ಆಳಂದ: ಲಾಕ್‌ಡೌನ್ ಅವಧಿಯಲ್ಲಿ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಿಂದ ಸುಮಾರು 200 ಅರ್ಜಿಗಳು ದಾಖಲಾಗಿದ್ದು, ಈ ಎಲ್ಲ ಅರ್ಜಿಗಳಿಗೂ ಷರತ್ತು ಬದ್ಧ ಅನುಮತಿ ನೀಡಲಾಗಿದೆ.
ಪಟ್ಟಣ ಸೇರಿ ಗ್ರಾಮೀಣ ಭಾಗದಿಂದ ಮಹಾರಾಷ್ಟ್ರಕ್ಕೆ ವಿವಾಹ ಸಂಬಂಧ ಬಯಸಿದವರು ವಿವಾಹಕ್ಕೆ ಮುಂದಾಗಿ ಸಲ್ಲಿಸಿದ್ದ 15 ಅರ್ಜಿಗಳಿಗೆ ಪ್ರತಿಕ್ರಿಯಿಸಿದ ತಹಶೀಲ್ದಾರ್ ದಯಾನಂದ ಪಾಟೀಲ ಅವರು, ಸದ್ಯಕ್ಕೆ ಅನುಮತಿ ನೀಡಲಾಗದು ಎಂದು ತಿಳಿಸುವ ಮೂಲಕ ಈ ಎಲ್ಲ 15 ಅರ್ಜಿಗಳನ್ನು ತಿರಸ್ಕರಿಸಿದ್ದಾರೆ.
ಕೋವಿಡ್ ಹರಡದಂತೆ ಮುಂಜಾಗ್ರತಾ ಕ್ರಮದ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಪಾಲಿಸುವುದು ಹಾಗೂ ಆಡಂಬರ ಮತ್ತು ದುಂದು ವೆಚ್ಚಗಳ ಮದುವೆಗಳಿಗೆ ಸರ್ಕಾರ ಕಡಿವಾಣ ಹಾಕಿದ್ದರಿಂದ ಬಡ ಮತ್ತು ಮಧ್ಯಮ ವರ್ಗದ ಕುಟುಂಬಕ್ಕೆ ತಮ್ಮ ಮಕ್ಕಳ ಮದುವೆಗಳನ್ನು ಸರಳವಾಗಿ ಕೈಗೊಂಡು ನಿಟ್ಟುಸಿರು ಬಿಡುತ್ತಿದ್ದಾರೆ. ಇದುವರೆಗೂ ಮದುವೆಗೆ ಅರ್ಜಿ ಸಲ್ಲಿಸಿದ್ದ ಸುಮಾರು 200 ಕುಟುಂಬಗಳ ಪೈಕಿ ಬಹುತೇಕ ಮದುವೆಗಳು ಸರಳ ಮತ್ತು ಸಾಮಾಜಿಕ ಅಂತರದೊಂದಿಗೆ ನಡೆಯುತ್ತಿವೆ. ಈ ಬಗ್ಗೆ ಜನರು ಸಹ ಮುನ್ನೆಚ್ಚರಿಕಾ ಕ್ರಮವಾಗಿ ಹೇಗಾದರು ಆಗಲಿ ಮದುವೆಯೊಂದಾದರೆ ಸಾಕು ಎನ್ನುವ ಮಟ್ಟಕ್ಕೆ ಬಂದಿದ್ದು, ಮತ್ತೂಂಡೆ ಈ ವಿವಾಹಕ್ಕೆ ಮುಂದಾದ ಎರಡೂ ಕಡೆಯ ಕುಟುಂಬಗಳಿಗೆ ಸಂಬಂಧಿ ಕರನ್ನು ಕರೆಯಲಾಗುತ್ತಿಲ್ಲ ಎಂಬ ಕೊರಗಿನ ನಡುವೆ ಒಂದಿಷ್ಟು ಆರ್ಥಿಕ ಹೊರೆ ತಗ್ಗಿದ್ದು ಸಂತಸ ಮೂಡಿಸಿದೆ. ಮೇ 18, 19 ಮತ್ತು 20ರಂದು ಅತಿ ಹೆಚ್ಚಿನ ಮದುವೆಗಳು ನಡೆದಿವೆ.
ಷರತ್ತಿನಲ್ಲಿ ಏನೇನಿದೆ? : ವಿವಾಹ ಕೈಗೊಳ್ಳುವ ಕುಟುಂಬಗಳಿಗೆ ರಾಜ್ಯ ಸರ್ಕಾರವು ಕೆಲವು ಷರತ್ತಿಗೊಳಪಟ್ಟು ಅನುಮತಿ ನೀಡತೊಡಗಿದೆ. ನಿಗದಿ ಪಡಿಸಿದ ಸ್ಥಳ, ದಿನಾಂಕದಂತೆ ವಿವಾಹ ನಡೆಯಬೇಕು. ವಧು, ವರ ಸರ್ಕಾರ ನಿಗದಿ ಪಡಿಸಿದ ವಯಸ್ಸಿನವರಾಗಿರಬೇಕು. ಎರಡು ಕಡೆಯಿಂದ 10-15 ಜನರ ಮಾತ್ರ ಪಾಲ್ಗೊಳ್ಳಬೇಕು. ಎಲ್ಲರು ಮಾಸ್ಕ್ ಧರಿಸಬೇಕು. ಹ್ಯಾಂಡ್ ಸೈನಿಟೈಸರ್ ಕಡ್ಡಾಯವಾಗಿ ಬಳಸಬೇಕು. ಸಾಮಾಜಿಕ ಅಂತರ ಕಾಪಾಡಬೇಕು ಎಂಬ ಇನ್ನಿತರ ಸರ್ಕಾರ ನಿಬಂಧನೆಗಳಿದ್ದು, ಮದುವೆ ಮಾಡಿಕೊಳ್ಳುವ ಕುಟುಂಬಗಳು ಅರ್ಜಿ ಸಲ್ಲಿಸಿ ಅನುಮತಿ ಪಡೆಯುವುದು ಕಡ್ಡಾಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.