Advertisement

ಪ್ರವಾಹ ಪರಿಹಾರಕ್ಕೆ ಶೀಘ್ರ 200 ಕೋಟಿ

10:09 AM Sep 21, 2019 | Suhan S |

ಬೆಳಗಾವಿ: ಅತಿಯಾದ ಮಳೆ ಹಾಗೂ ನೆರೆ ಹಾವಳಿಯಿಂದ ಜಿಲ್ಲೆಯಲ್ಲಿ ಸುಮಾರು 11 ಸಾವಿರ ಕೋಟಿ ರೂ. ಹಾನಿಯಾಗಿದ್ದು ಪರಿಹಾರ ಕಾರ್ಯಗಳಿಗಾಗಿ ಈಗಾಗಲೇ 167 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಇದಲ್ಲದೇ ತಕ್ಷಣವೇ 200 ಕೋಟಿ ರೂ. ನೀಡುವುದಾಗಿ ಮುಖ್ಯಮಂತ್ರಿಗಳು ಹೇಳಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಹೇಳಿದರು.

Advertisement

ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನದ ಜವಾಬ್ದಾರಿ ವಹಿಸಿಕೊಂಡ ನಂತರ ಮೊದಲ ಬಾರಿಗೆ ನಗರಕ್ಕೆ ಆಗಮಿಸಿದ ಅವರು, ಜಿಲ್ಲಾಧಿಕಾರಿ ಕಚೇರಿ ಸಭಾಭವನದಲ್ಲಿ ಶುಕ್ರವಾರ ನೆರೆ ಹಾವಳಿ ಪ್ರದೇಶಗಳಲ್ಲಿನ ಪರಿಹಾರ ಕಾರ್ಯ ಹಾಗೂ ಸಂತ್ರಸ್ತರ ಸಮಸ್ಯೆಗಳ ಕುರಿತು ಅಧಿಕಾರಿಗಳು ಹಾಗೂ ರೈತರ ಸಭೆ ನಡೆಸಿ ಅವರು ಮಾತನಾಡಿದರು.

ಪ್ರವಾಹದಿಂದ ಸಂಪೂರ್ಣ ಮನೆ ಕಳೆದುಕೊಂಡಿರುವ ಸಂತ್ರಸ್ತ ಕುಟುಂಬಗಳಿಗೆ ಮನೆ ನಿರ್ಮಾಣಕ್ಕೆ ತಕ್ಷಣವೇ ಒಂದು ಲಕ್ಷ ರೂಪಾಯಿ ಬಿಡುಗಡೆ ಮಾಡಲು ಸಚಿವ ಸಂಪುಟ ಸಭೆ ನಿರ್ಧರಿಸಿದ್ದು, ಇದಕ್ಕಾಗಿ ಒಂದು ಸಾವಿರ ಕೋಟಿ ರೂಪಾಯಿ ಬಿಡುಗಡೆ ಮಾಡಲಾಗುತ್ತಿದೆ. ಬೆಳೆಹಾನಿ ಸಮೀಕ್ಷೆ ಪೂರ್ಣಗೊಂಡ ತಕ್ಷಣವೇ ಎನ್‌ ಡಿಆರ್‌ಎಫ್‌ ಮಾರ್ಗಸೂಚಿಯ ಜೊತೆಗೆ ರಾಜ್ಯ ಸರ್ಕಾರ ಸಹ ರೈತರಿಗೆ ವಿಶೇಷ ಪರಿಹಾರ ಪ್ರಕಟಿಸಲಿದೆ ಎಂದರು.

ರಾಜ್ಯದ ಪ್ರವಾಹ ಬಾಧಿತ ಪ್ರದೇಶಗಳಲ್ಲಿ ಮೂಲಸೌಕರ್ಯ ಸುಧಾರಣೆಗೆ ಲೋಕೋಪಯೋಗಿ ಇಲಾಖೆ 500 ಕೋಟಿ ಬಿಡುಗಡೆ ಮಾಡಿದೆ. ಹೀಗಾಗಿ ಪರಿಹಾರ ಕಾರ್ಯ ಕೈಗೊಳ್ಳಲು ಯಾವುದೇ ತೊಂದರೆಯಾಗದಂತೆ ಸರ್ಕಾರ ಕ್ರಮ ವಹಿಸಿದೆ ಎಂದು ಹೇಳಿದರು.

ಸದ್ಯಕ್ಕೆ ಹಾನಿ ಸರಿಪಡಿಸಿ ಸಾಮಾನ್ಯ ಸ್ಥಿತಿಗೆ ತರುವುದು ಸರ್ಕಾರದ ಆದ್ಯತೆಯಾಗಿದೆ. ಹಾನಿಯ ಗಂಭೀರತೆ ಅರಿತು ತಕ್ಷಣವೇ

Advertisement

ಪ್ರತಿ ಕುಟುಂಬಕ್ಕೆ ಹತ್ತು ಸಾವಿರ ರೂ.  ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗಿದೆ. ಸಮೀಕ್ಷೆ ಮತ್ತು ತಾಂತ್ರಿಕ ಲೋಪಗಳಿಂದ ಪರಿಹಾರದಿಂದ ವಂಚಿತಗೊಂಡ ಕುಟುಂಬಗಳಿಗೆ ಸಹ ತಕ್ಷಣ ಪರಿಹಾರ ನೀಡಲಾಗುವುದು. ಬೆಳೆಹಾನಿಯಾಗಿರುವುದರಿಂದ ಸಾಲ ವಸೂಲಾತಿ ಪ್ರಕ್ರಿಯೆ ಸ್ಥಗಿತಗೊಳಿಸಲು ಈಗಾಗಲೇ ಬ್ಯಾಂಕುಗಳಿಗೆ ಸೂಚನೆ ನೀಡಲಾಗಿದ್ದು, ಸಾಲಮನ್ನಾ ಬಗ್ಗೆ ಮುಖ್ಯಮಂತ್ರಿಗಳ ಜತೆ ಚರ್ಚೆ ನಡೆಸಲಾಗುವುದು ಎಂದು ಭರವಸೆ ನೀಡಿದರು.

ಸಭೆಯಲ್ಲಿ ಶಾಸಕರಾದ ಮಹಾಂತೇಶ ದೊಡ್ಡಗೌಡರ, ದುರ್ಯೋಧನ ಐಹೊಳೆ, ಅಭಯ ಪಾಟೀಲ, ಜಿಲ್ಲಾ ಪಂಚಾಯತ ಅಧ್ಯಕ್ಷೆ ಆಶಾ ಐಹೊಳೆ, ಪೊಲೀಸ್‌ ಆಯುಕ್ತ ಬಿ.ಎಸ್‌.ಲೋಕೇಶ್‌ ಕುಮಾರ್‌, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ರಾಜೇಂದ್ರ ಕೆ.ವಿ., ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next