯಾರ್ಥಿ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಲಾಗಿತ್ತು. ಮೃತನನ್ನು ಕಾರ್ತಿಕ್ ವಾಸುದೇವ್ ಎಂದು ಗುರುತಿಸಲಾಗಿದೆ.
ಹಲವು ಗುಂಡುಗಳು ಬಿದ್ದಿದ್ದು, ಕಾರ್ತಿಕ್ ನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕಾರ್ತಿಕ್ ಸಾವನ್ನಪ್ಪಿರುವುದಾಗಿ ಟೋರಾಂಟೊ ಪೊಲೀಸ್ ಸರ್ವೀಸ್ ಪ್ರಕಟಣೆಯಲ್ಲಿ ತಿಳಿಸಿದೆ.
ಕಾರ್ತಿಕ್ ಗಾಜಿಯಾಬಾದ್ ನಿವಾಸಿಯಾಗಿದ್ದು, ಗುರುವಾರ ಬೆಳಗ್ಗೆ ತಾನು ಕೆಲಸಕ್ಕೆ ಹೋಗುತ್ತಿರುವುದಾಗಿ ಕಾರ್ತಿಕ್ ತಿಳಿಸಿರುವುದಾಗಿ ಆತನ ತಂದೆ ಜಿತೇಶ್ ವಾಸುದೇವ್ ಪತ್ರಿಕೆಯೊಂದಕ್ಕೆ ಮಾಹಿತಿ ನೀಡಿದ್ದಾರೆ.
ಕಾರ್ತಿಕ್ ವಿದ್ಯಾರ್ಥಿಯಾಗಿದ್ದು, ಆತ ಮೆಕ್ಸಿಕನ್ ರೆಸ್ಟೋರೆಂಟ್ ವೊಂದರಲ್ಲಿ ಪಾರ್ಟ್ ಟೈಂ ಕೆಲಸ ಮಾಡುತ್ತಿರುವುದಾಗಿ ವರದಿ ತಿಳಿಸಿದೆ. ಟಿವಿ ಚಾನೆಲ್ ನಲ್ಲಿ ಸುದ್ದಿ ಪ್ರಸಾರವಾದಾಗ ನಮಗೆ ಕಾರ್ತಿಕ್ ಸಾವನ್ನಪ್ಪಿರುವ ವಿಷಯ ತಿಳಿದು ಆಘಾತಕ್ಕೊಳಗಾಗಿರುವುದಾಗಿ ಜಿತೇಶ್ ತಿಳಿಸಿದ್ದಾರೆ.
ಕೆನಡಾದಲ್ಲಿ ಭಾರತೀಯ ವಿದ್ಯಾರ್ಥಿ ಗುಂಡಿನ ದಾಳಿಯಲ್ಲಿ ಸಾವನ್ನಪ್ಪಿರುವ ಘಟನೆ ಬಗ್ಗೆ ವಿದೇಶಾಂಗ ಸಚಿವ ಎಸ್.ಜೈಶಂಕರ್ ಸಂತಾಪ ವ್ಯಕ್ತಪಡಿಸಿದ್ದಾರೆ. ಇದೊಂದು ದುರಂತ, ಕಾರ್ತಿಕ್ ಕುಟುಂಬಕ್ಕೆ ತೀವ್ರ ಸಂತಾಪ ಸೂಚಿಸುವುದಾಗಿ ಜೈಶಂಕರ್ ಟ್ವೀಟ್ ನಲ್ಲಿ ತಿಳಿಸಿದ್ದಾರೆ.