Advertisement

ಐಪಿಎಲ್‌ ರದ್ದಾದರೆ ಕನಿಷ್ಠ 3,500 ಕೋಟಿ ರೂ. ನಷ್ಟ

10:03 AM Mar 15, 2020 | Sriram |

ಹೊಸದಿಲ್ಲಿ: ಪ್ರೇಕ್ಷಕರ ಗೈರಿನಲ್ಲಿ ಐಪಿಎಲ್‌ ನಡೆಸುವುದು ಬಿಸಿಸಿಐಗೆ ಈಗಿರುವ ಅತ್ಯುತ್ತಮ ಅವಕಾಶ. ಹೀಗಾದರೆ ಟಿಕೆಟ್‌ ಹಣದಲ್ಲಿ ಬರುವ ಹತ್ತಿರ ಹತ್ತಿರ 224ರಿಂದ 300 ಕೋಟಿ ರೂ. ಕೈಬಿಟ್ಟು ಹೋಗಬಹುದು. ವರ್ಚಸ್ಸು ಒಂದಷ್ಟು ತಗ್ಗಬಹುದು. ಆದರೆ ಕೂಟವನ್ನು ಪೂರ್ಣ ರದ್ದು ಮಾಡಿದರೆ ಆಗುವ ನಷ್ಟವೆಷ್ಟು ಗೊತ್ತೇ? ಬಿಸಿಸಿಐ, 8 ಫ್ರಾಂಚೈಸಿಗಳು, ನೇರಪ್ರಸಾರ ಮಾಡುವ ಸ್ಟಾರ್‌ ನ್ಪೋರ್ಟ್ಸ್ಗೆ ಒಟ್ಟು ಸೇರಿ ಕನಿಷ್ಠ 3,000ದಿಂದ 3,500 ಕೋಟಿ ರೂ. ನಷ್ಟವಾಗುತ್ತದೆ.

Advertisement

ಐಪಿಎಲ್‌ ಎಂದರೆ ಕೇವಲ ಆಟ ಎಂದು ಬಹು ತೇಕರು ಅಂದುಕೊಂಡಿದ್ದಾರೆ. ಆದರೆ ಇದು ದೊಡ್ಡ ಉದ್ಯಮ. ಇದನ್ನು ನಂಬಿಕೊಂಡು ಸಾವಿರಾರು ಮಂದಿ ಜೀವನ ನಡೆಸುತ್ತಿದ್ದಾರೆ. ಈ ಒಂದು ವರ್ಷ ಹಲವರ ಜೀವನ ಅಭದ್ರಗೊಳ್ಳುತ್ತದೆ.

ಪ್ರಾಯೋಜಕತ್ವದ ಆದಾಯ ಖೋತಾ ಹಾಗೆಯೇ ಪ್ರಾಯೋಜಕರಿಂದ ಪ್ರತೀ ತಂಡವೂ ವರ್ಷಕ್ಕೆ 35ರಿಂದ 75 ಕೋಟಿ ರೂ. ಗಳಿಸುತ್ತವೆ. ಇದು ಒಂದು ತಂಡಕ್ಕೆ ಎಷ್ಟು ಪ್ರಾಯೋಜಕರಿದ್ದಾರೆ ಎನ್ನುವುದನ್ನು ಅವಲಂಬಿ ಸಿದೆ. ಟಿಕೆಟ್‌ ಸಂಗ್ರಹದಿಂದ 28ರಿಂದ 45 ಕೋಟಿ ರೂ.ಗಳ ವರೆಗೆ ನಷ್ಟವಾಗುತ್ತದೆ.

ಹೊಟೇಲ್‌, ವಿಮಾನ ಸಂಸ್ಥೆಗಳಿಗೂ ನಷ್ಟ
ಐಪಿಎಲ್‌ ಮೂಲಕ ಪ್ರತೀ ವರ್ಷ, ಹೊಟೇಲ್‌ಗ‌ಳು, ವಿಮಾನಯಾನ ಸಂಸ್ಥೆಗಳಿಗೆ 50 ಕೋಟಿ ರೂ. ಹಣ ಬರುತ್ತಿತ್ತು. ಕೂಟ ರದ್ದಾದರೆ ಆ ಹಣ ಇಲ್ಲವಾಗುತ್ತದೆ. ಎಲ್ಲ ಫ್ರಾಂಚೈಸಿಗಳು ಒಟ್ಟಾಗಿ 600 ವ್ಯಕ್ತಿಗಳನ್ನು ನಿಭಾಯಿಸುತ್ತವೆ. ಇದರಲ್ಲಿ ಗುತ್ತಿಗೆ ವ್ಯವಸ್ಥೆಗೆ ಬರದ ವ್ಯಕ್ತಿಗಳೂ ಇರುತ್ತಾರೆ. ಕೆಲವರು ಸಂಬಳಕ್ಕಾಗಿ ನಿಯುಕ್ತರಾಗಿರುತ್ತಾರೆ. ಕೂಟ ನಡೆಯದಿದ್ದರೆ ಈ ವ್ಯಕ್ತಿಗಳ ಕೆಲಸಕ್ಕೆ ಧಕ್ಕೆಯಾಗುತ್ತದೆ. ಹೀಗೆ 10 ಕೋಟಿ ರೂ. ಕೈಬಿಟ್ಟು ಹೋಗುತ್ತದೆ!

ಜನಸಾಮಾನ್ಯರಿಗೂ ಕಷ್ಟ
ಐಪಿಎಲ್‌ ನಂಬಿಕೊಂಡು ಜನಸಾಮಾನ್ಯರೂ ಇರುತ್ತಾರೆ. ಧ್ವಜ ಮಾರುವವರು, ಟೀ ಶರ್ಟ್‌ ಮಾರುವವರು, ಪಂದ್ಯದ ವೇಳೆ ಮುಖಕ್ಕೆ ಬಣ್ಣ ಹಾಕುವವರು, ಚೆಂಡು, ಬ್ಯಾಟ್‌ ಕಂಪೆನಿಗಳು ಇರುತ್ತವೆ. ಐಪಿಎಲ್‌ ರದ್ದಾದ ಕೂಡಲೇ ಅವರ ಜೀವನವೂ ಅತಂತ್ರಕ್ಕೆ ಸಿಲುಕುತ್ತದೆ. ಇವರಲ್ಲಿ ಬಹುತೇಕರು ಐಪಿಎಲ್‌ ಅನ್ನೇ ಗುರಿ ಮಾಡಿಕೊಂಡಿರುತ್ತಾರೆ. ಅವರ ಜೀವನೋಪಾಯ ದೊಡ್ಡ ಪ್ರಶ್ನೆ.

Advertisement

ಹಾಗೆಯೇ ಬೆಟ್ಟಿಂಗ್‌ ನಡೆಸುವವರಿಗೂ ಭಾರೀ ನಷ್ಟ ಎಂಬುದನ್ನು ಮರೆಯುವಂತಿಲ್ಲ.

ಬಿಸಿಸಿಐಗೆ ದೊಡ್ಡ ಲಾಸ್‌
ಬರೀ ಬಿಸಿಸಿಐಗೆ 2,000 ಕೋಟಿ ರೂ. ನಷ್ಟವಾಗುತ್ತದೆ. ಪ್ರತೀ ವರ್ಷ ಬಿಸಿಸಿಐಗೆ ಸ್ಟಾರ್‌ ನ್ಪೋರ್ಟ್ಸ್ನಿಂದ ಐಪಿಎಲ್‌ ನೇರಪ್ರಸಾರಕ್ಕಾಗಿ 3,000 ಕೋಟಿ ರೂ. ನೀಡಲ್ಪಡುತ್ತದೆ. ಶೀರ್ಷಿಕೆ ಪ್ರಾಯೋಜಕತ್ವಕ್ಕಾಗಿ ವಿವೋ 500 ಕೋಟಿ ರೂ. ನೀಡುತ್ತದೆ. ಇದರಲ್ಲಿ ಅರ್ಧದಷ್ಟನ್ನು ಬಿಸಿಸಿಐ ಫ್ರಾಂಚೈಸಿಗಳಿಗೆ ಹಂಚುತ್ತದೆ. ಕೂಟ ರದ್ದಾದರೆ ಈ ಹಣ ಬಿಸಿಸಿಐ ಕೈಸೇರುವುದಿಲ್ಲ. ನೇರಪ್ರಸಾರದಿಂದ ಬಿಸಿಸಿಐಗೆ ಬರುವ ಆದಾಯದಲ್ಲಿ, ತಲಾ 100 ಕೋಟಿ ರೂ.ಗಳನ್ನು ಎಂಟೂ ಫ್ರಾಂಚೈಸಿಗಳಿಗೆ ಹಂಚುತ್ತದೆ. ಹಾಗೆ ಪ್ರತೀ ಫ್ರಾಂಚೈಸಿಗೆ 100 ಕೋಟಿ ರೂ. ನಷ್ಟವಾಗುತ್ತದೆ. ಇನ್ನು ಬೇರೆ ಬೇರೆ ನಷ್ಟಗಳ ಲೆಕ್ಕಾಚಾರ ಬೇರೆ.

Advertisement

Udayavani is now on Telegram. Click here to join our channel and stay updated with the latest news.

Next