ಚಂಡೀಗಢ್:ಕಲಬೆರಕೆ (ಕಳ್ಳಭಟ್ಟಿ) ಮದ್ಯಸೇವಿಸಿ ಸುಮಾರು 21 ಮಂದಿ ಸಾವನ್ನಪ್ಪಿರುವ ಘಟನೆ ಪಂಜಾಬ್ ನ ಹಲವಾರು ಜಿಲ್ಲೆಗಳಲ್ಲಿ ನಡೆದಿದ್ದು, ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸುವಂತೆ ಮುಖ್ಯಮಂತ್ರಿ ಕ್ಯಾ.ಅಮರೀಂದರ್ ಸಿಂಗ್ ಆದೇಶ ನೀಡಿರುವುದಾಗಿ ಪಿಟಿಐ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.
ಆರೋಪಿಗಳನ್ನು ಯಾವುದೇ ಕಾರಣಕ್ಕೂ ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿ ಸಿಂಗ್ ಟ್ವೀಟ್ ಮೂಲಕ ತಿಳಿಸಿದ್ದಾರೆ.
ಅಮೃತ್ ಸರ್, ಗುರುದಾಸ್ ಪುರ್ ಹಾಗೂ ತಾರನ್ ತಾರಾನ್ ನಲ್ಲಿ ಸಂಭವಿಸಿರುವ ಶಂಕಿತ ಕಳ್ಳಭಟ್ಟಿ ಸೇವಿಸಿ ಸಾವನ್ನಪ್ಪಿರುವ ಪ್ರಕರಣದ ಬಗ್ಗೆ ನ್ಯಾಯಾಂಗ ತನಿಖೆ ನಡೆಸಲು ಜಲಂಧರ್ ವಿಭಾಗದ ಕಮಿಷನರ್ ಅವರನ್ನು ನೇಮಕ ಮಾಡಲಾಗಿದೆ. ಯಾರೇ ಆರೋಪಿತರಾಗಿರಲಿ ಅವರಿಗೆ ಶಿಕ್ಷೆ ಖಚಿತ ಎಂದು ಸಿಂಗ್ ಟ್ವೀಟ್ ನಲ್ಲಿ ಸ್ಪಷ್ಟಪಡಿಸಿದ್ದಾರೆ.
ಕಳ್ಳಭಟ್ಟಿ ಸೇವನೆಯಿಂದ ಬುಧವಾರ ರಾತ್ರಿಯಿಂದಲೇ ಅಮೃತ್ ಸರ್, ಬಾಟ್ಲಾ ಮತ್ತು ತಾರನ್ ತಾರಾನ್ ಜಿಲ್ಲೆಗಳಲ್ಲಿ ಜನರು ಸಾವನ್ನಪ್ಪಿರುವ ಸುದ್ದಿ ವರದಿಯಾಗುತ್ತಿತ್ತು ಎಂದು ವರದಿ ವಿವರಿಸಿದೆ.