ಗದಗ: 2024ರಲ್ಲಿ ಜಗತ್ತಿಗೆ ಒಳ್ಳೆಯ ದಿನಗಳಿಲ್ಲ. ಜಗತ್ತಿನ ಪ್ರಭಾವಿ ಸಂತರೊಬ್ಬರು ಹಾಗೂ ಪ್ರಧಾನಿಗಳಿಬ್ಬರು ಸಾವಿಗೀಡಾಗುವ ಲಕ್ಷಣಗಳಿವೆ ಎಂದು ಕೋಡಿಮಠದ ಡಾ| ಶಿವಾನಂದ ಶಿವಯೋಗಿರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಗಳು, 2024ರಲ್ಲಿ ಅಕಾಲಿಕ ಮಳೆ, ಭೂಕಂಪ, ಜಲಕಂಟಕ, ಅಣುಬಾಂಬ್ ಸ್ಪೋಟದಂತಹ ಸನ್ನಿವೇಶಗಳು ಮತ್ತು ಯುದ್ಧದ ಭೀತಿಯಿಂದ ಜಗತ್ತು ತಲ್ಲಣಗೊಳ್ಳುವಂತಹ ಸ್ಥಿತಿ ನಿರ್ಮಾಣವಾಗಲಿದೆ ಎಂದು ಹೇಳಿದರು.
ಭಾರತೀಯ ಸಂಸ್ಕೃತಿ, ಪರಂಪರೆಯಲ್ಲಿ ಭಾರತೀಯರು ದೇವರು, ಧರ್ಮ, ಸತ್ಯ, ನಂಬಿಕೆ ವಿಚಾರದಲ್ಲಿ ಪ್ರಬುದ್ಧರಾಗಿದ್ದಾರೆ. ದೇಶದ ಹಲವಾರು ಕಡೆಗಳಲ್ಲಿ ದೈವಾಂಶ ಸಂಭೂತರ ಹೆಸರಿನಲ್ಲಿ ದೇವಸ್ಥಾನ, ಗುಡಿ, ಗೋಪುರಗಳನ್ನು ನಿರ್ಮಿಸಿ ಸ್ಮರಣೆ ಮಾಡುವುದು ಸಾಮಾನ್ಯವಾಗಿದೆ. ಆ ದೆಸೆಯಲ್ಲಿ ಶ್ರೀರಾಮನ ದೇವಸ್ಥಾನ ಲೋಕಾರ್ಪಣೆಗೊಂಡಿರುವುದು ಧಾರ್ಮಿಕ ಪ್ರತೀಕವಾಗಿದೆ ಎಂದು ಹೇಳಿದರು.
ಭಾರತೀಯ ಪ್ರಜೆಗಳಲ್ಲಿ ಆಧ್ಯಾತ್ಮಿಕ ಚಿಂತನೆ ಉಚ್ಛವಾಗಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಶ್ರೀರಾಮನ ಜನ್ಮಸ್ಥಳದಲ್ಲಿ ಶ್ರೀರಾಮನ ಬೃಹತ್ ದೇಗುಲ ನಿರ್ಮಾಣಗೊಂಡಿರುವುದು ಧಾರ್ಮಿಕವಾಗಿ ಒಳ್ಳೆಯ ಸೂಚನೆ ಸಿಕ್ಕಂತಾಗಿದೆ. ರಾಜಕೀಯದಲ್ಲಿ ಧಾರ್ಮಿಕತೆಯನ್ನು ಬೆರೆಸುವುದು ಸೂಕ್ತವಲ್ಲ ಎಂದು ಹೇಳಿದರು.
ದೇಶ ಹಾಗೂ ರಾಜ್ಯ ರಾಜಕೀಯ ಕುರಿತು ಮಾತನಾಡಿದ ಶ್ರೀಗಳು, ಸಾಮಾನ್ಯವಾಗಿ ಸಂಕ್ರಾಂತಿ ನಂತರ ಹಾಗೂ ಯುಗಾದಿ ನಂತರ ಭವಿಷ್ಯ ಹೇಳಲಾಗುತ್ತದೆ. ಸಂಕ್ರಾಂತಿ ನಂತರ ವ್ಯಾಪಾರ, ವಾಣಿಜ್ಯ, ಯುಗಾದಿ ನಂತರ ದೇಶದ ಸಮಗ್ರ ಮಳೆ, ಬೆಳೆ, ಜನರು, ರಾಜರ ಬಗ್ಗೆ ಹೇಳಲಾಗುತ್ತದೆ. ಈಗ ರಾಜಕೀಯ ಕುರಿತು ಹೇಳುವುದು ಸ್ತುತ್ಯರ್ಹವಲ್ಲ. ಯುಗಾದಿ ನಂತರ ರಾಜಕೀಯದಲ್ಲಾಗುವ ಬದಲಾವಣೆಗಳ ಕುರಿತು ಭವಿಷ್ಯ ಹೇಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.