ದುರ್ಗ್ : ಇಂತಹ ಸ್ಥಿತಿ ಕಸಾಯಿಖಾನೆಯಲ್ಲೂ ನೋಡಲು ಸಿಗದು,ಹಸಿವಿನಿಂದ ನರಳಿ ನರಳಿ 200 ಕ್ಕೂ ಹೆಚ್ಚು ಗೋವುಗಳು ಛತ್ತೀಸ್‌ಗಢದ ಬಿಜೆಪಿ ನಾಯಕನೊಬ್ಬ ನಡೆಸುತ್ತಿದ್ದ ಗೋಶಾಲೆಯಲ್ಲಿ ಮೃತಪಟ್ಟಿವೆ.
ರಾಜಾಪುರ್ ಎಂಬ ಹಳ್ಳಿಯಲ್ಲಿ ಬಿಜೆಪಿ ನಾಯಕ ಹರೀಶ್ ವರ್ಮಾ ನಡೆಸುತ್ತಿದ್ದ ಗೋಶಾಲೆಯಲ್ಲಿ ಸರಿಯಾದ ಮೇವು, ನೀರೂ ಸಿಗದೆ 200 ಗೋವುಗಳು ಮೃತಪಟ್ಟಿವೆ. ಇವುಗಳ ಪೈಕಿ ಕೆಲವು ಕಾಯಿಲೆಗಳಿಗೆ ತುತ್ತಾಗಿ ಸಾವನ್ನಪ್ಪಿವೆ ಎಂದು ಸ್ಥಳಕ್ಕಾಗಮಿಸಿದ ಪಶುವೈದ್ಯರು ತಿಳಿಸಿದ್ದಾರೆ.
ಗೋಶಾಲೆಯ ಸುತ್ತಲೂ ಸತ್ತ ಹಸುಗಳನ್ನು ಎಸೆಯಲಾಗಿದ್ದು ಪರಿಸರ ಗೊಬ್ಬು ನಾರುತ್ತಿದೆ . ಈ ಬಗ್ಗೆ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.ಗೋಶಾಲೆಗಳಲ್ಲಿರುವ ಇನ್ನೂ 50 ಕ್ಕೂ ಹೆಚ್ಚು ಹಸುಗಳು ಸಾವಿನಂಚಿನಲ್ಲಿವೆ.
ಘಟನೆಗೆ ಸಂಬಂಧಿಸಿ ಜಾಮೂಲ್ ನಗರ ನಿಗಮದ ಅಧ್ಯಕ್ಷನಾಗಿರುವ ಹರೀಶ್ ವರ್ಮಾನನ್ನು ಪೊಲೀಸರು ಬಂಧಿಸಿ ಜಾನುವಾರು ಸಂರಕ್ಷಣಾ ಕಾಯಿದೆ ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ವರ್ಮಾ ಹಸುಗಳು ಕಾಯಿಲೆಯಿಂದ ಸತ್ತಿವೆ, ಕೆಲವು ಗೋಡೆ ಬಿದ್ದು ಸತ್ತಿವೆ. ನನಗೆ ಗೋಶಾಲೆ ನಿರ್ವಹಿಸಲು ರಾಜ್ಯ ಸರ್ಕಾರ 2 ವರ್ಷಗಳಿಂದ ಎಷ್ಟೇ ಕೇಳಿದರೂ ಹಣವನ್ನೇ ನೀಡಿಲ್ಲ ಎಂದಿದ್ದಾರೆ.
ಈ ಘಟನೆ ಗೋಸಂರಕ್ಷಣೆಗಾಗಿ ಕಾನೂನು ರೂಪಿಸುವ ಛತ್ತೀಸ್‌ಗಢದ ಆಡಳಿತಾರೂಢ ಬಿಜೆಪಿಗೆ ತೀವ್ರ ಕಳಂಕ ತಂದಿಟ್ಟಿದೆ.