ವಾಷಿಂಗ್ಟನ್ ಡಿಸಿ: ಮೂರು ನಗರಗಳ ಪ್ರವಾಸದಲ್ಲಿ ಅಮೆರಿಕದಲ್ಲಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಭಾರತದಲ್ಲಿ ವಿರೋಧ ಪಕ್ಷಗಳ ಒಗ್ಗಟ್ಟಿನ ಕುರಿತು ಮಾತನಾಡಿದ್ದಾರೆ. 2024 ರ ಸಾರ್ವತ್ರಿಕ ಚುನಾವಣೆಯ ಫಲಿತಾಂಶವು ಜನರನ್ನು ಚಕಿತಗೊಳಿಸಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
“ಮುಂದಿನ ಎರಡು ವರ್ಷಗಳಲ್ಲಿ ಕಾಂಗ್ರೆಸ್ ಪಕ್ಷವು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತದೆ ಎಂದು ನಾನು ಭಾವಿಸುತ್ತೇನೆ. ಫಲಿತಾಂಶ ಜನರನ್ನು ಆಶ್ಚರ್ಯಗೊಳಿಸುತ್ತದೆ ಎಂದು ನಾನು ಭಾವಿಸುತ್ತೇನೆ” ಎಂದು ರಾಹುಲ್ ಗಾಂಧಿ ವಾಷಿಂಗ್ಟನ್ ಡಿಸಿಯಲ್ಲಿ ಹೇಳಿದರು.
ಭಾರತದಲ್ಲಿ ಪ್ರತಿಪಕ್ಷಗಳ ಏಕತೆಯ ಬಗ್ಗೆ ಮಾತನಾಡುತ್ತಾ, “ಭಾರತದಲ್ಲಿ ಪ್ರತಿಪಕ್ಷಗಳು ಚೆನ್ನಾಗಿ ಒಗ್ಗೂಡಿವೆ. ಇನ್ನೂ ಹೆಚ್ಚು ಹೆಚ್ಚು ಒಗ್ಗೂಡುತ್ತಿದೆ ಎಂದು ನಾನು ಭಾವಿಸುತ್ತೇನೆ. ನಾವು ಎಲ್ಲಾ ವಿರೋಧ ಪಕ್ಷಗಳೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ. ಸಾಕಷ್ಟು ಒಳ್ಳೆಯ ಕೆಲಸಗಳು ನಡೆಯುತ್ತಿವೆ.” ಎಂದರು.
ಇದನ್ನೂ ಓದಿ:Someshwara Beach ನೈತಿಕ ಪೊಲೀಸ್ ಗಿರಿ ಪ್ರಕರಣ: ಐವರು ಪೊಲೀಸ್ ವಶಕ್ಕೆ
ಬಹುಪಾಲು ಸಮಾನ ಮನಸ್ಕ ಹಲವು ವಿರೋಧ ಪಕ್ಷಗಳು ಈಗ 2024 ರ ನಿರ್ಣಾಯಕ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸರ್ಕಾರವನ್ನು ಎದುರಿಸಲು ಕೈಜೋಡಿಸುತ್ತಿವೆ. ಅಧಿಕಾರದಲ್ಲಿರುವ ಬಿಜೆಪಿ ವಿರುದ್ಧ ಪ್ರತಿಪಕ್ಷಗಳನ್ನು ಒಗ್ಗೂಡಿಸುವ ಪ್ರಯತ್ನದಲ್ಲಿ, ಜೂನ್ 12 ರಂದು ಪಾಟ್ನಾದಲ್ಲಿ “ಸಮಾನ ಮನಸ್ಸಿನ ರಾಜಕೀಯ ಪಕ್ಷಗಳ” ಸಮಾವೇಶ ನಡೆಯಲಿದೆ. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಸಭೆಯ ಅಧ್ಯಕ್ಷತೆ ವಹಿಸುವ ಸಾಧ್ಯತೆ ಇದೆ.