Advertisement
ಸಂಗೀತ, ಜಾನಪದ, ವಿಜ್ಞಾನವೂ ಒಳಗೊಂಡಂತೆ ನಾನಾ ಕ್ಷೇತ್ರದ ಸಾಧಕರನ್ನು ಹಿನ್ನೆಲೆ, ಶ್ರಮ, ಸಾಧನೆಯ ಹಾದಿ, ಯಶಸ್ಸು, ಹಿನ್ನಡೆಗಳ ಹಿನ್ನೋಟ, ಮುನ್ನೋಟ ಪರಿಚಯಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸುವ ತಿಂಗಳ ಕಾರ್ಯಕ್ರಮ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದ್ದು, 200ನೇ ಕಾರ್ಯಕ್ರಮದತ್ತ ಸಾಗಿದೆ.
Related Articles
Advertisement
ಶುರುವಾಗಿದ್ದು ಹೇಗೆ?: ಮನೆಯಂಗಳದಲ್ಲಿ ಮಾತುಕತೆಯಂತಹ ಅಪೂರ್ವ ಕಾರ್ಯಕ್ರಮವನ್ನು ಹುಟ್ಟು ಹಾಕಿದ ಹಿರಿಮೆ 2001ರಲ್ಲಿ ಇಲಾಖೆ ಆಯುಕ್ತ¤ರಾಗಿದ್ದ ಕೆ.ಸಿ.ರಾಮಮೂರ್ತಿ ಅವರಿಗೆ ಸಲ್ಲುತ್ತದೆ. ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿ ವರ್ಗಕ್ಕೆ ಸಾಧಕರ ಬಗ್ಗೆ ಮಾಹಿತಿ ಇರಲಿ ಎಂಬ ಕಾರಣಕ್ಕೆ ಕೆ.ಸಿ.ರಾಮೂರ್ತಿ ಅವರು ಮನೆಯಂಗಳದಲ್ಲಿ ಮಾತುಕತೆ ಎಂಬ ವಿಶಿಷ್ಟ ಕಾರ್ಯಕ್ರಮ ಆರಂಭಿಸಿದರು.
ಹೀಗೆ, ಪ್ರಾರಂಭವಾದ ಕಾರ್ಯಕ್ರಮವನ್ನು ಇಂದಿಗೂ ನಡೆದು ಬಂದಿದೆ. ಕಾರ್ಯಕ್ರಮದಲ್ಲಿ ಪಾಲ್ಗೊಂಡವರ ದೃಷ್ಟಿ ಹರಿಸಿದರೆ ಕನ್ನಡ ಸಾಹಿತ್ಯ, ಸಂಗೀತ, ಚಲನ ಚಿತ್ರ, ರಂಗಭೂಮಿ ಸೇರಿದಂತೆ ಹಲವು ಕ್ಷೇತ್ರಗಳ ಸಾಧಕರ ದೊಡ್ಡ ಪಟ್ಟಿಯೇ ಇದೆ.
ಈವರೆಗಿನ ಅತಿಥಿಗಳು: 2001ರ ಜ.19ರಂದು ಚಾಲನೆ ದೊರೆತ ಕಾರ್ಯಕ್ರಮದಲ್ಲಿ ಪ್ರಥಮ ಅತಿಥಿಯಾಗಿ ಸಾಹಿತಿ ಪ್ರೊ.ಎ.ಎನ್.ಮೂರ್ತಿ ರಾವ್ ಪಾಲ್ಗೊಂಡಿದ್ದರು. ಬಳಿಕ ಸಂಗೀತ ಸಾಧಕ ಪುಟ್ಟರಾಜ ಗವಾಯಿಗಳು, ರಂಗಭೂಮಿ ಸಾಧಕ ಏಣಗಿ ಬಾಳಪ್ಪ, ಹಿಂದೂಸ್ತಾನಿ ಗಾಯಕಿ ಗಂಗೂಬಾಯಿ ಹಾನಗಲ್ ಸೇರಿದಂತೆ ಹಲವು ಸಾಧಕರು ಮನೆಯಂಗಳದ ಅತಿಥಿಯಾಗಿ ಪಾಲ್ಗೊಂಡಿದ್ದರು.
50ನೇ ಅತಿಥಿಯಾಗಿ ಚಿತ್ರ ನಿರ್ದೇಶಕ ಎಂ.ಎಸ್.ಸತ್ಯು, 100ನೇ ಅಥಿತಿಯಾಗಿ ಡಾ.ಎಂ.ರಾಮಾ ಜೋಯಿಸ್, 150ನೇ ಅತಿಥಿಯಾಗಿ ರಂಗಭೂಮಿ ಕಲಾವಿದ ಪ್ರೊ.ಜಿ.ಕೆ. ಗೋವಿಂದರಾವ್ ಭಾಗವಹಿಸಿ ತಮ್ಮ ನೆನಪಿನ ಬುತ್ತಿಯನ್ನು ಹಂಚಿಕೊಂಡಿದ್ದರು.
ಹಾಗೆಯೇ ಹಿರಿಯ ನಟಿಯರಾದ ಬಿ.ಸರೋಜಾ ದೇವಿ, ಹರಿಣಿ, ಜಯಂತಿ, ಹಿರಿಯ ನಟರಾದ ರಾಜೇಶ್, ಶಿವರಾಮ್, ದ್ವಾರಕೀಶ್ ಸೇರಿದಂತೆ ಹಲವು ನಟ, ನಟಿಯರು ಭಾಗವಹಿಸಿದ್ದಾರೆ. ಕಾದಂಬರಿಕಾರ ಎಸ್.ಎಲ್.ಬೈರಪ್ಪ, ಸಾಹಿತಿ ಯು.ಆರ್.ಅನಂತ ಮೂರ್ತಿ ಸೇರಿದಂತೆ ಸಾಹಿತ್ಯ ಲೋಕದ ಸವ್ಯ ಸಾಚಿಗಳು ಇದರಲ್ಲಿ ಪಾಲ್ಗೊಂಡಿದ್ದಾರೆ.
ಯಾರಾಗ್ತಾರೆ ಇನ್ನೂರನೇ ಅತಿಥಿ?: ಪ್ರತಿ ತಿಂಗಳ ಮೂರನೇ ಶನಿವಾರದಂದು ಮನೆಯಂಗಳದಲ್ಲಿ ಮಾತುಕತೆ ಕಾರ್ಯಕ್ರಮ ನಡೆಯುತ್ತಿದೆ. ಹೀಗಾಗಿ ಸೂಕ್ತ ಅತಿಥಿಯ ಹುಡುಕಾಟದಲ್ಲಿ ಇಲಾಖೆ ನಿರತವಾಗಿದೆ. ಸುಮಾರು ನಾಲ್ಕರಿಂದ ಐದು ಮಂದಿ ಸಾಧಕರನ್ನು ಸಂಪರ್ಕಿಸುತ್ತಿದ್ದು, ಲಭ್ಯರಿರುವವರನ್ನು ಆಯ್ಕೆ ಮಾಡಿ ಆಹ್ವಾನ ನೀಡುವ ಸಂಪ್ರದಾಯವಿದೆ.
ಹಾಗಾಗಿ ಮನೆಯಂಗಳದಲ್ಲಿ 200ನೇ ಅತಿಥಿಯಾಗಿ ಯಾರು ಪಾಲ್ಗೊಳ್ಳಲಿದ್ದಾರೆ ಎಂಬ ಕುತೂಹಲ ಮೂಡಿದೆ. ಭಾರತ ರತ್ನ ಸಿ.ಎನ್.ಆರ್.ರಾವ್ ಮತ್ತು ಕಾದಂಬರಿಕಾರ ದೇವನೂರು ಮಹಾದೇವ ಅವರನ್ನು ಇಲಾಖೆಯ ಹಿರಿಯ ಅಧಿಕಾರಿಗಳು ಸಂಪರ್ಕಿಸಿದ್ದು, ಇದರಲ್ಲಿ ಒಬ್ಬರು ಅತಿಥಿಗಳಾಗಿ ಪಾಲ್ಗೊಳ್ಳುವ ನಿರೀಕ್ಷೆ ಇದೆ.
“ಮನೆಯಂಗಳದಲ್ಲಿ ಮಾತುಕತೆ’ ಇಲಾಖೆಯ ಅತ್ಯಂತ ಜನಪ್ರಿಯ ಕಾರ್ಯಕ್ರಮ. ಸಾರಸ್ವತ ಲೋಕದಲ್ಲಿ ಜನಮನ್ನಣೆ ಗಳಿಸಿರುವ ಈ ಕಾರ್ಯಕ್ರಮ ಇದೀಗ 200ರ ಸಂಭ್ರಮದಲ್ಲಿದ್ದು, ಇದನ್ನು ಮತ್ತಷ್ಟು ಯಶಸ್ವಿಗೊಳಿಸಲಾಗುವುದು.-ಎನ್.ಆರ್.ವಿಶುಕುಮಾರ್, ನಿರ್ದೇಶಕರು, ಕನ್ನಡ ಮತ್ತ ಸಂಸ್ಕೃತಿ ಇಲಾಖೆ * ದೇವೇಶ ಸೂರಗುಪ್ಪ