ಉಡುಪಿ: ಮಕ್ಕಳ ಶಿಕ್ಷಣ, ಆರೋಗ್ಯ ಹಾಗೂ ಕೊರೊನಾ ವಿಷಯ ವಾಗಿ ಜಿಲ್ಲೆಯಿಂದ 200 ದೂರು ಸ್ವೀಕರಿಸಿದ್ದು, ಪರಿಶೀಲಿಸಿ ಶೀಘ್ರ ಇತ್ಯರ್ಥಪಡಿಸಲು ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಉಡುಪಿ ಜಿಲ್ಲೆ ಬೇಟಿ ಬಚಾವೋ ಬೇಟಿ ಪಡಾವೋ ಸೇರಿದಂತೆ ಹಲವು ವಿಷಯಗಳಲ್ಲಿ ಉತ್ತಮ ಅರಿವು, ಜಾಗೃತಿ ಹೊಂದಿದೆ ಎಂದು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣ ಆಯೋಗದ ಅಧ್ಯಕ್ಷ ಪ್ರಿಯಾಂಕ್ ಕನೂಂಗೊ ಹೇಳಿದರು.
ಮಾನ್ಯತೆ ಪಡೆಯದೆ ಇರುವ ಅಥವಾ ಮ್ಯಾಪಿಂಗ್ ಮಾಡದೆ ಇರುವ ಮದ್ರಸಾಗಳಲ್ಲಿ ಶಿಕ್ಷಣ ಪಡೆಯುತ್ತಿರುವ ಮಕ್ಕಳಿಗೆ ಔಪಚಾರಿಕ ಶಿಕ್ಷಣ ಸಿಗುತ್ತಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ಮತ್ತು ಔಪಚಾರಿಕ ಶಿಕ್ಷಣ ಸಿಗದೆ ಇದ್ದಲ್ಲಿ ಅದರ ವ್ಯವಸ್ಥೆಯನ್ನು ಮಾಡುವಂತೆ ಜಿಲ್ಲಾ ಡಳಿತಕ್ಕೆ ನಿರ್ದೇಶನ ನೀಡಲಾಗಿದೆ ಎಂದು ಜಿಲ್ಲಾ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ತಿಳಿಸಿದರು.
ಪ್ರೌಢಶಾಲಾ ಮಕ್ಕಳಿಗೆ ಸ್ಯಾನಿಟರಿ ನ್ಯಾಪ್‌ಕಿನ್ ಪೂರೈಕೆ ಆಗದ ಬಗ್ಗೆ ದೂರುಗಳು ಬಂದಿವೆ. ಇದನ್ನು ಸರಕಾರದ ಗಮನಕ್ಕೆ ತರಲಾಗುವುದು. ಮುಖ್ಯವಾಗಿ ಬೀದಿಬದಿಯ ಮಕ್ಕಳಿಗೆ ಸೂಕ್ತವಾದ ನೀತಿಯನ್ನು ದೇಶದಲ್ಲಿ ತರಬೇಕಿದೆ ಮತ್ತು ಈ ಮಕ್ಕಳಿಗೆ ಸೂಕ್ತ ಪುನರ್ವಸತಿ ಕಲ್ಪಿಸುವುದು ಜಿಲ್ಲಾಡಳಿತದ ಜವಾಬ್ದಾರಿ. ಭಿಕ್ಷಾಟನೆಯಲ್ಲಿರುವ ಮಕ್ಕಳನ್ನು ಮತ್ತು ಅವರ ಕುಟುಂಬಗಳನ್ನು ಮುಖ್ಯವಾಹಿನಿಗೆ ತಂದು ಪುನರ್ವಸತಿ ಕಲ್ಪಿಸಬೇಕು. ಈ ಮಕ್ಕಳ ಜೀವನ ಕ್ರಮ ಸುಧಾರಣೆಗೆ ಪ್ರತ್ಯೇಕ ಮಾರ್ಗ ಸೂಚಿಯೂ ಇದೆ. ಅದನ್ನು ಜಿಲ್ಲಾಡಳಿತ ಗಳು ಪಾಲಿಸಬೇಕು ಎಂದರು.
ಜಿಲ್ಲೆಯಲ್ಲಿ ಮಕ್ಕಳ ಹಕ್ಕುಗಳ ಗಂಭೀರ ಉಲ್ಲಂಘನೆಯ ಪ್ರಕರಣ ಪತ್ತೆಯಾಗಿಲ್ಲ. ಆದರೆ ಚಿಕ್ಕ ಜಿಲ್ಲೆಯಲ್ಲಿ 14 ಅನಾಥಾಶ್ರಮಗಳ ಅಗತ್ಯ ಇರ ಲಿಲ್ಲ. ಸರಕಾರ ಅನಾಥಾಶ್ರಮಗಳ ಸಂಖ್ಯೆ ಕಡಿಮೆ ಮಾಡಿ, ಪುನರ್ವಸತಿಗೆ ಒಳಪಡುವ ಮಕ್ಕಳಿಗೆ ಸೂಕ್ತ ಮನೆಯ ವ್ಯವಸ್ಥೆ ಮಾಡಬೇಕು ಎಂದರು.
ರಾಜ್ಯ ಮ.ಹ. ರಕ್ಷಣ ಆಯೋಗದ ಅಧ್ಯಕ್ಷ ನಾಗಣ್ಣ ಗೌಡ, ಜಿಲ್ಲಾ ಮಹಿಳಾ, ಮಕ್ಕಳ ಅಭಿವೃದ್ಧಿ ಇಲಾಖೆ ಉ.ನಿ. ಶಿವಕುಮಾರಯ್ಯ ಇದ್ದರು.