Advertisement

2021: ಬದುಕು ಕಲಿಸಿದ ಪಾಠ- ಚಿಗುರಿದ ಕನಸು;“ನನ್ನ ಪ್ರೀತಿಯ ಗುಜರಿ ಅಂಗಡಿ”

12:02 PM Jan 01, 2021 | Team Udayavani |

ಕೋವಿಡ್ ಎಲ್ಲರಿಗೂ ತೊಂದರೆ ಕೊಟ್ಟಂತೆ ನನಗೂ ಕೊಟ್ಟಿದೆ. ಬದುಕಿನ ಬಂಡಿ ಮತ್ತೆ ನನ್ನನ್ನು “ಗುಜರಿ ಅಂಗಡಿಗೆ” ತಂದು ನಿಲ್ಲಿಸಿದೆ. ಕಳೆದ ಇಪ್ಪತ್ತೈದು ವರ್ಷಗಳಿಂದ ನನ್ನ ಬದುಕನ್ನ ಕಟ್ಟಿಕೊಳ್ಳಲಿಕ್ಕೆ , ನನ್ನ ಪುಸ್ತಕ ಪ್ರೀತಿಗೆ, ನನ್ನ ಓದುವ ಹುಚ್ಚಿಗೆ, ನನ್ನ ಸಿನಿಮಾ ಪ್ರೀತಿಗೆ, ನನ್ನ ತಿರುಗಾಟದ ಕಾರಣಕ್ಕೆ ಎಲ್ಲವೂ ನನ್ನ ಪ್ರೀತಿಯ “ಗುಜರಿ ಅಂಗಡಿ”ಯೇ ಕಾರಣ!. 2020ರ ಮಾರ್ಚ್ 7 ಕ್ಕೆ ಬೆಂಗಳೂರು ಅಂತರರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ನನ್ನ ನಿರ್ದೇಶನದ “ಟ್ರಿಪಲ್ ತಲಾಖ್” ಭಾರತೀಯ ಉಪ ಭಾಷೆಗಳ ವಿಭಾಗದಲ್ಲಿನ ಪ್ರದರ್ಶನ  ಮುಗಿಸಿಕೊಂಡು ಊರಿಗೆ ಬಂದವನು ಮತ್ತೆ ಈ ತನಕ ಬೆಂಗಳೂರು ಕಡೆ ತಲೆ ಹಾಕಿ ಮಲಗಿಲ್ಲ?.

Advertisement

ಈ ಕೋವಿಡ್ ಕಾಲದಲ್ಲಿ ಕಳೆದ ಎಂಟು ತಿಂಗಳು ನನಗೆ ಸಾಕಷ್ಟು ಕಷ್ಟ ಮತ್ತು ನಷ್ಟದ ಜೊತೆಗೆ ಮಾನಸಿಕವಾಗಿ ತಲ್ಲಣಕ್ಕೆ ಕಾರಣವಾದವು. ಮೊದಲೇ ಕಳೆದ ಎಂಟು ವರ್ಷಗಳಿಂದ ಮಾನಸಿಕ ತಲ್ಲಣದ ಕಾರಣಕ್ಕಾಗಿ ಗೆಳೆಯ ವೈದ್ಯರ ಸಂಪರ್ಕದಲ್ಲಿದ್ದೆ. ಮುಂದೆ ಯಾವುದೆ ಕಾರಣಕ್ಕೂ ಅದು ಮರಕಳಿಸ ಬಾರದು ಎನ್ನುವ ಕಾರಣಕ್ಕೆ ಓದು, ಸಂಗೀತ , ಎಂಬತೈದರ ತಾಯಿ, ಹೆಂಡತಿ ಪುಟ್ಟ ಇಬ್ಬರೂ ಮಕ್ಕಳ ಜೊತೆಗೆ ಸಮಯ ಕಳೆದದ್ದು ಅಲ್ಲದೆ ಬೇರೆ ಬೇರೆ ಚಟುವಟಿಕೆಯ ಮೂಲಕ ಸಕ್ರಿಯನಾಗಿದ್ದೆ. ಆದರೆ ಹಣಕಾಸಿನ ತೊಂದರೆಯಾದಾಗ ಎಲ್ಲರಿಗೂ ಆಗುವ ತಲ್ಲಣ ನನಗೂ ಆಗಿದೆ. ಕಳೆದ ವರ್ಷ ನಾನು ಮತ್ತು ನನ್ನ ಮುಂಬೈನ ಹಿರಿಯ ಸ್ನೇಹಿತರ ಸಹಕಾರದಿಂದ ನನ್ನದೇ ನಿರ್ದೇಶನದಲ್ಲಿ ತಯಾರಾದ ನಾನು ಬಹಳಷ್ಟು ನಿರೀಕ್ಷೆ ಮತ್ತು ಕನಸನ್ನು ಕಟ್ಟಿಕೊಂಡಿದ್ದಂತಹ ಬಹಳ ಸೂಕ್ಷ್ಮ ಸಂವೇದನೆಯ ಬ್ಯಾರಿ ಭಾಷೆಯ ಚಲನಚಿತ್ರ” ಟ್ರಿಪಲ್ ತಲಾಖ್ ” ನ್ನು ವಿಶ್ವ ಮಟ್ಟದ ಅನೇಕ ಚಲನಚಿತ್ರೋತ್ಸವಕ್ಕೆ ಕಳಿಸಿದ್ದೆ. ಕೋವಿಡ್ ಕಾರಣಗಳಿಂದ ಅನೇಕ ಚಿತ್ರೋತ್ಸವಗಳು ರದ್ದುಗೊಳಿಸಿರುವ ಕಾರಣ ಮತ್ತೆ ನಾನು ಒತ್ತಡಕ್ಕೆ ಒಳಗಾಗ ಬೇಕಾಯಿತು. ಈ ಸಿನಿಮಾವನ್ನು ಎರಡು ವರ್ಷಗಳಿಂದ ತುಂಬಾ ಕಷ್ಟ ಪಟ್ಟು ಸಾಲ ಮಾಡಿಯೇ ಮಾಡಿದ್ದು. ನನ್ನ ಈ ಸಿನಿಮಾ ಹುಚ್ಚಿಗೆ ನನಗೆ ಆದಾಯ ಬರುತ್ತಿದ್ದ ಅಂಗಡಿ ಮುಚ್ಚಿದ್ದೆ?!…..

ಇದೀಗ ಮತ್ತೆ ತುಂಬಾ ಸಂತೋಷದಿಂದ ನನ್ನ ಬದುಕನ್ನ ಕಟ್ಟಿಕೊಳ್ಳುವ ಸಲುವಾಗಿ ಗೆಳೆಯನ ಸಹಕಾರದಿಂದ ನನ್ನ ಪ್ರೀತಿಯ ಊರು” ಗುಲ್ವಾಡಿ” ಯಲ್ಲೆ ಮತ್ತೆ “ಗುಜರಿ ಅಂಗಡಿ” ಯನ್ನು ತೆರೆದಿರುವೆ. ದಿನ ಮೈ ತುಂಬಾ ಕೆಲಸ, ಒಳ್ಳೆಯ ನಿದ್ರೆ, ಸಮಯ ಸಿಕ್ಕಾಗ ಸ್ವಲ್ಪ ಓದು ಮತ್ತೇ ಸಿನಿಮಾದ ಮೇಲಿನ ಆಸಕ್ತಿ, ವಿಶೇಷವಾಗಿ ಮಾನಸಿಕ ನೆಮ್ಮದಿ…

ಕೊನೆಯದಾಗಿ ಒಂದು ಸಿಹಿ ಸುದ್ದಿ: ಆಫಿಕಾದ ನೈಜೀರಿಯಾದಲ್ಲಿ ನಡೆಯುವ ಪ್ರತಿಷ್ಠಿತ 17 ನೇ “ಅಬುಜಾ ಅಂತರರಾಷ್ಟ್ರೀಯ ಚಲನ ಚಿತ್ರೋತ್ಸವ 2020 ಕ್ಕೆ ನನ್ನ ನಿರ್ದೇಶನದ ಬ್ಯಾರಿ ಭಾಷೆಯ ಸಿನಿಮಾ “ಟ್ರಿಪಲ್ ತಲಾಖ್” ಆಯ್ಕೆಯಾಗಿದೆ.

ಗೋಲ್ಡನ್ ಜ್ಯೂರಿ ಪ್ರೈಝ್,ಶ್ರೇಷ್ಠ ನಿರ್ದೇಶಕ  ಹಾಗೂ ಶ್ರೇಷ್ಠ ನಟಿ ವಿಭಾಗದಲ್ಲಿ ಚಿತ್ರ ಸ್ಪರ್ಧೆಯಲ್ಲಿದೆ. ಈ ಕಾರಣಕ್ಕೆ ನಿಮ್ಮೆಲ್ಲರ ಪ್ರೀತಿ, ಪ್ರೋತ್ಸಾಹ ನಮ್ಮ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಟೀಮ್ “ಗುಲ್ವಾಡಿ

ಟಾಕೀಸ್” ಮೇಲೆ ಇರಲಿ……ಹೊಸ ವರ್ಷದಲ್ಲಿ ನನ್ನ ಕನಸುಗಳು ಇನ್ನಷ್ಟು ಗರಿ ಬಿಚ್ಚತೊಡಗಿದೆ. ಕೋವಿಡ್ ಕಲಿಸಿದ ಪಾಠದೊಂದಿಗೆ ಬದುಕನ್ನು ಮುನ್ನಡೆಸಲೇಬೇಕಾಗಿದೆ. ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು.

Advertisement

 

ಪ್ರೀತಿಯಿಂದ

ಯಾಕೂಬ್ ಖಾದರ್ ಗುಲ್ವಾಡಿ

ರಾಷ್ಟ್ರ ಪ್ರಶಸಿ ಪಡೆದ ಕಲಾವಿದ

ಮೊಬೈಲ್ ಸಂಪರ್ಕ: 9448248982

Advertisement

Udayavani is now on Telegram. Click here to join our channel and stay updated with the latest news.

Next