Advertisement

Xiamen Diamond League: ಫೈನಲ್‌ಗೆ ಅವಿನಾಶ್‌ ಸಾಬಲೆ

11:45 PM Sep 02, 2023 | Team Udayavani |

ಕ್ಸಿಯಾಮೆನ್‌ (ಚೀನ): ಅವಿನಾಶ್‌ ಸಾಬಲೆ ಮುಂದಿನ ತಿಂಗಳ ಯೂಜಿನ್‌ ಡೈಮಂಡ್‌ ಲೀಗ್‌ ಗ್ರ್ಯಾಂಡ್‌ ಫಿನಾಲೆಗೆ ಅರ್ಹತೆ ಸಂಪಾದಿಸಿದ್ದಾರೆ. ಅವರು ಕ್ಸಿಯಾಮೆನ್‌ ಡೈಮಂಡ್‌ ಲೀಗ್‌ನ 3,000 ಮೀ. ಸ್ಟೀಪಲ್‌ಚೇಸ್‌ನಲ್ಲಿ 5ನೇ ಸ್ಥಾನಿಯಾಗಿ ಸ್ಪರ್ಧೆ ಮುಗಿಸಿದರು.

Advertisement

28 ವರ್ಷದ ಅವಿನಾಶ್‌ ಸಾಬಲೆ ಬುಡಾಪೆಸ್ಟ್‌ನಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್‌ ಫೈನಲ್‌ ಪ್ರವೇಶಿಸುವಲ್ಲಿ ವಿಫ‌ಲರಾಗಿದ್ದರು. ಕ್ಸಿಯಾಮೆನ್‌ನಲ್ಲಿ ಈ ದೂರವನ್ನು 8 ನಿಮಿಷ, 16.27 ಸೆಕೆಂಡ್‌ಗಳಲ್ಲಿ ಮುಗಿಸಿ 5ನೆಯವರಾದರು. ಆದರೆ ಇದು ಪ್ರಸಕ್ತ ಸೀಸನ್‌ನಲ್ಲಿ ಅವರು ದಾಖಲಿಸಿದ್ದಕ್ಕಿಂತ ಹೆಚ್ಚಿನ ಸಮಯವಾಗಿದೆ (8:11.63 ಮತ್ತು 8:11.20 ಸೆಕೆಂಡ್ಸ್‌).

ಒಲಿಂಪಿಕ್‌ ಮತ್ತು ವಿಶ್ವ ಚಾಂಪಿ ಯನ್‌, ಮೊರೊಕ್ಕೋದ ಎಲ್‌ ಬಕ್ಕಾಲಿ (8:10.31 ಸೆ.), ಇಥಿಯೋಪಿಯಾದ ಸಾಮ್ಯುಯೆಲ್‌ ಫೈರ್‌ವು (8:11.29 ಸೆ.) ಮತ್ತು ಕೀನ್ಯಾದ ಅಮೋಸ್‌ ಸೆರಮ್‌ (8:14.41 ಸೆ.) ಮೊದಲ 3 ಸ್ಥಾನ ಪಡೆದರು.

2022ರ ಕಾಮನ್ವೆಲ್ತ್‌ ಗೇಮ್ಸ್‌ ಚಾಂಪಿಯನ್‌ ಆಗಿರುವ ಅವಿನಾಶ್‌ ಸಾಬಲೆ ಈ ರೇಸ್‌ನಿಂದ 4 ಅಂಕ ಗಳಿಸಿದರು. 4 ಸ್ಪರ್ಧೆಗಳಿಂದ ಅವರ ಒಟ್ಟು ಅಂಕ 11ಕ್ಕೆ ಏರಿತು. ಅವರು 6ನೇ ಸ್ಥಾನಿಯಾಗಿ ಡೈಮಂಡ್‌ ಲೀಗ್‌ ಗ್ರ್ಯಾಂಡ್‌ ಫಿನಾಲೆಯಲ್ಲಿ ಸ್ಪರ್ಧಿಸಲಿದ್ದಾರೆ. ಈ ಕೂಟ ಸೆ. 16ರಂದು ನಡೆಯಲಿದೆ. ಇಲ್ಲಿ ಸ್ಪರ್ಧೆಗಿಳಿಯುವ ಉಳಿದಿಬ್ಬರು ಭಾರತೀಯರೆಂದರೆ ನೀರಜ್‌ ಚೋಪ್ರಾ ಮತ್ತು ಮುರಳಿ ಶ್ರೀಶಂಕರ್‌. ಈ ವರ್ಷದ ಹಿಂದಿನ 3 ಡೈಮಂಡ್‌ ಲೀಗ್‌ ಸ್ಪರ್ಧೆಗಳಲ್ಲಿ ಅವಿನಾಶ್‌ ಸಾಬಲೆ ಕ್ರಮವಾಗಿ 10ನೇ (ಮೊರೊಕ್ಕೊ), 5ನೇ (ಸ್ಟಾಕ್‌ಹೋಮ್‌) ಮತ್ತು 6ನೇ ಸ್ಥಾನ (ಸಿಲೇಸಿಯಾ) ಪಡೆದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next