ಬೆಂಗಳೂರು: ತಿಗಳರಪಾಳ್ಯ ಮುಖ್ಯರಸ್ತೆಯಲ್ಲಿ ದ್ವಿಚಕ್ರವಾಹನ ಸವಾರನ ಮೇಲೆ ಕಾರು ಹರಿಸಿ ಪರಾರಿಯಾಗಿದ್ದ ಆರೋಪಿಯನ್ನು ಕಾಮಾಕ್ಷಿಪಾಳ್ಯ ಸಂಚಾರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಹಾಸನದ ಚನ್ನರಾಯಪಟ್ಟಣ ಮೂಲದ ಖಾಜಾ ಮೊಯಿದ್ದೀನ್ (24) ಬಂಧಿತ ಆರೋಪಿ. ಶಶಿಕುಮಾರ್ (20) ಮೃತಪಟ್ಟ ದ್ವಿಚಕ್ರವಾಹನ ಸವಾರ.
200ಕ್ಕೂ ಹೆಚ್ಚು ಸಿಸಿ ಕ್ಯಾಮೆರಾ ಪರಿಶೀಲಿಸಿ ಆರೋಪಿಯನ್ನು ಬಂಧಿಸಿದ್ದಾರೆ. ನ.13ರಂದು ತಡರಾತ್ರಿ 2 ಗಂಟೆಯ ಸುಮಾರಿನಲ್ಲಿ ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ತಿಗಳರಪಾಳ್ಯ ಮುಖ್ಯ ರಸ್ತೆಯ ಕೆಂಪೇಗೌಡ ವೃತ್ತದಲ್ಲಿ ನಡೆದ ಅಪಘಾತ ನಡೆದಿತ್ತು. ದ್ವಿಚಕ್ರ ವಾಹನ ಸವಾರ ಶಶಿಕುಮಾರ್ ಪೀಣ್ಯ ಕಡೆಯಿಂದ ಗರುಡಪ್ಪ ಸರ್ಕಲ್ ಕಡೆಗೆ ವೇಗವಾಗಿ ಬರುತಿದ್ದರು. ಆಗ ಮುಖ್ಯ ರಸ್ತೆಯ ಎಡಭಾಗದಿಂದ ಏಕಾಏಕಿ ಯಾವುದೇ ಸೂಚನೆ ನೀಡದೆ, ಬಲತಿರುವ ಪಡೆಯಲು ಅಜಾರೂರುಕತೆಯಿಂದ ಬಂದ ಸಿಫ್ಟ್ ಕಾರೊಂದಕ್ಕೆ ಅಪಘಾತವಾಗುವುದನ್ನು ತಪ್ಪಿಸಲು ಶಶಿಕುಮಾರ್ ಬ್ರೇಕ್ ಹಾಕಿದ್ದರು. ಪರಿಣಾಮ ದ್ವಿಚಕ್ರ ವಾಹನವು ನಿಯಂತ್ರಣ ತಪ್ಪಿ ರಸ್ತೆ ಮೇಲೆ ಬಿದ್ದು, ಕಾರಿನ ಮುಂಭಾಗದಿಂದ ಸವರಿಕೊಂಡು ಹೋಗಿ ರಸ್ತೆಯ ಬಲಬದಿಯ ಕಂಬಕ್ಕೆ ಡಿಕ್ಕಿಯಾಗಿತ್ತು. ರಸ್ತೆ ಮೇಲೆ ಬಿದ್ದ ಸವಾರ ಸ್ವಿಫ್ಟ್ ಕಾರಿನ ಬಲ ಮುಂಭಾಗದ ಚಕ್ರದ ಬಳಿ ಬಿದ್ದು, ತಲೆಗೆ ಪೆಟ್ಟಾದ್ದರೂ ಸಿಫ್ಟ್ ಕಾರಿನ ಚಾಲಕ ಖಝಾ ಮೊಯಿದ್ದಿನ್ ಅಪಘಾತದ ಸ್ಥಳದಿಂದ ಪರಾರಿಯಾಗುವ ಅವಸರದಲ್ಲಿ ಕೆಳಗೆ ಬಿದ್ದ ಸವಾರನ ಮೇಲೆ ಕಾರಿನ ಚಕ್ರ ಹರಿಸಿ ನಂತರ ಹಿಂದಕ್ಕೆ ಬಂದು, ಕಾರನ್ನು ಎಡಕ್ಕೆ ತಿರುಗಿಸಿಕೊಂಡು ಸ್ಥಳದಿಂದ ಪರಾರಿಯಾಗಿದ್ದ. ದ್ವಿಚಕ್ರವಾಹನ ಸವಾರ ಶಶಿಕುಮಾರ್ ಮೃತಪಟ್ಟಿದ್ದ.
ಆರೋಪಿ ಸಿಕ್ಕಿಬಿದ್ದಿದ್ದು ಹೇಗೆ?: ಕಾಮಾಕ್ಷಿಪಾಳ್ಯ ಸಂಚಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದರು. ಆ ವೇಳೆ ಸ್ಥಳದಲ್ಲಿ ಲಭ್ಯವಿರುವ ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ ಕಾರಿನ ನೋಂದಣಿ ಸಂಖ್ಯೆ ಪತ್ತೆ ಆಗಿರಲಿಲ್ಲ. ಕೃತ್ಯ ನಡೆದಿದ್ದ ಸ್ಥಳದಿಂದ ಪಾರ್ಲೆಜೀ ಟೋಲ್ ವರೆಗೆ 200ಕ್ಕೂ ಹೆಚ್ಚು ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ ಮಂಜುನಾಥ್ ಎಂಬುವವರಿಗೆ ಸೇರಿದ ಕಾರನ್ನು ಮೊಹಿದ್ದೀನ್ ಓಡಿಸುತ್ತಿರುವ ಸುಳಿವು ಸಿಕ್ಕಿತ್ತು. ತಲೆಮರೆಸಿಕೊಂಡಿದ್ದ ವಾಹನದ ಮಾಲಿಕ ಮಂಜುನಾಥ್ ಮತ್ತು ಚಾಲಕ ಖಾಜಾ ಮೋಹಿದ್ದಿನ್ನನ್ನು ಪತ್ತೆ ಮಾಡಿದ್ದರು.