Advertisement
ಪ್ರಸ್ತುತ ಶಾಸಕರಾಗಿರುವವರಲ್ಲಿ ಕೆಲವರು ಲೋಕಸಭೆ ಚುನಾವಣೆಗೆ ಸ್ಪರ್ಧೆಗೆ ಒಲವು ಹೊಂದಿದ್ದರೆ, ಮಾಜಿ ಹಾಗೂ ಹಾಲಿ ಸಂಸದರು ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವ ವಿಚಾರ ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ.
Related Articles
Advertisement
ಬೆಂಗಳೂರು ಕೇಂದ್ರ ಸಂಸದ ಪಿ.ಸಿ.ಮೋಹನ್ ಈ ಬಾರಿ ವಿಧಾನಸಭೆಗೆ ಸ್ಪರ್ಧಿಸಲು ಚಿಂತಿಸಿದ್ದು, ಗಾಂಧಿನಗರ ಅಥವಾ ಸರ್ವಜ್ಞನಗರ ಕ್ಷೇತ್ರದಿಂದ ಕಣಕ್ಕಿಳಿಯಬಹುದು. ಹಾಗಾದರೆ ಬೆಂಗಳೂರು ಕೇಂದ್ರ ಕ್ಷೇತ್ರದಿಂದ ರಾಜೀವ್ ಚಂದ್ರಶೇಖರ್ ಕಣಕ್ಕಿಳಿಯಬಹುದು ಎನ್ನಲಾಗಿದೆ.
ಈ ನಡುವೆ ಮಾಜಿ ಸಚಿವ ಕೆ.ಜೆ.ಜಾರ್ಜ್ ತಮ್ಮ ಪುತ್ರ ರಾಣಾ ಜಾರ್ಜ್‌ನನ್ನು ಸರ್ವಜ್ಞನಗರದಿಂದ ವಿಧಾನಸಭೆಗೆ ಕಣಕ್ಕಿಳಿಸಿ ಅವರು ಬೆಂಗಳೂರು ಸೆಂಟ್ರಲ್ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.
ಸಂಸದರಾದ ಶೋಭಾ ಕರಂದ್ಲಾಜೆ, ಶಿವಕುಮಾರ್ ಉದಾಸಿ, ರಮೇಶ್ ಜಿಗಜಿಣಗಿ, ಉಮೇಶ್ ಜಾಧವ್ ಕೂಡ ವಿಧಾನಸಭೆ ಪ್ರವೇಶಕ್ಕೆ ಒಲವು ಹೊಂದಿದ್ದಾರೆ. ಕ್ಷೇತ್ರವನ್ನೂ ಗುರುತಿಸಿಕೊಂಡು ವರಿಷ್ಠರ ಮುಂದೆ ಪ್ರಸ್ತಾವನೆ ಇಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಉದಾಸಿಯವರ ತಮ್ಮ ತಂದೆ ಪ್ರತಿನಿಧಿಸುವ ಹಾನಗಲ್, ಉಮೇಶ್ ಜಾಧವ್ ಚಿಂಚೋಳಿಯಿಂದ ಸ್ಪಧಿಸಬಹುದು. ಶೋಭಾ ಕರಂದ್ಲಾಜೆ ವಿಧಾನಸಭೆಗೆ ಸ್ಪರ್ಧಿಸಿದರೆ, ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಜಯಪ್ರಕಾಶ ಹೆಗ್ಡೆ ಸ್ಪರ್ಧಿಸಬಹುದು ಎಂದು ಹೇಳಲಾಗಿದೆ.
ಹಳ್ಳಿಹಕ್ಕಿಗೆ ಕೈ ಕನವರಿಕೆ :
ಮಂಡ್ಯ ಸಂಸದೆ ಸುಮಲತಾ ಬಿಜೆಪಿ ಸೇರ್ಪಡೆ ಮಾತುಗಳು ಕೇಳಿಬರುತ್ತಿರುವುದರಿಂದ ಜೆಡಿಎಸ್‌ನಿಂದ ನಿಖೀಲ್ ಕುಮಾರಸ್ವಾಮಿ ಸ್ಪರ್ಧಿಸುವುದು ಖಚಿತವಾಗಿದೆ. ಆದ್ದರಿಂದ ಕಾಂಗ್ರೆಸ್ ಪ್ರಬಲ ಅಭ್ಯರ್ಥಿಗೆ ತಲಾಷೆ ಆರಂಭಿಸಿದ್ದು, ಮಾಜಿ ಮುಖ್ಯಮಂತ್ರಿ ಕುಟುಂಬದ ಸದಸ್ಯರೊಬ್ಬರು ಅಭ್ಯರ್ಥಿಯಾಗುವ ಸಾಧ್ಯತೆಯೂ ಇದೆ ಎನ್ನಲಾಗಿದೆ. ಇದರ ನಡುವೆ ಹಳ್ಳಿಹಕ್ಕಿ ಖ್ಯಾತಿಯ ಎಚ್.ವಿಶ್ವನಾಥ್ ಮತ್ತೆ ಕಾಂಗ್ರೆಸ್‌ನತ್ತ ಚಿತ್ತ ಹರಿಸಿದ್ದು, ಪೂರ್ವಭಾವಿ ಮಾತುಕತೆಗಳು ಪ್ರಾರಂಭವಾಗಿವೆ. ಬಿಜೆಪಿಯಲ್ಲಿ ಇದ್ದೂ ಇಲ್ಲದಂತಾಗಿರುವ ಅವರನ್ನು ಕಾಂಗ್ರೆಸ್‌ಗೆ ಸೇರಿಸಿಕೊಳ್ಳಲು ಕೆಲವು ನಾಯಕರು ಆಸಕ್ತಿ ವಹಿಸಿ ಸಿದ್ದರಾಮಯ್ಯ ಮನವೊಲಿಸಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.
-ಎಸ್.ಲಕ್ಷ್ಮೀನಾರಾಯಣ