Advertisement
ಶೌಚಾಲಯಗಳ ನಿರ್ಮಾಣದ ಪ್ರಗತಿಯಲ್ಲಿ ಕರಾವಳಿ ಹಾಗೂ ಮೈಸೂರು ಭಾಗದ ಜಿಲ್ಲೆಗಳು ಉತ್ತಮ ಸಾಧನೆ ಮಾಡಿದ್ದರೆ, ಹೈ-ಕದ ಕೊಪ್ಪಳ ಜಿಲ್ಲೆ ಹೊರತುಪಡಿಸಿ ಉಳಿದ 5 ಜಿಲ್ಲೆಗಳು ಮತ್ತು ಮುಂಬೈ ಕರ್ನಾಟಕದ ಹಲವು ಜಿಲ್ಲೆಗಳು ತೀರಾ ಕಳಪೆ ಪ್ರಗತಿ ಸಾಧಿಸಿವೆ. ಇದಕ್ಕೆ ಅಧಿಕಾರಿ ವರ್ಗದ ನಿರ್ಲಕ್ಷ್ಯದ ಜೊತೆಗೆ ಸಮಗ್ರ ಉತ್ತರ ಕರ್ನಾಟಕ ಭಾಗದ ಜನರ “ಸಾಮಾಜಿಕ ಮನೋಭಾವನೆ’ ಕಾರಣ ಎಂದು ಹೇಳಲಾಗುತ್ತಿದೆ. ಕರಾವಳಿ ಮತ್ತು ಹಳೆ ಮೈಸೂರು ಭಾಗ ಹೊರತು ಪಡಿಸಿದರೆ, ಉತ್ತರ ಕರ್ನಾಟಕ ಭಾಗದಲ್ಲಿ ಈಗಲೂ “ಬಯಲು ಬಹಿರ್ದೆಸೆ’ ವ್ಯವಸ್ಥೆಯನ್ನೇ ಜನ ಹೆಚ್ಚಾಗಿ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.
2016-17ನೇ ಸಾಲಿನ ಬಜೆಟ್‌ನಲ್ಲಿ 12.89 ಲಕ್ಷ ಶೌಚಾಲಯ ನಿರ್ಮಾಣ ಮಾಡುವ ಗುರಿ ಇಟ್ಟುಕೊಳ್ಳಲಾಗಿತ್ತು. ಆದರೆ, ಕಳೆದ 11 ತಿಂಗಳಲ್ಲಿ ಶೇ.50ರಷ್ಟು ಮಾತ್ರ ಗುರಿ ಸಾಧಿಸಲಾಗಿದ್ದು, ಇನ್ನುಳಿದ ಅರ್ಧದಷ್ಟು ಗುರಿಯನ್ನು ಕೇವಲ ಒಂದು ತಿಂಗಳಲ್ಲಿ ಸಾಧಿಸಬೇಕಾಗಿದೆ. 11 ತಿಂಗಳಲ್ಲಿ 6 ಲಕ್ಷ ಶೌಚಾಲಯ ನಿರ್ಮಾಣ ಆಗಿದ್ದರೆ, ಉಳಿದ 6 ಲಕ್ಷ ಶೌಚಾಲಯಗಳನ್ನು ಕೇವಲ ಒಂದು 1 ತಿಂಗಳಲ್ಲಿ ನಿರ್ಮಾಣ ಮಾಡಲು ಸಾಧ್ಯವೇ ಅನ್ನುವ ಪ್ರಶ್ನೆ ಈಗ ಉದ್ಭವಾಗಿದೆ. ಜೊತೆಗೆ 2013ರ ಬೇಸ್‌ಲೈನ್ ಸರ್ವೆ ಪ್ರಕಾರ ರಾಜ್ಯದಲ್ಲಿ 85.14 ಲಕ್ಷ ಕುಟುಂಬಗಳಿದ್ದು, ಆ ಪೈಕಿ 30.15 ಲಕ್ಷ ಕುಟುಂಬಗಳು ಶೌಚಾಲಯ ಹೊಂದಿವೆ. 54.99 ಲಕ್ಷ ಕುಟುಂಬಗಳಿಗೆ ಶೌಚಾಲಯಗಳಿಲ್ಲ. ಅದಕ್ಕಾಗಿ ಕಳೆದ 3 ವರ್ಷಗಳಲ್ಲಿ 28 ಲಕ್ಷ ಶೌಚಾಲಯಗಳನ್ನು ನಿರ್ಮಿಸಿದೆ. ಆದರೆ, ಕರ್ನಾಟಕ ಸಂಪೂರ್ಣ ಬಯಲು ಬಹಿರ್ದೆಸೆ ಮುಕ್ತ ರಾಜ್ಯ ಅಗಲು 20 ತಿಂಗಳಲ್ಲಿ ಇನ್ನೂ ಅಂದಾಜು 26 ಲಕ್ಷ ಕುಟುಂಬಗಳಿಗೆ ವೈಯುಕ್ತಿಕ ಶೌಚಾಲಯಗಳನ್ನು ನಿರ್ಮಿಸಬೇಕಾಗಿದೆ.
Related Articles
Advertisement
ಉಳಿದಂತೆ, ಚಿಕ್ಕಮಗಳೂರು ಶೇ.93, ಉತ್ತರ ಕನ್ನಡ ಶೇ.91, ರಾಮನಗರ ಶೇ.86, ಮಂಡ್ಯ ಶೇ.76, ಹಾಸನ ಶೇ.74, ಧಾರವಾಡ ಶೇ.73, ಕೊಪ್ಪಳ ಶೇ.72, ಮೈಸೂರು ಶೇ.71.39, ಚಿಕ್ಕಬಳ್ಳಾಪುರ ಶೇ.70.67, ಗದಗ ಶೇ.68.04, ಕೋಲಾರ ಶೇ.66.87, ದಾವಣಗೆರೆ ಶೇ.65.19, ಹಾವೇರಿ ಶೇ.62.30, ಬಳ್ಳಾರಿ ಶೇ.56.53, ಬೆಳಗಾವಿ ಶೇ.52.03, ಚಾಮರಾಜನಗರ ಶೇ.49.19, ಬಾಗಲಕೋಟೆ ಶೇ.48.65, ತುಮಕೂರು ಶೇ.47.03, ಚಿತ್ರದುರ್ಗ ಶೇ.46.79ರಷ್ಟು ಪ್ರಗತಿ ಸಾಧಿಸಿವೆ.
ಕೇಂದ್ರದಿಂದ 419 ಕೋಟಿ ರೂ.:ಕೇಂದ್ರ ಸರ್ಕಾರದ ಅಂಕಿ-ಅಂಶಗಳ ಪ್ರಕಾರ, ಶೌಚಾಲಯಗಳ ನಿರ್ಮಾಣಕ್ಕೆ ಪ್ರಸಕ್ತ ಸಾಲಿನಲ್ಲಿ ಕೇಂದ್ರ ಸರ್ಕಾರ, ಕರ್ನಾಟಕ ರಾಜ್ಯಕ್ಕೆ 419 ಕೋಟಿ ರೂ. ಮಂಜೂರು ಮಾಡಿದ್ದು, ಅದರಲ್ಲಿ 190 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಬಳಕೆ ಪ್ರಮಾಣ ಪತ್ರ ಹಾಗೂ ಪೂರಕ ದಾಖಲೆಗಳನ್ನು ಸಲ್ಲಿಸಿದ ಬಳಿಕ ಉಳಿದ ಹಣ ಬಿಡುಗಡೆ ಮಾಡಲಾಗುವುದು ಎಂದು ಕೇಂದ್ರ ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಸಚಿವಾಲಯದ ಮೂಲಗಳು ಹೇಳುತ್ತವೆ. ಅಲ್ಲದೇ ಇಲ್ಲಿವರೆಗೆ 1,500 ಕೋಟಿ ರೂ.ಗೂ ಹೆಚ್ಚು ಹಣ ಖರ್ಚು ಮಾಡಲಾಗಿದೆ ಎಂದು ರಾಜ್ಯದ ಗ್ರಾಮೀಣಭಿವೃದ್ದಿ ಇಲಾಖೆ ಮೂಲಗಳು ಹೇಳುತ್ತದೆ. 26 ಲಕ್ಷಕ್ಕೂ ಹೆಚ್ಚು ಶೌಚಾಲಯ ನಿರ್ಮಾಣ ಅಗತ್ಯ
ಕಳೆದ 3 ವರ್ಷಗಳಲ್ಲಿ ಅಂದಾಜು 28 ಲಕ್ಷ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಅದರಂತೆ ಇಲ್ಲಿವರೆಗೆ 5 ಜಿಲ್ಲೆಗಳು 20 ತಾಲೂಕುಗಳು ಹಾಗೂ 1 ಸಾವಿರ ಗ್ರಾಪಂಗಳನ್ನು ಬಯಲು ಬಹಿರ್ದೆಸೆ ಮುಕ್ತ ಎಂದು ಘೋಷಿಸಲಾಗಿದೆ. ಆದರೆ, ಇನ್ನೂ 26 ಜಿಲ್ಲೆಗಳು, 154 ತಾಲೂಕುಗಳು ಹಾಗೂ ಸುಮಾರು 5 ಸಾವಿರ ಗ್ರಾಪಂಗಳನ್ನು ಬಯಲು ಬಹಿರ್ದೆಸೆ ಮುಕ್ತ ಎಂದು ಘೋಷಿಸಲು ಸುಮಾರು 26 ಲಕ್ಷಕ್ಕೂ ಹೆಚ್ಚು ಶೌಚಾಲಯಗಳನ್ನು ನಿರ್ಮಿಸಬೇಕಾಗಿದೆ. ಇದಕ್ಕೆ ಉಳಿದಿರುವುದು 20 ತಿಂಗಳು ಮಾತ್ರ. – ರಫೀಕ್ ಅಹ್ಮದ್