Advertisement

ಹುಬ್ಬಳ್ಳಿ ಮತಕೇಂದ್ರಗಳಿಗೆ 2020 ಸಿಬ್ಬಂದಿ

10:18 AM Apr 23, 2019 | pallavi |

ಹುಬ್ಬಳ್ಳಿ: ಧಾರವಾಡ ಲೋಕಸಭಾ ಚುನಾವಣೆ ಮುನ್ನಾ ದಿನವಾದ ಸೋಮವಾರ ಲ್ಯಾಮಿಂಗ್ಟನ್‌ ಶಾಲೆ ಹಾಗೂ ಮಹಿಳಾ ವಿದ್ಯಾಪೀಠದಲ್ಲಿ ಮತಗಟ್ಟೆ ಸಿಬ್ಬಂದಿಗೆ ಮತ ಯಂತ್ರಗಳು ಹಾಗೂ ಚುನಾವಣಾ ಸಾಮಗ್ರಿಯನ್ನು ವಿತರಿಸುವ ಮಸ್ಟರಿಂಗ್‌ ಕಾರ್ಯ ನಡೆಯಿತು.

Advertisement

ಲ್ಯಾಮಿಂಗ್ಟನ್‌ ಶಾಲೆಯಲ್ಲಿ ನಡೆದ ಮಸ್ಟರಿಂಗ್‌ನಲ್ಲಿ 72 ಹು-ಧಾ ಪೂರ್ವ ವಿಧಾನಸಭಾ ಕ್ಷೇತ್ರದ ಮತಗಟ್ಟೆಗಳಿಗೆ ಸಿಬ್ಬಂದಿ ನಿಯೋಜಿಸಲಾಯಿತು. ಪೂರ್ವ ಮತಕ್ಷೇತ್ರದಲ್ಲಿ 210 ಮತಗಟ್ಟೆಗಳಿವೆ. ಮತಗಟ್ಟೆ ಅಧಿಕಾರಿ, ಸಹಾಯಕ ಮತಗಟ್ಟೆ ಅಧಿಕಾರಿ, ಮತದಾನ ಸಹಾಯಕರನ್ನು ಸೇರಿ ಒಟ್ಟು 1008 ಸಿಬ್ಬಂದಿ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಒಂದು ಕೇಂದ್ರಕ್ಕೆ ಓರ್ವ ಪೊಲೀಸ್‌ ಸಿಬ್ಬಂದಿ ಸೇರಿದಂತೆ ಒಟ್ಟು 7 ಜನ ಸಿಬ್ಬಂದಿ ನೇಮಕ ಮಾಡಲಾಗಿದೆ. ಇದಲ್ಲದೇ ಹೆಚ್ಚುವರಿಯಾಗಿ 168 ಸಿಬ್ಬಂದಿಯನ್ನು ಮೀಸಲಿರಿಸಲಾಗಿದೆ.

ಮತದಾನ ಪ್ರಕ್ರಿಯೆಗೆ ತೆರಳುವ ಅಧಿಕಾರಿ, ಸಿಬ್ಬಂದಿ ಹಾಗೂ ಪೊಲೀಸರನ್ನು ಕರೆದುಕೊಂಡು ಹೋಗಲು ವಾಹನ ವ್ಯವಸ್ಥೆ ಕಲ್ಪಿಸಲಾಗಿದ್ದು, 20 ಜೀಪ್‌, 12 ಬಸ್‌, 59 ಮ್ಯಾಕ್ಸಿಕ್ಯಾಬ್‌ ಸೇರಿದಂತೆ ಒಟ್ಟು 94 ವಾಹನಗಳನ್ನು ಬಳಸಿಕೊಳ್ಳಲಾಗುತ್ತಿದೆ. ಒಟ್ಟು 69 ಮಾರ್ಗಗಳಲ್ಲಿ ವಾಹನಗಳು ಓಡಾಡಲಿವೆ ಎಂದು ಹುಬ್ಬಳ್ಳಿ ನಗರ ಹಾಗೂ ಗ್ರಾಮೀಣ ತಹಶೀಲ್ದಾರರಾದ ಶಶಿಧರ ಮಾಡ್ಯಾಳ ಹಾಗೂ ಸಂಗಪ್ಪ ಬಾಡಗಿ ತಿಳಿಸಿದ್ದಾರೆ.

ಮಹಿಳಾ ವಿದ್ಯಾಪೀಠದಲ್ಲಿ ನಡೆದ ಮಸ್ಟರಿಂಗ್‌ನಲ್ಲಿ 73 ಕೇಂದ್ರ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 253 ಮತಗಟ್ಟೆಗಳಿವೆ. ಮತಗಟ್ಟೆ ಅಧಿಕಾರಿ, ಸಹಾಯಕ ಮತಗಟ್ಟೆ ಅಧಿಕಾರಿ, ಮತದಾನ ಸಹಾಯಕರನ್ನು ಸೇರಿ ಒಟ್ಟು 1012 ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಮತದಾನ ಪ್ರಕ್ರಿಯೆಗೆ ತೆರಳುವ ಅಧಿಕಾರಿ, ಸಿಬ್ಬಂದಿ ಹಾಗೂ ಪೊಲೀಸರನ್ನು ಕರೆದುಕೊಂಡು ಹೋಗಲು ವಾಹನ ವ್ಯವಸ್ಥೆ ಕಲ್ಪಿಸಲಾಗಿದ್ದು, 21 ಜೀಪ್‌, 28 ಬಸ್‌, 44 ಮ್ಯಾಕ್ಸಿಕ್ಯಾಬ್‌ ಸೇರಿದಂತೆ ಒಟ್ಟು 96 ವಾಹನಗಳನ್ನು ಬಳಸಲಾಗುತ್ತಿದೆ. ಒಟ್ಟು 70 ಮಾರ್ಗಗಳಲ್ಲಿ ವಾಹನಗಳು ಸಂಚರಿಸಲಿವೆ ಎಂದು ಪಾಲಿಕೆ ಸಾರ್ವಜನಿಕ ಸಂಪರ್ಕ ಅಧಿಕಾರಿ ಮಾಹಿತಿ ನೀಡಿದರು.

ಬೆಳಿಗ್ಗೆ 6:00 ಗಂಟೆಯಿಂದಲೇ ಆರಂಭವಾದ ಮಸ್ಟರಿಂಗ್‌ ಕಾರ್ಯದಲ್ಲಿ ಚುನಾವಣಾ ಕರ್ತವ್ಯಕ್ಕೆ ನೇಮಕಗೊಂಡಿರುವ ಅಧಿಕಾರಿ- ಸಿಬ್ಬಂದಿಗಳು ಚುನಾವಣೆ ಕಾರ್ಯ ಹಾಗೂ ಮತಗಟ್ಟೆ ಬಂದೋಬಸ್ತಗಾಗಿ ನಿಯೋಜಿತಗೊಂಡಿರುವ ಪೊಲೀಸರು ಆಗಮಿಸಿದ್ದರು. ಈ ಸಂದರ್ಭದಲ್ಲಿ ಸಹಾಯಕ ಚುನಾವಣಾಧಿಕಾರಿಗಳಾದ ಪಾಲಿಕೆ ಆಯುಕ್ತ ಪ್ರಶಾಂತ ಕುಮಾರ್‌ ಮಿಶ್ರಾ, ಅಶೋಕ ಕಲಘಟಗಿ ಮಸ್ಟರಿಂಗ್‌ ಕಾರ್ಯದ ನೇತೃತ್ವ ವಹಿಸಿದ್ದರು.

Advertisement

ಸಿಬ್ಬಂದಿಗೆ ಸಕಲ ವ್ಯವಸ್ಥೆ

ಜಿಲ್ಲೆಯಲ್ಲಿ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಅಧಿಕಾರಿ-ಸಿಬ್ಬಂದಿಗೆ ಎಲ್ಲಾ ಸೌಲಭ್ಯ ಕಲ್ಪಿಸಲಾಗಿದೆ. ಜಿಲ್ಲಾಡಳಿತ, ಜಿಪಂ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಇಸ್ಕಾನ್‌ ಆಶ್ರಯದಲ್ಲಿ ಏ.23ರ ಬೆಳಿಗ್ಗೆ ಉಪಹಾರಕ್ಕೆ ಶಿರಾ, ಉಪ್ಪಿಟ್ಟು, ಮಧ್ಯಾಹ್ನ ಊಟಕ್ಕೆ ಅನ್ನ-ಸಾಂಬಾರು ನೀಡಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಆಹಾರ ಪೂರೈಕೆಗೆ 48 ಮಾರ್ಗ ಗುರುತಿಸಲಾಗಿದ್ದು, ಪ್ರತಿ ಮಾರ್ಗ ಮೂಲಕ 30 ರಿಂದ 40 ಮತಗಟ್ಟೆಗಳಿಗೆ ಆಹಾರ ನೀಡಲಾಗುವುದು. ಜಿಲ್ಲೆಯ ಎಲ್ಲ 1634 ಮತಗಟ್ಟೆಗಳಿಗೆ ನಿಯೋಜನೆಗೊಂಡಿರುವ ಸುಮಾರು 10 ಸಾವಿರ ಮತದಾನ ಸಿಬ್ಬಂದಿ, 3 ಸಾವಿರ ಸ್ವಯಂ ಸೇವಕರು, 1500 ಬಿಎಲ್ಒ, ಪಿಡಿಒ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು ಮತ್ತು 3 ಸಾವಿರಕ್ಕೂ ಅಧಿಕ ಪೊಲೀಸ್‌, ಅರೆಸೇನಾ ಪಡೆ ಉತ್ತಮ ಆಹಾರ ನೀಡಲಾಗುವುದು ಎಂದು ಶಿಕ್ಷಣ ಇಲಾಖೆ ಉಪನಿರ್ದೇಶಕ ಗಜಾನನ ಮನ್ನಿಕೇರಿ ತಿಳಿಸಿದರು.

ಕುಂದಗೋಳ: 25 ಸೂಕ್ಷ್ಮ, 33 ಅತೀ ಸೂಕ್ಷ್ಮ ಮತಗಟ್ಟೆಗಳು

ಕುಂದಗೋಳ: ಪಟ್ಟಣದ ತಾಪಂ ಕಟ್ಟಡದಲ್ಲಿ 1 ವಿಶೇಷ ಚೇತನರಿಗೆ, ಉರ್ದುಶಾಲೆ ಮತ್ತು ಪಟ್ಟಣ ಪಂಚಾಯಿತಿಯಲ್ಲಿ ತಲಾ 1 ರಂತೆ ಕ್ಷೇತ್ರಾದ್ಯಂತ 25 ಸೂಕ್ಷ್ಮ, 33 ಅತಿ ಸೂಕ್ಷ್ಮ ಸೇರಿದಂತೆ ಒಟ್ಟು 214 ಮತಗಟ್ಟೆಗಳನ್ನು ಆಯೋಜಿಸಲಾಗಿದೆ. 1032 ಸಿಬ್ಬಂದಿಗಳನ್ನು ನೇಮಿಸಲಾಗಿದ್ದು, ಸಿಬ್ಬಂದಿಗಳಿಗಾಗಿ 30 ಸರ್ಕಾರಿ ಬಸ್‌, 12 ಮ್ಯಾಕ್ಸಿಕ್ಯಾಬ್‌ ಹಾಗೂ 4 ಖಾಸಗಿ ಮಿನಿ ಬಸ್‌ಗಳನ್ನು ನಿಯೋಜಿಸಲಾಗಿದೆ. ಓರ್ವ ಡಿವೈಎಸ್‌ಪಿ, 4 ಜನ ಇನ್‌ಸ್ಪೆಕ್ಟರ್‌, 3 ಡಿಆರ್‌, 1 ಕೆಎಸ್‌ಆರ್‌ಪಿ ಮತ್ತು ಪಿಎಸ್‌ಐ, ಎಎಸ್‌ಐ ಸೇರಿ 11 ಸೆಕ್ಟರ್‌ ಅಧಿಕಾರಿಗಳು, ಹೋಮ್‌ಗಾರ್ಡ್‌ ಮತ್ತು ಪೊಲೀಸರು ಸೇರಿದಂತೆ ಒಟ್ಟು 400 ಸಿಬ್ಬಂದಿಗಳನ್ನು ಭದ್ರತೆಗಾಗಿ ನೇಮಿಸಲಾಗಿದೆ. ಪಟ್ಟಣದ 2 ಮತಗಟ್ಟೆಗಳಲ್ಲಿ 9ಬಣ್ಣಗಳಿಂದ ಸಂಯೋಜಿಸಿದ ಸಖೀ ಮತಗಟ್ಟೆಗಳಲ್ಲಿ ವಿಶೇಷವಾಗಿ ಮಕ್ಕಳ ಆಟಿಕೆಗಳನ್ನು ಇರಿಸಲಾಗಿದ್ದು, ರಂಗೋಲಿಯಿಂದ ಬಣ್ಣಮಯವಾಗಿಸಲಾಗಿದೆ. ಕುಂದಗೋಳ ವಿಧಾನಸಭಾ ಮತಕ್ಷೇತ್ರದಲ್ಲಿ 97457 ಪುರುಷ ಮತದಾರರು, 91820 ಮಹಿಳಾ ಮತದಾರರು, 4 ಜನ ಮಂಗಳಮುಖೀಯರು ಸೇರಿ ಒಟ್ಟು 189281 ಮತದಾರರು ಮತ ಚಲಾಯಿಸಲಿದ್ದಾರೆ.

420 ಸ್ವಯಂ ಸೇವಕರು

ಹುಬ್ಬಳ್ಳಿ ಧಾರವಾಡ ಪೂರ್ವ ಕ್ಷೇತ್ರದ 210 ಬೂತ್‌ಗಳಲ್ಲಿ ಎನ್ನೆಸ್ಸೆಸ್‌, ಎನ್‌ಸಿಸಿ ಹಾಗೂ ಸ್ಕೌಟ್ಸ್‌ ಸೇರಿದಂತೆ ಒಟ್ಟು 420 ವಿದ್ಯಾರ್ಥಿಗಳು ಕೇಂದ್ರದಲ್ಲಿ ಸೇವೆ ನೀಡಲಿದ್ದಾರೆ. ಇದಲ್ಲದೇ 11 ಜನ ವೈದ್ಯರು ಈ ಕ್ಷೇತ್ರದಲ್ಲಿ ಲೋಕಸಭೆ ಚುನಾವಣೆಗಾಗಿ ಕೆಲಸ ನಿರ್ವಹಿಸಲಿದ್ದಾರೆ.
Advertisement

Udayavani is now on Telegram. Click here to join our channel and stay updated with the latest news.

Next