ಬೆಂಗಳೂರು: ನಂದಿಬೆಟ್ಟದಲ್ಲಿ ಪರಿಸರ ತಜ್ಞ ಅ.ನ.ಯಲ್ಲಪ್ಪರೆಡ್ಡಿ ಅವರ ಮಾರ್ಗದರ್ಶನ ಮತ್ತು ಬೆಂಗಳೂರು ಎನ್ವಿರಾನ್ಮೆಂಟ್ ಟ್ರಸ್ಟ್ ನೇತೃತ್ವದಲ್ಲಿ ಮೂರು ತಿಂಗಳಲ್ಲಿ 200 ಟನ್‌ನಷ್ಟು ಪ್ಲಾಸ್ಟಿಕ್ ಸಂಗ್ರಹಿಸಲಾಗಿದೆ.
ನಂದಿಬೆಟ್ಟದಲ್ಲಿ ದಿನದಿಂದ ದಿನಕ್ಕೆ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿರುವ ಜತೆಗೆ ಪರಿಸರಕ್ಕೆ ಧಕ್ಕೆಯಾಗುತ್ತಿದೆ ಎಂದು ಅ.ನ.ಯಲ್ಲಪ್ಪರೆಡ್ಡಿ ಎಚ್ಚರಿಸಿದ್ದಾರೆ. “ನಂದಿಬೆಟ್ಟದಲ್ಲಿ ಇರುವ ದೇವಸ್ಥಾನಗಳೇ ಅಲ್ಲಿನ ಇತಿಹಾಸವನ್ನು ತಿಳಿಸುತ್ತವೆ. ಆದರೆ, ಅದನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅಲ್ಲಿನ ಐದು ನದಿಗಳಗೆ ಸಂಪರ್ಕ ಕಲ್ಪಿಸುವ ಬೆಟ್ಟಗಳನ್ನು ಕಡಿದಿರುವುದರಿಂದ ಈಗ ನದಿಗಳ ಹರಿವು ಬರಿದಾಗಿದೆ.
ದೇವನಹಳ್ಳಿಯಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾರಂಭವಾದ ಮೇಲೆ ನಂದಿಬೆಟ್ಟದ ಮಾರ್ಗಗಳಲ್ಲಿ ಪ್ರತಿ ವರ್ಷ 2.ಲಕ್ಷದ 80 ಸಾವಿರ ಜನ ಸಂಚರಿಸುತ್ತಾರೆ. 2028ರ ವೇಳೆಗೆ 8 ಕೋಟಿ ಜನ ಬರುತ್ತಾರೆ ಎಂದು ಅಂದಾಜಿಸಲಾಗಿದೆ. ಇದರಿಂದ ವಾಯುಮಾಲಿನ್ಯ ಹೆಚ್ಚಾಗಲಿದೆ. ಈಗಾಗಲೇ ಅದರ ಪರಿಣಾಮಗಳು ಕಾಣಿಸಿಕೊಳ್ಳುತ್ತಿದೆ’ ಎನ್ನುತ್ತಾರೆ ಯಲ್ಲಪ್ಪರೆಡ್ಡಿ.
ಇಲ್ಲಿ ಪ್ಲಾಸ್ಟಿಕ್ ಜತೆಗೆ ಮೈಕ್ರೋಪ್ಲಾಸ್ಟಿಕ್ ಕಣಗಳೂ ಹೆಚ್ಚಾಗುತ್ತಿದ್ದು, ಇದನ್ನು ತೆಗೆಯುವುದರ ಬಗ್ಗೆ ಯೋಜನೆ ರೂಪಿಸಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಮುಖ್ಯ ದ್ವಾರದಲ್ಲೇ ಪ್ಲಾಸ್ಟಿಕ್ ತಡೆಯುವ ಬಗ್ಗೆಯೂ ಸರ್ಕಾರವನ್ನು ಕೋರಲಾಗುವುದು ಎಂದರು.
ನಂದಿಬೆಟ್ಟದಲ್ಲಿ ವೆಸ್ಟ್ ಪಾರ್ಕ್ ನಿರ್ಮಾಣ ಮಾಡಲಾಗಿದ್ದು, ಅದರ ಮೂಲಕ ಜನಜಾಗೃತಿ ಮೂಡಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಯೋಜನೆಗಳನ್ನು ರೂಪಿಸಿಕೊಂಡು ಇಲ್ಲಿನ ಪರಿಸರವನ್ನು ಉಳಿಸಿಕೊಳ್ಳುವ ಪ್ರಯತ್ನ ನಡೆಸಲಾಗುವುದು ಎಂದು ವಿವರಿಸಿದರು.