ಹೊಸದಿಲ್ಲಿ: 2013ರ ಪಾಟ್ನಾ ಸರಣಿ ಸ್ಫೋಟ ಪ್ರಕರಣದ ನಾಲ್ವರು ಅಪರಾಧಿಗಳಿಗೆ ಸೋಮವಾರ ಪಾಟ್ನಾ ದ ಎನ್‌ಐಎ ಕೋರ್ಟ್ ಮರಣದಂಡನೆ ವಿಧಿಸಿದೆ. 9 ಅಪರಾಧಿಗಳ ಪೈಕಿ ಇಬ್ಬರಿಗೆ ಜೀವಾವಧಿ ಶಿಕ್ಷೆ, ಇನ್ನಿಬ್ಬರಿಗೆ 10 ವರ್ಷ ಮತ್ತು ಒಬ್ಬನಿಗೆ 7 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಕಳೆದ ವಾರ, ಎನ್‌ಐಎ ನ್ಯಾಯಾಲಯವು ಸ್ಫೋಟಕ್ಕೆ ಸಂಬಂಧಿಸಿದಂತೆ 10 ಜನರನ್ನು ದೋಷಿಗಳು ಎಂದು ಘೋಷಿಸಿತ್ತು.
ಆಗ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ರಾಜಕೀಯ ಸಭೆಯನ್ನು ಗುರಿಯಾಗಿರಿಸಿ ಸ್ಫೋಟ ನಡೆಸಲಾಗಿತ್ತು. ಸ್ಥಳದಲ್ಲಿ ಆರು ಮಂದಿ ಸಾವನ್ನಪ್ಪಿದರು ಮತ್ತು ಹಲವಾರು ಮಂದಿ ಗಾಯಗೊಂಡಿದ್ದರು.
ಇಮ್ತಿಯಾಜ್ ಅನ್ಸಾರಿ, ಮುಜಿಬುಲ್ಲಾ, ಹೈದರ್ ಅಲಿ, ಫಿರೋಜ್ ಅಸ್ಲಾಂ, ಒಮರ್ ಅನ್ಸಾರಿ, ಇಫ್ತೆಕರ್, ಅಹ್ಮದ್ ಹುಸೇನ್, ಉಮೈರ್ ಸಿದ್ದಿಕಿ ಮತ್ತು ಅಜರುದ್ದೀನ್ ಅವರನ್ನು ತಪ್ಪಿತಸ್ಥರೆಂದು ಘೋಷಿಸಲಾಗಿದ್ದು, ಫಕ್ರುದ್ದೀನ್ ಎಂಬಾತನನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ ಎಂದು ವರದಿಯಾಗಿದೆ.
ವಿಶೇಷ ಎನ್‌ಐಎ ನ್ಯಾಯಾಧೀಶ ಗುರ್ವಿಂದರ್ ಮೆಹ್ರೋತ್ರಾ ಅವರು ಸಾಕ್ಷ್ಯಾಧಾರಗಳ ಕೊರತೆಯಿಂದ ಓರ್ವ ಆರೋಪಿಯನ್ನು ಖುಲಾಸೆಗೊಳಿಸಿ ಆದೇಶ ನೀಡಿದ್ದಾರೆ.
ಎನ್‌ಐಎ ತನಿಖೆಯ ವೇಳೆ 11 ಜನರ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಲಾಗಿತ್ತು. ಇವರಲ್ಲಿ ಓರ್ವ ಅಪ್ರಾಪ್ತ ವಯಸ್ಕನಾಗಿದ್ದು, ಅವನ ಪ್ರಕರಣವನ್ನು ಬಾಲನ್ಯಾಯ ಮಂಡಳಿಗೆ ಉಲ್ಲೇಖಿಸಲಾಗಿತ್ತು. ಉಳಿದವರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು.
ಮೊದಲ ಸ್ಫೋಟವು ಪಾಟ್ನಾ ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್ ಸಂಖ್ಯೆ 10 ರಲ್ಲಿ ಸಂಭವಿಸಿತ್ತು, ಬಳಿಕ ‘ಹೊಂಕಾರ್’ ರ್‍ಯಾಲಿ’ಯ ಸ್ಥಳದಲ್ಲಿ ಹಲವು ಸ್ಫೋಟಗಳು ಸಂಭವಿಸಿದ್ದವು. ಗಾಂಧಿ ಮೈದಾನದಲ್ಲಿ ಸ್ಫೋಟ ಸಂಭವಿಸಿದಾಗ ಗುಜರಾತ್ ಸಿಎಂ ಆಗಿದ್ದ ನರೇಂದ್ರ ಮೋದಿ ಅವರು ಪಾಟ್ನಾ ವಿಮಾನ ನಿಲ್ದಾಣದಲ್ಲಿದ್ದರು. ಪರಿಸ್ಥಿತಿ ಹತೋಟಿಗೆ ಬಂದ ನಂತರ ಸ್ಥಳಕ್ಕೆ ಭೇಟಿ ನೀಡಿದ್ದರು.