Advertisement

2024ರ ರಣರಂಗಕ್ಕೂ ಮೊದಲಿದೆ 16 ಕದನ

10:56 PM Sep 27, 2021 | Team Udayavani |

ಮೋದಿ 2.0 ಆಡಳಿತ ಆರಂಭವಾಗಿ ಅದಾಗಲೇ ಎರಡು ವರ್ಷ ಮುಗಿದಿದೆ. 2024ರಲ್ಲಿ ಪಕ್ಷಕ್ಕೆ ಮತ್ತೊಂದು ರಣರಂಗ ಎದುರಾಗಲಿದ್ದು, ಕಳೆದ ಬಾರಿಗಿಂತಲೂ ಹೆಚ್ಚಿನ ಪೈಪೋಟಿ ನಡೆಯುವ ಸಾಧ್ಯತೆಯಿದೆ. ದೇಶದ ಎಲ್ಲ ರಾಜಕೀಯ ಪಕ್ಷಗಳು ಒಂದಾಗಿ ಮೋದಿಯನ್ನು ಮಣಿಸಬೇಕೆಂದು ಪಣತೊಟ್ಟು ನಿಂತಿವೆ. ಆದರೆ 2024ರ ರಣರಂಗಕ್ಕೂ ಮೊದಲು ದೇಶದ ಹಲವು ರಾಜ್ಯಗಳಲ್ಲಿ “ವಿಧಾನಸಭಾ ಚುನಾವಣೆ’ ಎಂಬ ಕದನ ಏರ್ಪಡಲಿದೆ. ಒಂದತ್ತ ಮೋದಿ ಹೆಸರಿನೊಂದಿಗೇ ಎಲ್ಲ ಚುನಾವಣೆ ಗೆಲ್ಲುವ ತಂತ್ರವನ್ನು ಬಿಜೆಪಿ ಹೆಣೆಯುತ್ತಿದ್ದರೆ, ಇನ್ನೊಂದತ್ತ ಸ್ಥಳೀಯ ಸಮಸ್ಯೆಗಳನ್ನೇ ಮುಂದಿಟ್ಟುಕೊಂಡು ಗೆದ್ದೇ ಗೆಲ್ಲುತ್ತೇವೆ ಎನ್ನುವ ವಿಶ್ವಾಸದಲ್ಲಿ ಇತ ರೆ ಪಕ್ಷಗಳು ಮುನ್ನುಗ್ಗಲಾರಂಭಿಸಿವೆ. 2022ರಿಂದ 2023ರ ಎರಡು ವರ್ಷಗಳ ಅವಧಿಯಲ್ಲಿ 16 ರಾಜ್ಯಗಳಲ್ಲಿ ಚುನಾವಣೆ ನಡೆಯಲಿದೆ. ಅದರಲ್ಲಿ ಗೆಲ್ಲುವ ಪಕ್ಷಗಳಿಗೆ ಲೋಕಸಭಾ ಚುನಾವಣೆಯಲ್ಲೂ ಪ್ಲಸ್‌ ಪಾಯಿಂಟ್‌ ಆಗುವುದಂತೂ ಸತ್ಯ. ಹಾಗಾದರೆ ಯಾವ ರಾಜ್ಯದಲ್ಲಿ ಯಾವ ಪಕ್ಷದ ಬಗ್ಗೆ ಹೆಚ್ಚು ಒಲವಿದೆ? ಅಲ್ಲಿನ ರಾಜಕೀಯ ಚಿತ್ರಣ ಎಲ್ಲಿಗೆ ಬಂದು ನಿಂತಿದೆ ಎಂದು ಹೇಳುವ ಪ್ರಯತ್ನ ಇಲ್ಲಿದೆ.

Advertisement

ಸಣ್ಣ ರಾಜ್ಯಗಳಲ್ಲೂ ಇದೆ ಫೈಟ್‌
ಪ್ರಮುಖ ರಾಜ್ಯಗಳ ಜತೆ ಸಣ್ಣ ರಾಜ್ಯಗಳಾದ ಗೋವಾ, ಮಣಿಪುರ, ಮೇಘಾಲಯ, ತ್ರಿಪುರ, ಹಿಮಾಚಲ ಪ್ರದೇಶ ನಾಗಾಲೆಂಡ್‌, ಮಿಝೋರಾಂನಲ್ಲೂ ಇನ್ನೆರೆಡು ವರ್ಷಗಳಲ್ಲಿ ಚುನಾವಣೆ ನಡೆಯಲಿದೆ. ಇವುಗಳಲ್ಲಿ ಪ್ರಸ್ತುತ ಮಿಝೋರಾಂ ಹೊರತುಪಡಿಸಿ ಬೇರೆಲ್ಲ ರಾಜ್ಯಗಳಲ್ಲೂ ಬಿಜೆಪಿಯೇ ಸಿಂಹಾ ಸನದಲ್ಲಿದೆ. ಮಿಝೋರಾಂನಲ್ಲಿ ಮಿಝೋರಾಂನ್ಯಾಶನಲ್‌ ಫ್ರಂಟ್‌ ಅಧಿಕಾರ ಗಿಟ್ಟಿಸಿಕೊಂಡಿದೆ. ಕಡಿಮೆ ಕ್ಷೇತ್ರಗಳಿರುವ ಈ ರಾಜ್ಯ ಗಳಲ್ಲಿ ರಾಷ್ಟ್ರೀಯ ಪಕ್ಷಗಳ ಜತೆ ಸ್ಥಳೀಯ ಪಕ್ಷಗಳೂ ಮಹತ್ವದ ಪಾತ್ರ ವಹಿಸಲಿದ್ದು, ಅವುಗಳು ಕೈ ಹಿಡಿದರೆ ಬಹುತೇಕ ರಾಜ್ಯಗಳು ಬಿಜೆಪಿ ತೆಕ್ಕೆಗೆ ಸೇರಿಕೊಳ್ಳುವ ಸಾಧ್ಯತೆಯಿದೆ.

ಉತ್ತರ ಪ್ರದೇಶ
ಉತ್ತರ ಪ್ರದೇಶ ಯೋಗಿ ದರ್ಬಾರ್‌
ಬಹುದೊಡ್ಡ ರಾಜ್ಯವೆನಿಸಿಕೊಂಡಿರುವ ಉತ್ತರಪ್ರದೇಶದಲ್ಲಿ ಯೋಗಿ ಸರಕಾರ ರೆಬೆಲ್‌ ಆಡಳಿತ ನಡೆಸಿದೆ. 2017ರ ಚುನಾವಣೆಯಲ್ಲಿ 403 ಕ್ಷೇತ್ರಗಳಲ್ಲಿ 312 ಕ್ಷೇತ್ರವನ್ನು ತನ್ನದಾಗಿಸಿಕೊಂಡು ಸ್ಪಷ್ಟ ಬಹುಮತ ಸಾಧಿಸಿಕೊಂಡಿತ್ತು. ಹಿಂದೂ ಧಾರ್ಮಿಕ ಭಾವನೆ ಗಳಿಗೆ ಹೆಚ್ಚೇ ಒತ್ತು ನೀಡುತ್ತಾ, ಹಿಂದೂ ಮತಗಳನ್ನು ತನ್ನ ತೆಕ್ಕೆಯಲ್ಲೇ ಉಳಿಸಿಕೊಳ್ಳುವ ಸಕಲ ಪ್ರಯತ್ನಗಳನ್ನು ಬಿಜೆಪಿ ಮಾಡಿದೆ. ಇದರ ಜತೆಗೆ ನಿಶಾದ್‌ ಪಕ್ಷದ ಜತೆಗೆ ಬಿಜೆಪಿ ಮೈತ್ರಿಯನ್ನೂ ಮಾಡಿಕೊಂಡಿದೆ. ಕಳೆದ ಚುನಾವಣೆಯಲ್ಲಿ 47 ಕ್ಷೇತ್ರ ಗೆದ್ದಿದ್ದ ಅಖೀಲೇಶ್‌ ಯಾದವ್‌ ಅವರ ಸಮಾಜವಾದಿ ಪಾರ್ಟಿ ಹಾಗೂ 19 ಕ್ಷೇತ್ರದಲ್ಲಿರುವ ಮಾಯಾವತಿ ಅವರ ಬಿಎಸ್ಪಿ ಈಗ ಬೇರೆ ಬೇರೆ ಯಾ ಗಿವೆ. ಆದರೆ ಚುನಾ ವಣೆ ವೇಳೆಗೆ ಮೈತ್ರಿ ಮಾಡಿಕೊಂಡು ಯೋಗಿಗೆ ಸವಾಲೊಡ್ಡುವ ಸಾಧ್ಯತೆಯನ್ನೂ ತೆಗೆದು ಹಾಕುವಂತಿಲ್ಲ. ಕಾಂಗ್ರೆಸ್‌ ಅನ್ನು ಯಾರೂ ಗಂಭೀರವಾಗಿ ಪರಿಗಣಿಸಿಲ್ಲ. ಕಳೆದ 25 ವರ್ಷಗಳಲ್ಲಿ ಯಾವುದೇ ಪಕ್ಷ ಎರಡನೇ ಬಾರಿಗೆ ಸರಕಾರ ಸ್ಥಾಪಿ ಸಲು ಆಗದಿರುವ ಉತ್ತರ ಪ್ರದೇಶದಲ್ಲಿ ಬಿಜೆಪಿ ಎರಡನೇ ಬಾರಿ ಆಡಳಿತದ ಚುಕ್ಕಾಣಿ ಹಿಡಿಯಲು ಸಕಲ ಪ್ರಯತ್ನ ಮಾಡುತ್ತಿದೆ.

ಪಂಜಾಬ್‌
ಕಾಲಿನ ಮೇಲೆ ಕಲ್ಲು ಹಾಕಿ ಕೊಂಡ ಕೈ
ಪಂಜಾಬ್‌ ಒಂದು ರೀತಿಯಲ್ಲಿ ಕಾಂಗ್ರೆಸ್‌ಗೆ ಸುಲಭದಲ್ಲಿ ಆಡಳಿತಕ್ಕೆ ಬರಬಹುದಾದ ರಾಜ್ಯ. ಅದರಲ್ಲೂ ರೈತ ಚಳುವಳಿಗಳು ಆರಂಭವಾಗಿ ಅದಕ್ಕೆ, ಮಾಜಿ ಸಿಎಂ ಕ್ಯಾ| ಅಮರೀಂದರ್‌ ಸಿಂಗ್‌ ಬೆಂಬಲ ನೀಡಿದ ಮೇಲೆ ಜನರ ಮನಸ್ಸನ್ನು ಗೆಲ್ಲುವುದು ಕಾಂಗ್ರೆಸ್‌ಗೆ ಸುಲಭ ವಾಗಿತ್ತೆನ್ನಬಹುದು. ಆದರೆ ಇತ್ತೀಚಿನ ದಿನಗಳಲ್ಲಿ ಪಕ್ಷದೊಳಗೇ ಜಗಳ ಆಡಿಕೊಂಡು ಅದನ್ನು ಅರಳಿ ಕಟ್ಟೆ ಮೇಲೆ ನಿಂತು ಸಾರಿದ್ದಾಗಿದೆ. ಸಾಲದ್ದಕ್ಕೆ ಕ್ಯಾ| ಅಮರೀಂದರ್‌ ಸಿಂಗ್‌ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟು, ಚ‌ನ್ನಿಯನ್ನು ಆ ಸ್ಥಾನಕ್ಕೆ ಏರಿಸಲಾಗಿದೆ. ಮಾಜಿ ಸಿಎಂ ಮತ್ತು ಕಾಂಗ್ರೆಸ್‌ ಅಧ್ಯಕ್ಷ ನವಜೋತ್‌ ಸಿಂಗ್‌ ಪರಸ್ಪರ ದೂರು, ದುಮ್ಮಾನದಲ್ಲೇ ತೊಡಗಿದ್ದಾರೆ. ಒಂದು ರೀತಿಯಲ್ಲಿ ಅಲ್ಲಿನ ಕಾಂಗ್ರೆಸ್‌ ತಮ್ಮ ಕಾಲ ಮೇಲೆ ತಾವೇ ಕಲ್ಲು ಹಾಕಿಕೊಂಡಿದ್ದಾರೆ ಎನ್ನಬಹುದು. ಕಾಂಗ್ರೆಸ್‌ ಬದಿಗೆ ಸರಿದರೂ ಅಲ್ಲಿ ಮೊದಲು ಪ್ಲಸ್‌ ಪಾಯಿಂಟ್‌ ಆಗುವುದು ಎಎಪಿಗೆ. ಈಗಾಗಲೇ ಪಕ್ಷ ರಾಜ್ಯಾದ್ಯಂತ ಭಾರೀ ಪ್ರಚಾರ ಆರಂಭಿಸಿ, ಹಲವು ಆಶ್ವಾಸನೆ ನೀಡುತ್ತಾ ಬಂದಿದ್ದು, ಜನರು ಎಎಪಿ ಕೈ ಹಿಡಿದರೂ ಆಶ್ಚರ್ಯವಿಲ್ಲ.ಎಸ್‌ಎಡಿ ಕೂಡ ರೈತರ ಹೆಸರಿನಲ್ಲಿ ಮತ ಗೆಲ್ಲಲು ಪ್ರಯತ್ನಿಸುತ್ತಲೇ ಇದೆ.

ರಾಜಸ್ಥಾನ
ಒಳ ಜಗಳವೇ ಅಪಾಯ
ವಸುಂಧರಾ ರಾಜೇಯನ್ನು ಮುಂದಿಟ್ಟುಕೊಂಡು ಬಿಜೆಪಿ ಇಲ್ಲಿ ಅಧಿಕಾರಕ್ಕಾಗಿ ಹಂಬಲಿಸುತ್ತಿದೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಸ್ಪಷ್ಟ ಬಹುಮತವನ್ನು ಪಡೆದುಕೊಂಡು ಅಶೋಕ್‌ ಗೆಹ್ಲೋಟ್ಅವರ ಸರಕಾರವನ್ನು ರಚಿಸಿದೆ. ಈ ರಾಜ್ಯದ ವಿಶೇಷವೇನೆಂದರೆ ಇಲ್ಲಿ ಕಳೆದ ಹಲವು ದಶಕಗಳಿಂದ ಯಾವುದೇ ಪಕ್ಷ ಸತತವಾಗಿ ಎರಡನೇ ಬಾರಿಗೆ ಸರಕಾರ ರಚಿಸಿಲ್ಲ. ಕಾಂಗ್ರೆಸ್‌ನಲ್ಲಿ ಗೆಹ್ಲೋಟ್ ಮತ್ತು ಸಚಿನ್‌ ಪೈಲೆಟ್‌ ಅವರ ಬಣಗಳ ಗುದ್ದಾಟ ಬಿಜೆಪಿಗೆ ಲಾಭವಾಗಬಹುದು.

Advertisement

ಗುಜರಾತ್‌
ಎಎಪಿ ಟ್ರಬಲ್‌
ಗುಜರಾತ್‌ ಬಿಜೆಪಿಗೆ ಸ್ಪಷ್ಟ ಬಹುಮತವಿದ್ದಂತ ಕ್ಷೇತ್ರ. ಆದರೆ ಅಲ್ಲಿಯೂ ಇತ್ತೀಚೆಗಷ್ಟೇ ಪೂರ್ತಿ ಸಂಪುಟವನ್ನೇ ಬದಲಿಸಲಾಗಿದೆ. ಹಳೆ ಸಚಿವರ ಹಾಗೂ ಸಿಎಂ ಸ್ಥಾನಕ್ಕೆ ಹೊಸಬರನ್ನು ತಂದು ಕೂರಿಸಲಾಗಿದೆ. ಅಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಕೇಂದ್ರದಂತೆಯೇ ಸೂಕ್ತ ನಾಯಕನಿಲ್ಲದಿರುವುದು ಬಿಜೆಪಿಗೆ ಪ್ಲಸ್‌ ಪಾಯಿಂಟ್‌. ಆದರೆ ಅರವಿಂದ್‌ ಕೇಜ್ರಿವಾಲ್‌ ಅವರ ಎಎಪಿ ಕಳೆದ ಮೂರು ವರ್ಷಗಳಲ್ಲಿ ಆಳವಾಗಿಯೇ ಬೇರೂರುತ್ತಾ ಬಂದಿದ್ದು, ಸೂರ ತ್‌ನ ಸ್ಥಳೀಯ ಚುನಾವಣೆಗಳಲ್ಲೂ ಅದ್ಭುತ ಸ್ಪರ್ಧೆ ನೀಡಿ ಗೆದ್ದಿದೆ. ಬಿಜೆಪಿಗೆ ಕಾಂಗ್ರೆಸ್‌ ಬದಲು ಎಎಪಿ ಪ್ರಬಲ ಪ್ರತಿಸ್ಪರ್ಧಿ ಯಾಗಲೂಬಹುದು.

ಕರ್ನಾಟಕ
ಕರ್ನಾಟಕದಲ್ಲಿ ಯಾರಿಗೆ ಮ್ಯಾಜಿಕ್‌ ನಂಬರ್‌?
2018ರ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಮ್ಯಾಜಿಕ್‌ ನಂಬರ್‌ ಪಡೆಯುವಲ್ಲಿ ಬಿಜೆಪಿ ವಿಫ‌ಲವಾಗಿತ್ತು. ಮೊದಲಿಗೆ ಕಾಂಗ್ರೆಸ್‌ ಕೈ ಹಿಡಿದಿದ್ದ ಜೆಡಿಎಸ್‌ ಅನಂತರ ಬಿಜೆಪಿ ಕೈ ಹಿಡಿದು ಆಡಳಿತಾವಧಿಯಲ್ಲಿ ಎರಡು ಭಾಗವಾಗಿದೆ. ಅದರಲ್ಲೂ ಬಿಜೆಪಿ ಆಡಳಿತದಲ್ಲೂ ಬಿಎಸ್‌ವೈ ಸಿಎಂ ಸ್ಥಾನದಿಂದ ಕೆಳಗಿಳಿದು ಬೊಮ್ಮಾಯಿಗೆ ಸ್ಥಾನ ಸಿಕ್ಕಿದೆ. ಮುಂದಿನ ಚುನಾವಣೆಯನ್ನು ಗಮನದಲ್ಲಿ ಇಟ್ಟುಕೊಂಡೇ ಸಿಎಂ ಬದಲಿಸಲಾಗಿದೆ. ಕಾಂಗ್ರೆಸ್‌ ಕೂಡ ಈಗಿ ನಿಂದಲೇ ಚುನಾವಣ ಸಿದ್ಧತೆ ಶುರು ಮಾಡಿದ್ದು, ಗೆಲುವಿನ ತಯಾರಿ ನಡೆಸಿದೆ. ಜೆಡಿಎಸ್‌ ನಡೆ ಏನು ಎಂಬುದು ಇನ್ನೂ ಕುತೂಹಲವಾಗಿದೆ.

ಛ‌ತ್ತೀಸಗಢ
ಕಾಂಗ್ರೆಸ್‌ಗೆ ಜಗಳವೇ ದುಶ್ಮನ್‌
ಕಾಂಗ್ರೆಸ್‌ಗೆ 2018ರ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಸಿಕ್ಕ ರಾಜ್ಯವಿದು. ಆದರೆ ಈ ರಾಜ್ಯದಲ್ಲಿ ಮುಖ್ಯಮಂತ್ರಿ ಬಾಘೇಲ್‌ ಮತ್ತು ಸಚಿವ ಟಿಎಸ್‌ ಸಿಂಗ್‌ ಡಿಯೋ ನಡುವೆ ಇರುವ ಒಳಜಗಳ ಪಕ್ಷಕ್ಕೆ ಬಹುದೊಡ್ಡ ಹೊಡೆತವನ್ನೇ ಕೊಟ್ಟರೂ ಕೊಡಬಹುದು. ಅದರಿಂದಾಗಿ ಪಕ್ಷ ದುರ್ಬಲವಾಗಿ ಬಿಜೆಪಿಗೆ ಅಧಿಕಾರಕ್ಕೆ ಅವಕಾಶ ಸಿಕ್ಕರೂ ಸಿಗಬಹುದು.

ತೆಲಂಗಾಣ
ತೆಲಂಗಾಣ ಒಂದು ರೀತಿಯಲ್ಲಿ ಬಿಜೆಪಿಗೆ ಲೆಕ್ಕಾಚಾರದಿಂದ ಹೊರಗೇ ಇರುವ ರಾಜ್ಯ ವೆನ್ನಬಹುದು. ಕೆ.ಚಂದ್ರಶೇಖರ್‌ ರಾವ್‌ ಅವರ ಟಿಆರ್‌ಎಸ್‌ ಪ್ರಮುಖ ಪಕ್ಷವಾಗಿ ಅಧಿಕಾರದಲ್ಲಿದ್ದರೆ ಅದಕ್ಕೆ ಪ್ರತಿಯಾಗಿ ಕಾಂಗ್ರೆಸ್‌ನ ಯುಪಿಎ ಹೋರಾಟ ನಡೆಸುತ್ತಿದೆ. ಆದರೆ ಕಳೆದ ಲೋಕ ಸಭೆ ಚುನಾವಣೆಯಲ್ಲಿ ಬಿಜೆಪಿ ಒಂದಷ್ಟು ಸ್ಪರ್ಧೆ ನೀಡಿ, ಸ್ಪರ್ಧೆ ನೀಡುವ ಮುನ್ಸೂ ಚನೆ ನೀಡುತ್ತಿದೆ. ಯಾವುದೇ ಪಕ್ಷ ಅದೆಷ್ಟೇ ಹೋರಾಡಿದರೂ ಕೆ.ಸಿ.ರಾವ್‌ ಪಕ್ಷವನ್ನು ಮಣಿಸುವುದು ಸ್ವಲ್ಪ ಕಷ್ಟವೇ ಎನ್ನುವ ವಾತಾವರಣ ಅಲ್ಲಿದೆ.

ಮಧ್ಯಪ್ರದೇಶ
ನೇರ ಹಣಾಹಣಿ
ಈ ರಾಜ್ಯದಲ್ಲಿ ಕಾಂಗ್ರೆಸ್‌ ಬಿಟ್ಟು ಬಿಜೆಪಿ ಸೇರುವ ಮೂಲಕ ಜ್ಯೋತಿರಾದಿತ್ಯಾ ಸಿಂಧಿಯಾ ಸರಕಾರವನ್ನೇ ಅದಲು ಬದಲು ಮಾಡಿಬಿಟ್ಟಿದ್ದಾರೆ. ಅವರಿಗೆ ಕೇಂದ್ರ ಸಚಿವ ಸ್ಥಾನವನ್ನೂ ಬಿಜೆಪಿ ಕೊಟ್ಟಿದೆ. ಇನ್ನೊಂದೆಡೆ ಪ್ರಬಲ ಪ್ರತಿಸ್ಪರ್ಧಿಯಾಗಿರುವ ಕಾಂಗ್ರೆಸ್‌ನ ಕಮಲನಾಥ್‌ ಕಾಂಗ್ರೆಸ್‌ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗುತ್ತಾರೆ ಎನ್ನುವ ಮಾತುಗಳೂ ಕೇಳಿಬಂದಿವೆ. ಈ ರಾಜ್ಯದಲ್ಲಿ ಬಿಜೆಪಿ ಕಾಂಗ್ರೆಸ್‌ ನಡುವೆ ನೇರಾನೇರಾ ಹಣಾಹಣಿ ನಡೆಯಲಿದೆ. ಕಾಂಗ್ರೆಸ್‌ಗೆ ನಾಯಕತ್ವದ ಪ್ರಶ್ನೆ ಕಾಡಿದರೂ ಕಾಡಬಹುದು.

3 ಸಿಎಂ ಕಂಡ ಉತ್ತರಾಖಂಢ
ಕೇವಲ 70 ಸೀಟುಗಳಿರುವ ಉತ್ತ ರಾಖಂಢದಲ್ಲಿ ರೇಸ್‌ ಇರುವುದು ಬಿಜೆಪಿಯ ಮೈತ್ರಿಕೂಟ ಎನ್‌ಡಿಎ ಮತ್ತು ಕಾಂಗ್ರೆಸ್‌ ಮೈತ್ರಿಕೂಟ ವಾದ ಯುಪಿಎ. ಕಳೆದ ಬಾರಿ ಎನ್‌ಡಿಎಗೆ ಸ್ಪಷ್ಪ ಬಹುಮತ ಸಿಕ್ಕಿತ್ತಾದರೂ ಈ ಆಡಳಿತಾವಧಿಯಲ್ಲಿ ನಾಯಕತ್ವದ ಬಗ್ಗೆಯೇ ಸ್ಪಷ್ಟನೆ ಇಲ್ಲದೆ ಮೂರು ಬಾರಿ ಮುಖ್ಯಮಂತ್ರಿಗಳನ್ನು ಬದಲಾಯಿಸಲಾಗಿದೆ. ಇದು ಒಂದು ರೀತಿಯಲ್ಲಿ ಬಿಜೆಪಿಗೆ ಮೈನಸ್‌ ಆದರೂ ಆಗ ಬಹುದು, ಪ್ಲಸ್‌ ಆದರೂ ಆಗ ಬಹುದು.

ಎಲ್ಲೆಲ್ಲಿ ಚುನಾವಣೆ?
2022
ಉತ್ತರ ಪ್ರದೇಶ, ಉತ್ತರಾ ಖಂಢ‌,ಗೋವಾ, ಗುಜರಾತ್‌, ಹಿಮಾಚಲ ಪ್ರದೇಶ, ಮಣಿಪುರ, ಪಂಜಾಬ್‌.

2023
ಕರ್ನಾಟಕ, ಛತ್ತೀಸ್‌ಗಢ, ಮಧ್ಯ ಪ್ರದೇಶ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್‌, ರಾಜಸ್ಥಾನ, ತೆಲಂಗಾಣ, ತ್ರಿಪುರ.

2024
ಮಹಾರಾಷ್ಟ್ರ, ಒಡಿಶಾ, ಸಿಕ್ಕಿಂ, ಆಂಧ್ರ ಪ್ರದೇಶ, ಅರುಣಾಚಲ ಪ್ರದೇಶ, ಹರಿಯಾಣ, ಝಾರ್ಖಂಡ್‌

Advertisement

Udayavani is now on Telegram. Click here to join our channel and stay updated with the latest news.

Next