Advertisement

2020ನೇ ಸಾಲಿನ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಪ್ರಕಟ

05:38 PM Jan 04, 2021 | Team Udayavani |

ಚಾಮರಾಜನಗರ: ಕರ್ನಾಟಕ ಜಾನಪದ ಅಕಾಡೆಮಿಯು 2020ನೇ ಸಾಲಿನ ಪ್ರಶಸ್ತಿಯನ್ನು ಘೋಷಣೆ ಮಾಡಿದ್ದು 30 ಜಿಲ್ಲೆಗಳ ತಲಾ ಒಬ್ಬ ಜಾನಪದ ಕಲಾವಿದರು ಹಾಗೂ ಇಬ್ಬರನ್ನು ತಜ್ಞ ಪ್ರಶಸ್ತಿಗೆ ಆಯ್ಕೆ ಮಾಡಿದೆ.

Advertisement

ವಾರ್ಷಿಕ ಗೌರವ ಜಾನಪದ ತಜ್ಞ ಪ್ರಶಸ್ತಿಗೆ ಇಬ್ಬರನ್ನು ಆಯ್ಕೆ ಮಾಡಲಾಗಿದೆ. ಜಾನಪದ ತಜ್ಞರಾದ ದಕ್ಷಿಣ ಕನ್ನಡ ಜಿಲ್ಲೆಯ ಡಾ. ಗಾಯತ್ರಿ ನಾವಡ ಅವರು ಡಾ. ಜೀ.ಶಂ. ಪಶಸ್ತಿಗೆ ಮತ್ತು ಕಲಬುರ್ಗಿ ಜಿಲ್ಲೆಯ ಬಸವರಾಜ ಸಬರದ ಅವರು ಡಾ. ಗದ್ದಗೀಮಠ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಚಾಮರಾಜನಗರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ, ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷೆ ಮಾತಾ ಬಿ. ಮಂಜಮ್ಮ ಜೋಗತಿ ಅವರು ಸುದ್ದಿಗೋಷ್ಠಿ ನಡೆಸಿ ಕರ್ನಾಟಕ ಅಕಾಡೆಮಿಯ 2020ನೇ ಸಾಲಿನ ವಾರ್ಷಿಕ ಪ್ರಶಸ್ತಿಗಾಗಿ ರಾಜ್ಯದ 30 ಜಿಲ್ಲೆಗಳ 30 ಹಿರಿಯ ಜಾನಪದ ಕಲಾವಿದರು ಹಾಗೂ ಇಬ್ಬರು ಜಾನಪದ ತಜ್ಞರನ್ನು ಆಯ್ಕೆ ಮಾಡಿರುವ ಪಟ್ಟಿ ಪ್ರಕಟಿಸಿದರು.

ಇದನ್ನೂ ಓದಿ:ಇಲ್ಲಿಯವರೆಗೆ ಒಂದು ರಾಜಕಾರಣ ಇನ್ಮುಂದೆ ನಿಜವಾದ ರಾಜಕಾರಣ ಆರಂಭ: ನಿಖಿಲ್ ಕುಮಾರಸ್ವಾಮಿ

ಪ್ರಶಸ್ತಿ ಪುರಸ್ಕೃತರ ವಿವರ ಇಂತಿದೆ:
ಬೆಂಗಳೂರು ಜಿಲ್ಲೆ ಎಂ.ಕೆ.ಸಿದ್ದರಾಜು-ಜಾನಪದಗಾಯನ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊನ್ನಗಂಗಮ್ಮ- ಸೋಬಾನೆಪದ, ರಾಮನಗರ ಜಿಲ್ಲೆ ತಿಮ್ಮಯ್ಯ-ತಮಟೆವಾದನ, ಕೋಲಾರ ಜಿಲ್ಲೆ ಕೆ.ಎನ್.ಚಂಗಪ್ಪ-ಭಜನೆತತ್ವಪದ, ಚಿಕ್ಕಬಳ್ಳಾಪುರ ಜಿಲ್ಲೆ ನಾರಾಯಣಪ್ಪ-ಕೀಲುಕುದುರೆ, ತುಮಕೂರು ಜಿಲ್ಲೆ ಸಿ.ವಿ.ವೀರಣ್ಣ-ವೀರಭದ್ರನಕುಣಿತ, ದಾವಣೆಗೆರೆ ಜಿಲ್ಲೆ ಭಾಗ್ಯಮ್ಮ-ಸೋಬಾನೆಹಾಡುಗಾರಿಕೆ, ಚಿತ್ರದುರ್ಗ ಜಿಲ್ಲೆ ಕೆಂಚಮ್ಮ-ಮದುವೆಹಾಡು, ಶಿವಮೊಗ್ಗ ಜಿಲ್ಲೆ ಕೆ.ಯುವರಾಜು-ಜಾನಪದಹಾಡುಗಾರಿಕೆ, ಮೈಸೂರು ಜಿಲ್ಲೆ ಕುಮಾರಸ್ವಾಮಿ-ಕಂಸಾಳೆಹಾಡುಗಾರಿಕೆ, ಮಂಡ್ಯ ಜಿಲ್ಲೆ ಭೂಮಿಗೌಡ-ಕೋಲಾಟ, ಹಾಸನ ಜಿಲ್ಲೆ ಗ್ಯಾರಂಟಿರಾಮಣ್ಣ-ಹಾಡುಗಾರಿಕೆ, ಚಿಕ್ಕಮಗಳೂರು ಜಿಲ್ಲೆ ಎಂ.ಸಿಭೋಗಪ್ಪ-ಚೌಡಿಕೆಪದ, ದಕ್ಷಿಣ ಕನ್ನಡ ಜಿಲ್ಲೆ ಗೋಪಾಲಕೃಷ್ಣ ಬಂಗೇರಾಮಧ್ವ-ಗೊಂಬೆಕುಣಿತ, ಉಡುಪಿ ಜಿಲ್ಲೆ ರಮೇಶ್ ಕಲ್ಮಾಡಿ-ಕರಗಕೋಲಾಟ, ಕೊಡಗು ಜಿಲ್ಲೆ ಕೆ.ಕೆ.ಪೊನ್ನಪ್ಪ-ಬೋಳೋಪಾಟ್, ಚಾಮರಾಜನಗರ ಜಿಲ್ಲೆ ಹೊನ್ನಮ್ಮ-ಸೋಬಾನೆಪದ, ಬೆಳಗಾವಿ ಜಿಲ್ಲೆ ಮುತ್ತಪ್ಪ ಅಲ್ಲಪ್ಪ ಸವದಿ-ತತ್ವಪದ, ಧಾರವಾಡ ಜಿಲ್ಲೆ ಮಲ್ಲೇಶಪ್ಪ ಫಕ್ಕೀರಪ್ಪತಡಸದ-ತತ್ವಪದ, ವಿಜಯಪುರ ಜಿಲ್ಲೆ ಸುರೇಶ ರಾಮಚಂದ್ರ ಜೋಶಿ-ಡೊಳ್ಳಿನಹಾಡುಗಾರಿಕೆ, ಬಾಗಲಕೋಟೆ ಜಿಲ್ಲೆ ಕೃಷ್ಣಪ್ಪ ಮಲ್ಲಪ್ಪ ಬೆಣ್ಣೂರ-ತತ್ವಪದ ಮತ್ತು ಭಜನೆ, ಉತ್ತರ ಕನ್ನಡ ಜಿಲ್ಲೆ ಸಹದೇವಪ್ಪ ಈರಪ್ಪ ನಡಗೇರಾ-ಲಾವಣಿಪದ, ಹಾವೇರಿ ಜಿಲ್ಲೆ ಬಸವರಾಜ ತಿರುಕಪ್ಪ ಶಿಗ್ಗಾಂವಿ-ತತ್ವಪದ, ಗದಗ ಜಿಲ್ಲೆ ಮುತ್ತಪ್ಪ ರೇವಣಪ್ಪ ರೋಣದ-ಪುರುವಂತಿಕೆ, ಕಲಬುರಗಿ ಜಿಲ್ಲೆ ಸಾಯಬಣ್ಣ-ಹಲಗೆವಾದನ, ಬೀದರ ಜಿಲ್ಲೆ ವೈಜಿನಾಥಯ್ಯ ಸಂಗಯ್ಯಸ್ವಾಮಿ-ಚಕ್ರಿಭಜನೆ, ರಾಯಚೂರು ಜಿಲ್ಲೆ ಜಂಬಣ್ಣ-ಹಗಲುವೇಷ, ಕೊಪ್ಪಳ ಜಿಲ್ಲೆ ತಿಪ್ಪಣ ಅಂಬಾಜಿ ಸುಗತೇಕರ -ಗೋಂದಲಿಗರು, ಬಳ್ಳಾರಿ ಜಿಲ್ಲೆ ಗೋಂದಳಿ ರಾಮಪ್ಪ-ಗೋಂದಳಿಪದ, ಯಾದವಗಿರಿ ಜಿಲ್ಲೆ ಗೋಗಿ ಬಸವ ಲಿಂಗಮ್ಮ-ಮದುವೆಹಾಡು.

Advertisement

ಜಾನಪದ ಕಲಾವಿದರಿಗೆ ತಲಾ 25 ಸಾವಿರ ರೂ ಪ್ರಶಸ್ತಿ ಮೊತ್ತದ ಜೊತೆಗೆ ಸ್ಮರಣಿಕೆ ನೀಡಿ ಗೌರವಿಸಲಾಗುತ್ತದೆ. ತಜ್ಞ ಪ್ರಶಸ್ತಿ ಪುರಸ್ಕೃತರಿಗೆ ತಲಾ 50ಸಾವಿರ ರೂ ಪ್ರಶಸ್ತಿ ಮೊತ್ತದ ಜೊತೆಗೆ ಸ್ಮರಣಿಕೆ, ನೀಡಿ ಗೌರವಿಸಲಾಗುತ್ತದೆ ಎಂದು ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷೆ ಮಾತಾ ಬಿ.ಮಂಜಮ್ಮ ಜೋಗತಿ ತಿಳಿಸಿದರು.

ಜಾನಪದ ಅಕಾಡೆಮಿಯ ಸದಸ್ಯ ಸಿ.ಎಂ. ನರಸಿಂಹಮೂರ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಚ್.ಕೆ ಗಿರೀಶ್ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

ಫೆಬ್ರವರಿ ಮೊದಲ ವಾರ ಚಾಮರಾಜನಗರದಲ್ಲಿ ಪ್ರಶಸ್ತಿ ಪ್ರದಾನ
ಜಾನಪದ ಅಕಾಡೆಮಿಯ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಚಾಮರಾಜನಗರದಲ್ಲಿ ಫೆಬ್ರವರಿ ಮೊದಲ ವಾರದಲ್ಲಿ ಆಯೋಜಿಸಲಾಗುವುದು. ಸಮಾರಂಭದ ದಿನಾಂಕ ನಿಗದಿಯಾಗಬೇಕಿದೆ. ಸಮಾರಂಭಕ್ಕೆ ಜಿಲ್ಲಾಡಳಿತದ ಸಹಕಾರ ಅಗತ್ಯವೆಂದು ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷೆ ಮಾತಾ ಬಿ.ಮಂಜಮ್ಮ ಜೋಗತಿ ತಿಳಿಸಿದರು.

ಕರ್ನಾಟಕ ಜಾನಪದ ಅಕಾಡೆಮಿ 1980ರಿಂದ 2019ರವರೆಗೆ 963 ಜಾನಪದ ಕಲಾವಿದರಿಗೆ ಹಾಗೂ 105 ಮಂದಿ ವಿದ್ವಾಂಸರು ಸೇರಿ 1068 ಮಂದಿಗೆ ಗೌರವ ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ ಎಂದು ಅವರು ತಿಳಿಸಿದರು.

ಜಿಲ್ಲಾಧಿಕಾರಿ ಡಾ. ಎಂ.ಆರ್ ರವಿ ಮಾತನಾಡಿ, ಜಾನಪದ ಕಲೆಗೂ ಚಾಮರಾಜನಗರ ಜಿಲ್ಲೆಗೂ ಅವಿನಾಭಾವ ಸಂಬಂಧ ಇದೆ. ಜಾನಪದ ಕಲೆಗಳ ತವರೂರೆಂದೇ ಕರೆಯಲ್ಪಡುವ ಚಾಮರಾಜನಗರ ಜಿಲ್ಲೆ ಕನ್ನಡ ಸಾಹಿತ್ಯ, ಭಾಷೆ, ವೈವಿಧ್ಯತೆಯಲ್ಲಿ ನಿಜವಾದ ಸೊಗಡು ಉಳಿಸಿಕೊಂಡು ಬಂದಿದೆ ಎಂದರು.

ಅಪಾರವಾದ ಜಾನಪದ ಸಂಪತ್ತು ಹೊಂದಿರುವ ಚಾಮರಾಜನಗರ ಜಿಲ್ಲೆಯಲ್ಲಿಯೇ ಕರ್ನಾಟಕ ಜಾನಪದ ಅಕಾಡೆಮಿ 2020ನೇ ಸಾಲಿನ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆಯೋಜಿಸುವ ಐತಿಹಾಸಿಕ ತೀರ್ಮಾನ ಕೈಗೊಂಡಿದೆ. ಇದಕ್ಕಾಗಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಜನತೆ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಕಾರ್ಯಕ್ರಮ ಆಯೋಜನೆಗೆ ಜಿಲ್ಲಾಡಳಿತದಿಂದ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ರವಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next