ನವದೆಹಲಿ: ಲೋಕಸಭೆ ಚುನಾವಣೆಯ ಅಂತಿಮ ಹಂತದ ಮತದಾನ ಕೆಲವೇ ಗಂಟೆಗಳಲ್ಲಿ ಮುಕ್ತಾಯಗೊಳ್ಳುವ ಮೂಲಕ ಅಭ್ಯರ್ಥಿಗಳ ಭವಿಷ್ಯ ಮತಯಂತ್ರದಲ್ಲಿ ಭದ್ರಗೊಳ್ಳಲಿದ್ದು, ಜೂನ್ 4ರಂದು ಫಲಿತಾಂಶ ಹೊರಬೀಳಲಿದೆ. ಏತನ್ಮಧ್ಯೆ ಸಂಜೆ ಚುನಾವಣೋತ್ತರ ಸಮೀಕ್ಷೆಗಳು ಪ್ರಕಟವಾಗಲಿದ್ದು, ದೇಶಾದ್ಯಂತ ಭರ್ಜರಿ ಬೆಟ್ಟಿಂಗ್ ಶುರುವಾಗಿದೆ.
ಇದನ್ನೂ ಓದಿ:Bigg Boss OTT 3: ನಿರೂಪಕರಾಗಿ ಅನಿಲ್ ಕಪೂರ್ ಎಂಟ್ರಿ; ಇವರೇ ನೋಡಿ ಸಂಭಾವ್ಯ ಸ್ಪರ್ಧಿಗಳು
ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಎಷ್ಟು ಸ್ಥಾನ ಗೆಲ್ಲಲಿದೆ, INDIA ಬ್ಲಾಕ್ ಮೈತ್ರಿ ಎಷ್ಟು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಬಹುದು ಎಂಬುದರ ಬಗ್ಗೆ ಫಲೋಡಿ ಸಟ್ಟಾ ಬಜಾರ್ ಭವಿಷ್ಯ ನುಡಿದಿದೆ.
ಈ ಮೊದಲು ಬಿಜೆಪಿ ಉತ್ತರಪ್ರದೇಶದ ಒಟ್ಟು 80 ಸ್ಥಾನಗಳಲ್ಲಿ 75ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂಬುದಾಗಿ ಫಲೋಡಿ ಸಟ್ಟಾ ಬಜಾರ್ ತಿಳಿಸಿತ್ತು. ಆದರೆ ಪರಿಷ್ಕೃತ ಲೆಕ್ಕಾಚಾರದ ಪ್ರಕಾರ ಬಿಜೆಪಿ 55ರಿಂದ 65 ಸ್ಥಾನ ಪಡೆಯಲಿದ್ದು, INDIA ಬ್ಲಾಕ್ 15ರಿಂದ 25 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದು ತಿಳಿಸಿದೆ.
2019ರ ಲೋಕಸಭೆ ಚುನಾವಣೆಯಲ್ಲಿ ಉತ್ತರಪ್ರದೇಶದಲ್ಲಿ ಬಿಜೆಪಿ 62 ಸ್ಥಾನಗಳಲ್ಲಿ ಜಯಗಳಿಸಿದ್ದು, ಸಮಾಜವಾದಿ ಮತ್ತು ಬಹುಜನ ಸಮಾಜವಾದಿ ಪಕ್ಷ 15 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು.
ಭಾರತೀಯ ಜನತಾ ಪಕ್ಷ ಒಟ್ಟು 292 ಸ್ಥಾನಗಳಲ್ಲಿ ಜಯ ಗಳಿಸಲಿದೆ ಎಂದು ಫಲೋಡಿ ಸಟ್ಟಾ ಬಜಾರ್ ಭವಿಷ್ಯ ನುಡಿದಿದ್ದು, ಇಂಡಿಯಾ ಬ್ಲಾಕ್ ಮೈತ್ರಿ ಕೂಟ 80ರಿಂದ 85 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಹೇಳಿದೆ.
ಫಲೋಡಿ ಪ್ರಕಾರ ಈ ಬಾರಿ ಭಾರತೀಯ ಜನತಾ ಪಕ್ಷ ಸ್ಪಷ್ಟ ಬಹುಮತ ಪಡೆದು ಮೂರನೇ ಬಾರಿ ಕೇಂದ್ರದಲ್ಲಿ ಅಧಿಕಾರದ ಗದ್ದುಗೆ ಏರಲಿದೆ. 543 ಲೋಕಸಭಾ ಸ್ಥಾನಗಳಲ್ಲಿ ಬಿಜೆಪಿ 2019ರಲ್ಲಿ ನಡೆದ ಚುನಾವಣೆಯಲ್ಲಿ 303 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದು, ಎನ್ ಡಿಎ ಮೈತ್ರಿಕೂಟ 353 ಸದಸ್ಯ ಬಲ ಹೊಂದಿತ್ತು.