Advertisement

2012ರ ಮಾರುತಿ ಫ್ಯಾಕ್ಟರಿ ಹಿಂಸೆ: 31 ಕಾರ್ಮಿಕರು ಅಪರಾಧಿಗಳು: ಕೋರ್ಟ್

03:10 PM Mar 10, 2017 | udayavani editorial |

ಹೊಸದಿಲ್ಲಿ : 2012ರಲ್ಲಿ ಮಾನೇಸರ್‌ನಲ್ಲಿನ ಮಾರುತಿ ಸುಜುಕಿ ಫ್ಯಾಕ್ಟರಿಯಲ್ಲಿ  ನಡೆದಿದ್ದ ಹಿಂಸಾ ಪ್ರಕರಣಕ್ಕೆ ಸಂಬಂಧಿಸಿ ಹರಿಯಾಣದ ಗುರ್ಗಾಂವ್‌ ನ ನ್ಯಾಯಾಲಯ 31 ಮಂದಿ ಕಾರ್ಮಿಕರನ್ನು ಅಪರಾಧಿಗಳೆಂದು ಘೋಷಿಸಿದೆ. ಶಿಕ್ಷೆಯ ಪ್ರಮಾಣ ಇನ್ನಷ್ಟೇ ಪ್ರಕಟವಾಗಬೇಕಿದೆ.

Advertisement

ಅಂದು ನಡೆದಿದ್ದ ಹಿಂಸೆಯಲ್ಲಿ ದೇಶದ ಅತೀ ದೊಡ್ಡ ಮಾರುತಿ ಕಾರು ಉತ್ಪಾದನೆಯ ಹರಿಯಾಣದ ಕಾರ್ಖಾನೆಯ ಮೇಲೆ ಮಾರಕಾಯುಧಗಳೊಂದಿಗೆ ದಾಳಿ ನಡೆಸಿದ್ದ ಉದ್ರಿಕ ಕಾರ್ಮಿಕ ಸಮೂಹವು ಕಾನ್ಫರೆನ್ಸ್‌ ಕೋಣೆಯಲ್ಲೇ ಎಚ್‌ ಆರ್‌ ಮ್ಯಾನೇಜರ್‌ ಅವನೀಶ್‌ ಕುಮಾರ್‌ ದೇವ್‌ ಎಂಬವರನ್ನು  ಜೀವಂತ ಸುಟ್ಟಿದ್ದರು.

ಮಾತ್ರವಲ್ಲದೆ ಕಾರ್ಖಾನೆಯ ಅಮೂಲ್ಯ ಸೊತ್ತುಗಳನ್ನು ನಾಶಪಡಿಸಿದ್ದರು. ಸುಮಾರು 150 ಕಾರ್ಮಿಕರನ್ನು ಅಂದು ಪೊಲೀಸರು ಬಂಧಿಸಿದ್ದರು. ಇವರ ವಿರುದ್ಧ ಕ್ರಿಮಿನಲ್‌ ಸಂಚು ಮತ್ತು ಕೊಲೆ ಆರೋಪವನ್ನು ಹೊರಿಸಲಾಗಿತ್ತು. 

ಈ ಪೈಕಿ 117 ಮಂದಿಯನ್ನು ಇಂದು ನ್ಯಾಯಾಲಯವು ಅಪರಾಧಿಗಳಲ್ಲವೆಂದು ತೀರ್ಮಾನಿಸಿ 31 ಮಂದಿಯನ್ನು ಅಪರಾಧಿಗಳೆಂದು ಘೋಷಿಸಿತು. 

ವರ್ಷಕ್ಕೆ  5,55,000 ಕಾರುಗಳನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿರುವ ಮಾನೇಸರ್‌ ಮಾರುತಿ ಘಟಕವನ್ನು ಅಂದು ಕಾರ್ಮಿಕರ ಕ್ಷೋಭೆಯಿಂದಾಗಿ ಒಂದು ತಿಂಗಳ ಕಾಲ ಮುಚ್ಚಲಾಗಿತ್ತು. ಒಬ್ಬ ಕಾರ್ಮಿಕನ ವಿರುದ್ಧ ಮಾರುತಿ ಆಡಳಿತವು ಕೈಗೊಂಡಿದ್ದ ಶಿಸ್ತುಕ್ರಮವನ್ನು ಪ್ರತಿಭಟಿಸಿ ಕಾರ್ಮಿಕರು ಮುಷ್ಕರ ಹೂಡಿದ್ದರು. 

Advertisement

ಮಾರುತಿ ಕಾರ್ಖಾನೆಯಲ್ಲಿ  ಅನೇಕ ತಾಸುಗಳ ಕಾಲ ಅಂದು ದುಂಡಾವರ್ತಿ, ಹಿಂಸೆ ನಡೆಸಿದ್ದ ಕಾರ್ಮಿಕರನ್ನು ಹದ್ದುಬಸ್ತಿಗೆ ತರಲು ಅಂದು 1,200 ಪೊಲೀಸ್‌ ಸಿಬಂದಿಗಳನ್ನು ಕರೆಸಿಕೊಳ್ಳಲಾಗಿತ್ತು. 

ಮಾರುತಿಯ ಮಾನೇಸರ್‌ ಉತ್ಪಾದನಾ ಘಟಕದಲ್ಲಿನ ಕಾರ್ಮಿಕರ ಸಂಖ್ಯೆಯ ಅರ್ಧದಷ್ಟು ಮಂದಿ ಗುತ್ತಿಗೆ ಕಾರ್ಮಿಕರಾಗಿದ್ದು ಅವರು ತಿಂಗಳಿಗೆ 6,000 ರೂ. ವೇತನ ಪಡೆಯುತ್ತಿದ್ದರು. ಇದು ಖಾಯಂ ನೌಕರರಿಗೆ ಸಿಗುತ್ತಿರುವ ವೇತನ ಮೂರನೇ ಒಂದಂಶವಾಗಿತ್ತು ಎಂದು ಅಂದು ಇಕಾನಮಿಕ್‌ ಟೈಮ್ಸ್‌ ವರದಿ ಮಾಡಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next