Advertisement

2023 recap; ಚುನಾವಣೆ, ಸಿಡಿದ ಶೆಟ್ಟರ್, ದೂರವಾದ ಈಶ್ವರಪ್ಪ..: ರಾಜ್ಯ ರಾಜಕೀಯದ ಮೆಲುಕು

05:25 PM Dec 29, 2023 | Team Udayavani |

ಎಂದಿನಂತೆ 2023ರಲ್ಲಿಯೂ ಕರ್ನಾಟಕ ರಾಜಕೀಯದಲ್ಲಿ ಹಲವು ವಿದ್ಯಮಾನಗಳು ನಡೆದವು. ಕರ್ನಾಟಕ ವಿಧಾನಸಭೆ ಚುನಾವಣೆ ಈ ವರ್ಷದ ಪ್ರಮುಖ ಅಂಶ. ಅದರ ಮುಂಚಿತವಾಗಿ ಮತ್ತು ಫಲಿತಾಂಶದ ಬಳಿಕವು ಹಲವು ರೀತಿಯ ಬೆಳವಣಿಗೆಗಳು ರಾಜ್ಯದಲ್ಲಿ ನಡೆದಿದೆ.

Advertisement

ವಿಧಾನಸಭೆ ಚುನಾವಣೆ

224 ಕ್ಷೇತ್ರಗಳ ಕರ್ನಾಟಕ ವಿಧಾನಸಭೆಗೆ ಮೇ 10ರಂದು ಚುನಾವಣೆ ನಡೆಯಿತು. ಶೇ 73.84ರಷ್ಟು ಜನರು ಮತದಾನ ಮಾಡಿದರು. ಮೇ 13ರಂದು ಮತ ಎಣಿಕೆ ನಡೆಯಿತು. ಇದರಲ್ಲಿ ಕಾಂಗ್ರೆಸ್ ಪಕ್ಷವು 135 ಸ್ಥಾನ ಗೆದ್ದು ಅಧಿಕಾರ ಪಡೆಯಿತು. ಅದುವರೆಗೆ ಆಡಳಿತದಲ್ಲಿದ್ದ ಬಿಜೆಪಿ 66 ಸ್ಥಾನ ಪಡೆದರೆ, ಜೆಡಿಎಸ್ 19 ಕ್ಷೇತ್ರಗಳಲ್ಲಿ ಜಯ ಗಳಿಸಿತು.

ಸಿದ್ದು ಮತ್ತೆ ಸಿಎಂ

ಕಾಂಗ್ರೆಸ್ ಪಕ್ಷದ ಅಭೂತಪೂರ್ವ ಗೆಲುವಿನೊಂದಿಗೆ ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಪಟ್ಟಕ್ಕೇರಿದರು. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಸಿಎಂ ಕುರ್ಚಿ ಪಡೆಯಲು ಕೊನೆಯವರೆಗೂ ಹೋರಾಟ ನಡೆಸಿದರೂ ಡಿಸಿಎಂ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು. ಯು.ಟಿ ಖಾದರ್ ಅವರು ನೂತನ ವಿಧಾನಸಭೆಯ ಅಧ್ಯಕ್ಷರಾದರು.

Advertisement

ಜೆಡಿಎಸ್- ಬಿಜೆಪಿ ಮೈತ್ರಿ

ವಿಧಾನಸಭೆ ಚುನಾವಣೆ ಮುಗಿದ ಬಳಿಕ ಲೋಕಸಭೆ ಚುನಾವಣೆಗೆ ಕಾರ್ಯತಂತ್ರ ಬದಲಾಯಿಸಿಕೊಂಡ ಕಮಲ ವರಿಷ್ಠರು ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿದ್ದಾರೆ. ದೆಹಲಿಯಲ್ಲಿ ವರಿಷ್ಠರ ಮಟ್ಟದಲ್ಲಿಯೇ ನಡೆದ ಮೈತ್ರಿ ಮಾತುಕತೆಗೆ ರಾಜ್ಯ ನಾಯಕರಲ್ಲಿ ಕೆಲವರು ಅಸಮಾಧಾನ ತೋರಿದರೂ ಅದು ದೊಡ್ಡ ಮಟ್ಟಕ್ಕೆ ಹೋಗಲಿಲ್ಲ. ಲೋಕಸಭೆ ಚುನಾವಣೆಯ ಸೀಟು ಹಂಚಿಕೆ ಇನ್ನೂ ಅಂತಿಮಗೊಂಡಿಲ್ಲ.

ವಿಜಯೇಂದ್ರಗೆ ಪಟ್ಟ

ಹಲವು ತಿಂಗಳಿನಿಂದ ಖಾಲಿಯಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಶಿಕಾರಿಪುರ ಶಾಸಕ, ಯಡಿಯೂರಪ್ಪ ಪುತ್ರ ಬಿ.ವೈ ವಿಜಯೇಂದ್ರ ಅವರನ್ನು ನೇಮಿಸಲಾಯಿತು. ಲೋಕಸಭೆ ಚುನಾವಣೆಯಲ್ಲಿ ಗಮನದಲ್ಲಿಟ್ಟು ವರಿಷ್ಠರು ಈ ನಿರ್ಧಾರ ಕೈಗೊಂಡಿದ್ದರು. ಇದೇ ವೇಳೆ ಆರ್. ಅಶೋಕ್ ಅವರನ್ನು ವಿಧಾನಸಭೆ ವಿಪಕ್ಷ ನಾಯಕರನ್ನಾಗಿ ನೇಮಿಸಲಾಯಿತು.

ಗ್ಯಾರಂಟಿ ಸ್ಕೀಮ್

ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಕಾಂಗ್ರೆಸ್ ಘೋಷಿಸಿದ ಐದು ಗ್ಯಾರಂಟಿ ಯೋಜನೆಗಳು. ಶಕ್ತಿ ಯೋಜನೆ, ಗೃಹ ಜ್ಯೋತಿ, ಗೃಹ ಲಕ್ಷ್ಮಿ, ಯುವ ನಿಧಿ ಮತ್ತು ಅನ್ನ ಭಾಗ್ಯ ಯೋಜನೆಗಳನ್ನು ಘೋಷಿಸಿದ ಕಾಂಗ್ರೆಸ್ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿತು. ಮೊದಲ ಕ್ಯಾಬಿನೆಟ್ ಮೀಟಿಂಗ್ ನಲ್ಲಿಯೇ ಎಲ್ಲಾ ಯೋಜನೆಗಳ ಜಾರಿಯನ್ನು ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ.

ದಿಗ್ಗಜರ ವಿದಾಯ ಘೋಷಣೆ

ವಿಧಾನಸಭೆ ಚುನಾವಣೆಗೆ ಮೊದಲು ಬಿಜೆಪಿ ಹಿರಿಯ ನಾಯಕ ಕೆ.ಎಸ್ ಈಶ್ವರಪ್ಪ ಅವರು ಚುನಾವಣಾ ರಾಜಕೀಯದಿಂದ ದೂರ ಸರಿಯುವುದಾಗಿ ಘೋಷಿಸಿದರು. ವರಿಷ್ಠರ ಸೂಚನೆಯ ಮೇರೆಗೆ ಈಶ್ವರಪ್ಪ ಈ ನಿರ್ಧಾರಕ್ಕೆ ಬಂದಿದ್ದರು. ಇದೇ ವೇಳೆ ಎಸ್.ಅಂಗಾರ, ಹಾಲಾಡಿ ಶ್ರೀನಿವಾಸ ಶೆಟ್ಟಿ ಕೂಡಾ ಇದೇ ತೀರ್ಮಾನಕ್ಕೆ ಬಂದಿದ್ದರು. ಇತ್ತೀಚೆಗೆ ಮಾಜಿ ಮುಖ್ಯಮಂತ್ರಿ, ಸಂಸದ ಡಿ.ವಿ ಸದಾನಂದ ಗೌಡ ಅವರು ಕೂಡಾ ಚುನಾವಣಾ ರಾಜಕೀಯದಿಂದ ನಿವೃತ್ತಿಯಾಗುವುದಾಗಿ ಹೇಳಿದ್ದಾರೆ.

ಸಿಡಿದ ಶೆಟ್ಟರ್

ಬಿಜೆಪಿಯಲ್ಲಿದ್ದ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಈ ಬಾರಿ ಚುನಾವಣೆಗೆ ಮೊದಲು ಕಾಂಗ್ರೆಸ್ ಪಕ್ಷಕ್ಕೆ ಸೇರಿ ಅಚ್ಚರಿಗೆ ಕಾರಣವಾದರು. ಬಿಜೆಪಿಯಲ್ಲಿ ಟಿಕೆಟ್ ನಿರಾಕರಿಸಿದ ಕಾರಣದಿಂದ ಅಸಮಾಧಾನಿತರಾದ ಶೆಟ್ಟರ್, ಕೈ ಪಾಳಯಕ್ಕೆ ಸೇರಿದರು. ಕಾಂಗ್ರೆಸ್ ನಿಂದ ಸ್ಪರ್ಧೆ ಮಾಡಿದರೂ ಚುನಾವಣೆಯಲ್ಲಿ ಸೋಲನುಭವಿಸಿದರು.

ಪ್ರಜ್ವಲ್ ಆಯ್ಕೆ ರದ್ದು

2019 ರ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಹಾಸನ ಲೋಕಸಭಾ ಕ್ಷೇತ್ರದ ಸಂಸದರಾಗಿ ಪ್ರಜ್ವಲ್ ರೇವಣ್ಣ ಅವರ ಆಯ್ಕೆಯನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿತು. ಸುಳ್ಳು ಚುನಾವಣಾ ಅಫಿಡವಿಟ್ ಸಲ್ಲಿಸಿದ ಕಾರಣದಿಂದ ಪ್ರಜ್ವಲ್ ಸ್ಥಾನ ಕಳೆದುಕೊಳ್ಳಬೇಕಾಯಿತು. ಹೈಕೋರ್ಟ್ ತೀರ್ಪಿಗೆ ತಡೆ ನೀಡಲು ಸುಪ್ರೀಂ ನಿರಾಕರಿಸಿತು.

Advertisement

Udayavani is now on Telegram. Click here to join our channel and stay updated with the latest news.

Next