Advertisement

Lok Sabha Elections Results; ಯಾವ ನಾಯಕರಿಗೆ ಏನು ಸಂದೇಶ?

11:37 PM Jun 04, 2024 | Team Udayavani |

ಪ್ರಸಕ್ತ ಲೋಕಸಭೆ ಚುನಾವಣೆಯ ಫ‌ಲಿತಾಂಶದ ಮೂಲಕ ದೇಶವಾಸಿಗಳು ಎಲ್ಲ ರಾಜಕೀಯ ಪಕ್ಷಗಳಿಗೆ ಒಂದಿಲ್ಲೊಂದು ಪಾಠವನ್ನು, ಸಂದೇಶವನ್ನು ರವಾನಿಸಿದ್ದಾರೆ. ರಾಜಕೀಯ ಘಟಾನುಘಟಿಗಳೆನಿಸಿಕೊಂಡ ನಾಯಕರಿಗೆ ಈ ಫ‌ಲಿತಾಂಶ ನೀಡಿದ ಸಂದೇಶವೇನು ಎಂಬ ಮಾಹಿತಿ ಇಲ್ಲಿದೆ.

Advertisement

ನರೇಂದ್ರ ಮೋದಿ
ಕಳೆದ ಚುನಾವಣೆಗೆ ಹೋಲಿಸಿದರೆ ಬಿಜೆಪಿ ಗೆದ್ದಿರುವ ಸ್ಥಾನಗಳ ಸಂಖ್ಯೆ ಕುಸಿತ ಕಂಡಿದೆ. ಕಳೆದ 2 ಚುನಾವಣೆಗಳಲ್ಲಿ ದೇಶದಲ್ಲಿ ಕೆಲಸ ಮಾಡಿದ್ದ ಮೋದಿ ಮ್ಯಾಜಿಕ್‌ ಈ ಬಾರಿ ಕೈ ಕೊಟ್ಟಿದೆ. ಏಕ ವ್ಯಕ್ತಿ ಪ್ರದರ್ಶನದ ಮೂಲಕ ಚುನಾವಣೆ ಗೆಲ್ಲುವುದು ದಿನಕಳೆದಂತೆ ಕಷ್ಟವಾಗಲಿದೆ ಎಂಬ ಸಂದೇಶವನ್ನು ಈ ಚುನಾವಣೆ ಪ್ರಧಾನಿ ಮೋದಿ ಅವರಿಗೆ ನೀಡಿದೆ. ಮೋದಿ ಅವರ ವರ್ಚಸ್ಸಿನಿಂದಲೇ ಕಳೆದ ವರ್ಷ ಬಿಜೆಪಿ 303 ಸ್ಥಾನಗಳನ್ನು ಗೆದ್ದಿತ್ತು. ಈ ಬಾರಿ ಸ್ಥಾನಗಳ ಸಂಖ್ಯೆ ಕುಸಿತವಾಗಿದೆ. ಕೇವಲ “ಮೋದಿ ಗ್ಯಾರಂಟಿ’ಯಿಂದ ಚುನಾವಣೆ ಗೆಲ್ಲುವುದು ಅಸಾಧ್ಯ ಎಂಬುದನ್ನು ಈ ಚುನಾವಣೆ ತೋರಿಸಿದೆ. ಅಲ್ಲದೇ, ಧಾರ್ಮಿಕ ಧ್ರುವೀಕರಣದ ಹೇಳಿಕೆಗಳು ಹೇಗೆ ಫ‌ಲಿತಾಂಶವನ್ನೇ ಏರುಪೇರು ಮಾಡಬಹುದು ಎಂಬ ಪಾಠವನ್ನೂ ಈ ಫ‌ಲಿತಾಂಶ ತೋರಿಸಿಕೊಟ್ಟಿದೆ. ಮಿತ್ರಪಕ್ಷಗಳನ್ನು ಒಗ್ಗೂಡಿಸಿಕೊಂಡು ಚುನಾವಣೆ ಎದುರಿಸಿದ್ದರಿಂದ 3ನೇ ಬಾರಿಗೆ ಅಧಿಕಾರ ಹಿಡಿಯುವ ಹಂತಕ್ಕೆ ಮೋದಿಯವರು ಬಂದಿದ್ದಾರೆ. ಮಿತ್ರಪಕ್ಷಗಳನ್ನು ಜತೆಯಾಗಿ ಕರೆದೊಯ್ದಿದ್ದು ಈಗ ಫ‌ಲ ನೀಡಿದೆ. ಇನ್ನು, ಕಳೆದ 2 ಅವಧಿಯಲ್ಲೂ ಪ್ರಬಲ ಪ್ರತಿಪಕ್ಷವಿಲ್ಲದ ಕಾರಣ, ಮೋದಿ ಆಡಳಿತದ ಹಾದಿ ಸುಗಮವಾಗಿತ್ತು. ಆದರೆ, ಈಗ ಸಂಸತ್‌ನಲ್ಲಿ ಪ್ರತಿಪಕ್ಷಗಳು ಪ್ರಬಲವಾಗಿರುವುದು ಕೂಡ ಮೋದಿಯವರಿಗೆ ಸವಾಲು. ಯುಸಿಸಿ, ಒಂದು ದೇಶ-ಒಂದು ಚುನಾವಣೆಯಂಥ ಕನಸಿನ ಯೋಜನೆಗಳನ್ನು ಜಾರಿ ಮಾಡಬೇಕೆಂದರೆ ಪ್ರತಿಪಕ್ಷಗಳನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಾದ ಅನಿವಾರ್ಯತೆ ಮೋದಿಗೆ ಸೃಷ್ಟಿಯಾಗಿದೆ.

ಅಮಿತ್‌ ಶಾ
ಬಿಜೆಪಿಯ ಚುನಾವಣಾ ರಣತಂತ್ರಗಾರ ಎಂದು ಕರೆಸಿಕೊಳ್ಳುವ ಅಮಿತ್‌ ಶಾ ಅವರು ಈ ಚುನಾವಣೆಯಲ್ಲಿ ಪಕ್ಷವನ್ನು 300ರ ಗಡಿ ದಾಟಿಸುವ ಗುರಿ ಹೊಂದಿದ್ದರು. ಆದರೆ ಚುನಾವಣೆ ಹತ್ತಿರವಾಗುತ್ತಿದ್ದಂತೆ 370ನೇ ವಿಧಿ ಮತ್ತು ಮೋದಿಗೆ 3ನೇ ಬಾರಿ ಪ್ರಧಾನಿ ಹುದ್ದೆ ಎಂಬ ವಿಷಯಗಳನ್ನಷ್ಟೇ ಇಟ್ಟುಕೊಂಡು ಪ್ರಚಾರ ಮಾಡಿದ್ದು, ಬಿಜೆಪಿಗೆ ಮುಳುವಾಗಿದೆ. ಟಿಕೆಟ್‌ ನೀಡುವ ಸಮಯದಲ್ಲಿ ಸ್ಥಳೀಯ ನಾಯಕರೊಂದಿಗೆ ಹೆಚ್ಚಿನ ಸಭೆ ನಡೆಸದೇ ಹೈಕಮಾಂಡ್‌ ಮೂಲಕ ನಿರ್ಧಾರ ತೆಗೆದುಕೊಳ್ಳುವುದು ಕಷ್ಟ ತಂದೊಡ್ಡಲಿದೆ ಎಂಬ ಸಂದೇಶವನ್ನು ಅಮಿತ್‌ ಶಾ ಅವರಿಗೆ ಈ ಚುನಾವಣೆ ನೀಡಿದೆ.

ಜೆ.ಪಿ.ನಡ್ಡಾ
ರಾಷ್ಟ್ರೀಯ ಪಕ್ಷವೊಂದರ ಅಧ್ಯಕ್ಷರಾಗಿ ಚುನಾವಣೆ ಪ್ರಚಾರದಲ್ಲಿ ತೊಡಗಿಕೊಳ್ಳುವ ಜೊತೆಗೆ ಪಕ್ಷಕ್ಕೆ ಹಿನ್ನಡೆ ಉಂಟು ಮಾಡುವ ವಿಷಯಗಳನ್ನು ಮಾತನಾಡದಂತೆ ಪಕ್ಷದ ನಾಯಕರನ್ನು ನಡ್ಡಾ ಅವರು ತಡೆಯಬೇಕಿತ್ತು. ಸಂವಿಧಾನ ಬದಲಾವಣೆ, ಹಿಂದೂ, ಮುಸ್ಲಿಂ ಸಂಘರ್ಷ ಮುಂತಾದ ವಿಷಯಗಳ ಬಗ್ಗೆ ಪಕ್ಷದ ನಾಯಕರು ಆಡಿದ ಮಾತುಗಳನ್ನು ತಡೆಯಬೇಕಿತ್ತು. ಚುನಾವಣೆ ಹತ್ತಿರವಾಗುತ್ತಿದ್ದಂತೆ ಸ್ಥಳೀಯ ನಾಯಕರನ್ನು ಮತ್ತಷ್ಟು ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣೆ ಎದುರಿಸಬೇಕಿತ್ತು ಎಂಬ ಸಂದೇಶವನ್ನು ಈ ಚುನಾವಣೆ ನಡ್ಡಾ ಅವರಿಗೆ ನೀಡಿದೆ.

ರಾಹುಲ್‌ ಗಾಂಧಿ
ಈ ಚುನಾವಣೆಯ ಫ‌ಲಿತಾಂಶ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರಿಗೆ ಸ್ಫೂರ್ತಿ ತುಂಬಿದೆ. ಪಕ್ಷ ಅಧಿಕಾರಕ್ಕೇರದಿದ್ದರೂ ಕಳೆದ ಚುನಾವಣೆಗೆ ಹೋಲಿಸಿದರೆ 48 ಹೆಚ್ಚು ಕ್ಷೇತ್ರಗಳಲ್ಲಿ ಜಯ ಗಳಿಸಿದೆ. ಚುನಾವಣೆಗೂ ಮುನ್ನ ರಾಹುಲ್‌ ನಡೆಸಿದ ಪಾದಯಾತ್ರೆಗಳು, ಜನರೊಂದಿಗೆ ಬೆರೆತದ್ದು, ಪಕ್ಷವನ್ನು ಮೇಲೆತ್ತುವಲ್ಲಿ ಸಹಕಾರಿಯಾಗಿದೆ. ಅಧಿಕಾರದಲ್ಲಿರುವ ಪಕ್ಷದ ನ್ಯೂನತೆಗಳನ್ನು ಜನರಿಗೆ ಅರ್ಥ ಮಾಡಿಸುವಲ್ಲಿ ಯಶಸ್ವಿಯಾದರೆ ಮತ್ತೂಮ್ಮೆ ಅಧಿಕಾರಕ್ಕೆ ಏರುವತ್ತ ಅವಕಾಶಗಳು ದೊರೆಯಲಿವೆ ಎಂಬ ಸಂದೇಶವನ್ನು ಇದು ರಾಹುಲ್‌ ಗಾಂಧಿ ಅವರಿಗೆ ನೀಡಿದೆ.

Advertisement

ಮಲ್ಲಿಕಾರ್ಜುನ ಖರ್ಗೆ
ಮಿತ್ರ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಒಗ್ಗಟ್ಟಿನಲ್ಲಿ ಸಾಗಿದರೆ ಚುನಾವಣೆಯಲ್ಲಿ ಗೆಲುವು ಸಾಧಿಸುವುದು ಸುಲಭವಾಗಲಿದೆ ಎಂಬ ಸಂದೇಶವನ್ನು ಈ ಚುನಾವಣೆ ಮಲ್ಲಿಕಾರ್ಜುನ ಖರ್ಗೆ ಅವರಿಗೆ ನೀಡಿದೆ. ಇಂಡಿಯಾ ಒಕ್ಕೂಟ ಸ್ಥಾಪನೆಯಾದಾಗಿನಿಂದಲೂ ನಿರಂತರ ಸಭೆಗಳನ್ನು ನಡೆಸಿ ಮೈತ್ರಿಕೂಟದಲ್ಲಿರುವ ಇತರ ಪಕ್ಷಗಳ ನಾಯಕರನ್ನು ಜೊತೆಗೆ ಕರೆದೊಯ್ದ ಕಾರಣ ಇಂಡಿಯಾ ಮೈತ್ರಿಕೂಟ 231 ಸ್ಥಾನಗಳನ್ನು ತನ್ನದಾಗಿಸಿಕೊಂಡಿದೆ. ಒಗ್ಗಟ್ಟಿನಲ್ಲಿ ಬಲವಿದೆ ಎಂಬ ಸಂದೇಶವನ್ನು ಇದು ಖರ್ಗೆ ಅವರಿಗೆ ನೀಡಿದೆ.

ಪ್ರಿಯಾಂಕಾ ವಾದ್ರಾ
ಇಂದಿರಾ ಗಾಂಧಿ ಹಾಗೂ ಸೋನಿಯಾ ಗಾಂಧಿ ಬಳಿಕ ಕಾಂಗ್ರೆಸ್‌ ಪಕ್ಷದಲ್ಲಿ ಪ್ರಿಯಾಂಕ ವಾದ್ರಾಗೂ ಜನ ಮನ್ನಣೆ ನೀಡುತ್ತಿದ್ದಾರೆ. ಇದೇ ರೀತಿಯ ಪ್ರಚಾರ ಮಾಡುವ ಮೂಲಕ ಪಕ್ಷವನ್ನು ಸಂಘಟಿಸಿದರೆ, ಅಧಿಕಾರಕ್ಕೆ ತರಬಹುದು ಎಂಬ ಸಂದೇಶವನ್ನು ಪ್ರಿಯಾಂಕಾ ವಾದ್ರಾಗೆ ಈ ಚುನಾವಣೆ ನೀಡಿದೆ. ಈ ಚುನಾವಣೆಯಲ್ಲಿ ಉತ್ತರ ಪ್ರದೇಶ ಸೇರಿದಂತೆ ದೇಶದ ಹಲವು ಕ್ಷೇತ್ರಗಳಲ್ಲಿ ಭರ್ಜರಿ ಪ್ರಚಾರ ನಡೆಸಿದ್ದರು.

ಅರವಿಂದ ಕೇಜ್ರಿವಾಲ್‌
ಮೈತ್ರಿಕೂಟದಿಂದ ದೂರ ಸರಿದು, ಕೇವಲ ಕೇಂದ್ರ ಸರ್ಕಾರವನ್ನು ಬೈಯುವ ಮೂಲಕ ಜನರ ಮತ ಸೆಳೆಯಲಾಗುವುದಿಲ್ಲ ಎಂಬ ಸಂದೇಶವನ್ನು ಈ ಚುನಾವಣೆ ಅರವಿಂದ ಕೇಜ್ರಿವಾಲ್‌ ಅವರಿಗೆ ನೀಡಿದೆ. ದೆಹಲಿ ಹಾಗೂ ಪಂಜಾಬ್‌ ರಾಜ್ಯಗಳಲ್ಲಿ ಆಪ್‌ ಕೈಹಿಡಿದಿದ್ದ ಯೋಜನೆಗಳು ರಾಷ್ಟ್ರೀಯ ಮಟ್ಟದಲ್ಲಿ ಕೈ ಹಿಡಿಯುವುದಿಲ್ಲ. ರಾಷ್ಟ್ರ ರಾಜಕಾರಣಕ್ಕೆ ಬೇರೆಯದ್ದೇ ರಾಜಕಾರಣ ಮಾಡಬೇಕು ಎಂಬ ಸಂದೇಶ ಅವರಿಗೆ ಸಿಕ್ಕಿದೆ.

ಯೋಗಿ ಆದಿತ್ಯನಾಥ್‌
ಈ ಬಾರಿ ಉತ್ತರ ಪ್ರದೇಶದಲ್ಲಿ ಇಂಡಿ ಯಾ ಮೈತ್ರಿ ಕೂಟ 44 ಸ್ಥಾನಗ ಳನ್ನು ಗೆದ್ದಿದೆ. ಯೋಗಿ ಹಾಗೂ ಮೋದಿ ಅವರ ವರ್ಚಸ್ಸು ಮಾತ್ರ ಪಕ್ಷವನ್ನು ಗೆಲ್ಲಿಸಲು ಸಾಧ್ಯವಿಲ್ಲ ಎಂಬ ಸಂದೇಶವನ್ನು ಈ ಚುನಾವಣೆ ಮುಖ್ಯಮಂತ್ರಿಗೆ ನೀಡಿದೆ. ಚುನಾವಣೆಯ ಆರಂಭ ದಲ್ಲಿ ಸಾಕಷ್ಟು ಪ್ರಚಾರದಲ್ಲಿ ತೊಡಗಿ ಕೊಂಡ ಯೋಗಿ ಅಂತಿಮವಾಗಿ ಹಿಂದೆ ಸರಿದದ್ದು, ಪಕ್ಷಕ್ಕೆ ಹಿನ್ನಡೆ ತಂದೊಡ್ಡಿತು ಎಂಬುದನ್ನು ಅವರಿಗೆ ಅರ್ಥ ಮಾಡಿಸಿತು.

ಶರದ್‌ ಪವಾರ್‌
ಮಹಾರಾಷ್ಟ್ರ ರಾಜಕಾರಣದಲ್ಲಿ ತಂತ್ರಗಾರಿಕೆಗೆ ಫ‌ಲ ಸಿಗಲಿದೆ ಎಂಬುದು ಮತ್ತೂಮ್ಮೆ ಸಾಬೀತಾಗಿದೆ. ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಾಗ ಶರದ್‌ ಪವಾರ್‌ ಪಕ್ಷಕ್ಕೆ ಗೆಲುವು ಸಿಕ್ಕಿರುವುದು ಅವರ ನೈತಿಕ ಸ್ಥೈರ್ಯವನ್ನು ಹೆಚ್ಚಳ ಮಾಡಿದೆ. ಪಕ್ಷ ಭಾಗವಾಗಿದ್ದರೂ ಸಹ ಎನ್‌ಸಿಪಿ ಮೇಲೆ ಜನ ನಂಬಿಕೆ ಇಟ್ಟಿದ್ದಾರೆ ಎಂಬುದನ್ನು ಈ ಚುನಾವಣೆ ತೋರಿಸಿದೆ.

ಅಖೀಲೇಶ್‌ ಯಾದವ್‌
ಉತ್ತರ ಪ್ರದೇಶದಲ್ಲಿ ಇಂಡಿಯಾ ಮೈತ್ರಿಕೂಟ ಹೆಚ್ಚಿನ ಸ್ಥಾನ ಗೆಲ್ಲಲು ಅಖೀಲೇಶ್‌ ತೋರಿದ ಒಗ್ಗಟ್ಟು ಕಾರಣವಾಗಿದೆ. ಸ್ವಪ್ರತಿಷ್ಠೆಯನ್ನು ಬದಿಗಿಟ್ಟು ಒಗ್ಗಟ್ಟಾಗಿ ಚುನಾವಣೆ ಎದುರಿಸಿದರೆ ಗೆಲುವು ಸಾಧಿಸಬಹುದು ಎಂಬ ಸಂದೇಶವನ್ನು ಈ ಚುನಾವಣೆ ಅಖೀಲೇಶ್‌ಗೆ ನೀಡಿದೆ. ರಾಜ್ಯದಲ್ಲಿ ಕಾಂಗ್ರೆಸ್‌ ಗೆಲ್ಲಬಲ್ಲ ಸ್ಥಾನಗಳನ್ನು ಬಿಟ್ಟುಕೊಟ್ಟಿದ್ದು ಮೈತ್ರಿಕೂಟಕ್ಕೆ ಲಾಭ ತಂದಿದೆ.

ನಿತೀಶ್‌ ಕುಮಾರ್‌
ನಿತೀಶ್‌ ನೇತೃತ್ವದ ಜೆಡಿಯು ಪಕ್ಷ ಕಳೆದ ಚುನಾವಣೆಗೆ ಹೋಲಿಸಿದರೆ 3 ಸ್ಥಾನಗಳಲ್ಲಿ ಕುಸಿತ ಕಂಡಿದೆ. ಚುನಾವಣೆಗೂ ಮುನ್ನ ಪದೇ ಪದೆ ಮೈತ್ರಿಕೂಟವನ್ನು ಬದಲಾವಣೆ ಮಾಡುವುದು ಜನರಲ್ಲಿ ಗೊಂದಲ ಉಂಟು ಮಾಡಲಿದೆ ಎಂಬ ಸಂದೇಶವನ್ನು ಅವರಿಗೆ ಈ ಚುನಾವಣೆ ನೀಡಿದೆ. ಮುಂಬರುವ ವಿಧಾನಸಭೆ ಚುನಾವಣೆಗಾಗಿ ಎನ್‌ಡಿಎ ಮೈತ್ರಿಕೂಟದಲ್ಲೇ ಉಳಿದುಕೊಳ್ಳುವುದು ಪಕ್ಷಕ್ಕೆ ಲಾಭ ಎಂಬುದನ್ನು ಅರಿವು ಮೂಡಿಸಿದೆ.

ಮಮತಾ ಬ್ಯಾನರ್ಜಿ
ಈ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ 29 ಸ್ಥಾನಗಳಲ್ಲಿ ಜಯ ಗಳಿಸಿದೆ. ಇದು ಪ್ರಾದೇಶಿಕವಾಗಿ ಅಭಿ ವೃದ್ಧಿ ಕೈಗೊಂಡರೆ ಜನರು ಚುನಾವಣೆಗಳಲ್ಲಿ ಕೈ ಹಿಡಿಯುತ್ತಾರೆ ಎಂಬ ಸಂದೇಶವನ್ನು ಮಮತಾಗೆ ನೀಡಿದೆ. ರಾಷ್ಟ್ರೀಯ ಪಕ್ಷಗಳನ್ನು ಬದಿಗೊತ್ತಿ ಪ್ರಾದೇಶಿಕ ಪಕ್ಷವನ್ನು ಮತ್ತಷ್ಟು ಬಲಗೊಳಿಸಬೇಕು ಎಂಬು ದನ್ನು ಈ ಚುನಾವಣೆ ಮನದಟ್ಟು ಮಾಡಿಸಿದೆ.

ಜಗನ್‌ಮೋಹನ್‌ ರೆಡ್ಡಿ
ಅಭಿವೃದ್ಧಿಯ ಹೆಸರಿನಲ್ಲಿ ಕೈಗೊಳ್ಳುವ ಗೊಂದಲಮಯ ನಿರ್ಧಾರಗಳನ್ನು ಕೈಗೊಳ್ಳುವುದು ಪಕ್ಷಕ್ಕೆ ಮುಳುವಾಗಲಿದೆ ಎಂಬ ಸಂದೇಶವನ್ನು ಈ ಚುನಾವಣೆ ರೆಡ್ಡಿಗೆ ನೀಡಿದೆ. ವಿಧಾನಸಭೆ ಚುನಾವಣೆಯಲ್ಲಿ ಸಿಕ್ಕಿದ ಅಭೂತ ಪೂರ್ವ ಗೆಲುವನ್ನು ದುರುಪಯೋಗ ಪಡಿಸಿಕೊಳ್ಳುವುದು ಮುಂದಿನ ಚುನಾವಣೆಯಲ್ಲಿ ಉಲ್ಟಾ ಆಗಬಹುದು ಎಂಬ ಸಂದೇಶ ಈ ಚುನಾವಣೆಯಿಂದ ಸಿಕ್ಕಿದೆ.

ಚಂದ್ರ ಬಾಬು ನಾಯ್ಡು
ಚುನಾವಣೆಗೂ ಮುನ್ನ ಕೈಗೊಂಡ ರಾಜಕೀಯ ತಂತ್ರಗಳು ಫ‌ಲ ನೀಡಿವೆ. ಅಲ್ಲದೇ ರಾಜ್ಯ ಸರ್ಕಾರ ವೈಫ‌ಲ್ಯಗಳನ್ನು ಜನರಿಗೆ ಅರ್ಥ ಮಾಡಿಸಿದರೆ ಅದು ಚುನಾವಣೆಯಲ್ಲಿ ಲಾಭ ತಂದುಕೊಡಲಿದೆ ಎಂಬ ಸಂದೇಶವನ್ನು ನಾಯ್ಡು ಅವರಿಗೆ ನೀಡಿದೆ.

ಎಂ.ಕೆ.ಸ್ಟಾಲಿನ್‌
ತ.ನಾಡಿನಲ್ಲಿ ಪ್ರಾದೇಶಿಕ ಪಕ್ಷಗಳೇ ಪ್ರಬಲ ಎಂಬುದು ಸಾಭೀತಾಗಿದೆ. ತನ್ನ ನಿಲುವಿನಿಂದ ಹಿಂದೆ ಸರಿಯದಿದ್ದರೆ ಜನರು ನಂಬಿಕೆ ಕಳೆದುಕೊಳ್ಳುವುದಿಲ್ಲ. ಗೆಲ್ಲಿಸುತ್ತಾರೆ ಎಂಬ ಸಂದೇಶವನ್ನು ಸ್ಟಾಲಿನ್‌ ಅವರಿಗೆ ಈ ಚುನಾವಣೆ ನೀಡಿದೆ. ರಾಷ್ಟ್ರ ರಾಜಕಾರಣದಲ್ಲಿ ಸ್ಟಾಲಿನ್‌ಗೆ ಸ್ಥಾನ ಸಿಕ್ಕಿಂತಾಗಿದೆ.

ಉದ್ಧವ್‌ ಠಾಕ್ರೆ
ಶಿವಸೇನೆ ಇಬ್ಭಾಗವಾದ ಬಳಿಕ ಉದ್ಧವ್‌ ಠಾಕ್ರೆ ಬಣ ಹೆಚ್ಚು ಸ್ಥಾನಗಳನ್ನು ಗೆದ್ದಿರುವುದು ಅವರಿಗೆ ನೈತಿಕ ಬಲನೀಡಿದೆ. ಪಕ್ಷ ಭಾಗವಾದರೂ ರಾಜಕೀಯ ನಿಲುವು ಬದಲಾಯಿ ಸದಿರುವುದು ಮೈತ್ರಿಕೂಟದ ಮೇಲೆ ನಂಬಿಕೆ ಹುಟ್ಟಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next