Advertisement

200 ಎಕ್ರೆ ಭೂಸ್ವಾಧೀನ: ಕೆಐಎಡಿಬಿ ನಿರ್ಧಾರ 

10:22 AM Dec 17, 2018 | |

ಮಹಾನಗರ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಣ್ಣ ಹಾಗೂ ಬೃಹತ್‌ ಕೈಗಾರಿಕೆಗಳಿಗೆ ಮತ್ತಷ್ಟು ಉತ್ತೇಜನ ನೀಡುವ ಉದ್ದೇಶದಿಂದ ಹೊಸ ಕೈಗಾರಿಕಾ ಪ್ರದೇಶ ಅಭಿವೃದ್ಧಿಗೆ ಕೆಐಎಡಿಬಿ ನಿರ್ಧರಿಸಿದೆ. ಅದರಂತೆ ಮೂಲ್ಕಿ ಸಮೀಪವಿರುವ ಕರ್ನಿರೆ, ಅತಿಕಾರಿಬೆಟ್ಟು ಗ್ರಾಮಗಳಲ್ಲಿ ಒಟ್ಟು 200 ಎಕ್ರೆ ಜಮೀನನ್ನು ಸ್ವಾಧೀನಪಡಿಸಲು ಉದ್ದೇಶಿಸಲಾಗಿದೆ.

Advertisement

ಮಂಗಳೂರು ನಗರವನ್ನು ಕೇಂದ್ರಿಕೃತವಾಗಿ ಕಾರ್ಯನಿರ್ವಹಿಸುವ ಸಣ್ಣ ಹಾಗೂ ಬೃಹತ್‌ ಕೈಗಾರಿಕೆಗಳ ವಿಸ್ತರಣೆಗೆ ಮಂಗಳೂರು ಹೊರವಲಯದಲ್ಲಿ ಭೂಮಿ ನೀಡುವಂತೆ ವಿವಿಧ ಕೈಗಾರಿಕಾ ಸಂಸ್ಥೆಗಳು ನೀಡಿದ ಮನವಿ ಆಧಾರದಲ್ಲಿ ಕರ್ನಿರೆ, ಅತಿಕಾರಿಬೆಟ್ಟು, ಬಳ್ಕುಂಜೆ ಭಾಗದಲ್ಲಿ ಭೂಮಿ ಲಭ್ಯತೆಯ ಬಗ್ಗೆ ಪರಿಶೀಲಿಸಲಾಗಿದೆ. ಭೂಸ್ವಾಧೀನಕ್ಕೆ ಪ್ರಾರಂಭಿಕ ಸರ್ವೆ ನಡೆಸಲಾಗಿದ್ದು, ಭೂಮಿ ಕೈಗಾರಿಕೆಗಳಿಗೆ ಯೋಗ್ಯವಾಗಿದೆ ಎಂಬ ವರದಿ ಲಭ್ಯವಾಗಿದೆ. 200 ಎಕ್ರೆ ಜಮೀನನ್ನು ಸ್ವಾಧೀನಪಡಿಸಲು ಕೈಗಾರಿಕಾ ಇಲಾಖೆ ಅಭಿವೃದ್ಧಿ ಅಧಿಕಾರಿಗಳೊಂದಿಗೆ ಜಂಟಿ ಸ್ಥಳ ತನಿಖೆ ಅಭಿಪ್ರಾಯ ತಿಳಿಸಲು ಕೆಐಎಡಿಬಿಯ ಬೆಂಗಳೂರಿನ ವಿಶೇಷ ಜಿಲ್ಲಾಧಿಕಾರಿ ಅವರು ಈ ಹಿಂದೆ ತಿಳಿಸಿದ್ದರು. ಅದರಂತೆ ಕೆಲವು ತಿಂಗಳ ಹಿಂದೆ ಜಮೀನು ಪರಿಶೀಲನೆ ನಡೆಸಲಾಗಿತ್ತು.

ಭೂಸ್ವಾಧೀನಗೊಳ್ಳುವ ಜಮೀನಿನ ಸರ್ವೆ ನಂಬರ್‌ ಮಾಹಿತಿಯನ್ನು ಗ್ರಾಮ ನಕ್ಷೆಯಲ್ಲಿ ಗುರುತಿಸುವ ಕಾರ್ಯ ಸದ್ಯ ಪ್ರಗತಿಯಲ್ಲಿದೆ. ಇದಕ್ಕಾಗಿ, ಮಂಗಳೂರಿನ ತಾಲೂಕು ಕಚೇರಿಯಿಂದ ಆರ್‌ಟಿಸಿ, ಆಕಾರ ಬಂಧು, ಖಾತಾದಾರರ ವಿವರವನ್ನು ಪಡೆಯಲಾಗುತ್ತಿದೆ.

ಜಮೀನಿನ ತರಹೆ, ಜಮೀನಿನಲ್ಲಿರುವ ಧಾರ್ಮಿಕ ಸ್ಥಳಗಳು, ಭೌತಿಕ ಲಕ್ಷಣ/ ಕೃಷಿ ವಿವರವನ್ನು ಪರಿಶೀಲಿಸಿಕೊಂಡು ಕೆಐಎಡಿಬಿ ಬೆಂಗಳೂರು ಕಚೇರಿಗೆ ವಿವರ ನೀಡಲು ಮಂಗಳೂರು ಕೆಐಎಡಿಬಿ ಇಲಾಖೆ ನಿರ್ಧರಿಸಿದೆ. ಆ ಬಳಿಕ ಭೂಸ್ವಾಧೀನದ ಮುಂದಿನ ಕ್ರಮಕೈಗೊಳ್ಳಲು ಚಿಂತಿಸಲಾಗಿದೆ.

200 ಎಕ್ರೆ ಹೊಸ ಭೂಮಿ ಸಣ್ಣ, ಬೃಹತ್‌ ಕೈಗಾರಿಕೆಗಳಿಗೆ ದೊರಕಿದರೆ, ವಿವಿಧ ರೀತಿಯ ಸಣ್ಣ ಕೈಗಾರಿಕೆಗಳು ಇಲ್ಲಿ ಸ್ಥಾಪನೆಯಾಗುವ ನಿರೀಕ್ಷೆಯಿದೆ. ಲಭ್ಯವಾಗುವ ಜಮೀನಿನಲ್ಲಿ ಪೂರಕವಾದ ನೀರು, ರಸ್ತೆ, ವಿದ್ಯುತ್‌ ಸಹಿತ ಸರ್ವ ಸೌಕರ್ಯ ದೊರೆತರೆ ಕೈಗಾರಿಕೆಗಳ ಅಭಿವೃದ್ಧಿಗೆ ಕಾರಣವಾಗಬಹುದು ಎಂಬುದು ಸಣ್ಣ ಕೈಗಾರಿಕೆಯ ಪ್ರಮುಖರೊಬ್ಬರ ಅಭಿಪ್ರಾಯ.

Advertisement

7,599 ಎಕ್ರೆ ಭೂಮಿ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು ಸುಮಾರು 7,599 ಎಕ್ರೆ ಭೂಮಿ ಹಾಗೂ ಉಡುಪಿ ಜಿಲ್ಲೆಯಲ್ಲಿ ಒಟ್ಟು 2,158 ಎಕ್ರೆ ಭೂಮಿ ಸಹಿತ ಒಟ್ಟು ಸುಮಾರು 9,757 ಎಕ್ರೆ ಭೂಮಿ ಕೆಐಎಡಿಬಿ ವಶದಲ್ಲಿದೆ. ದ.ಕ, ಜಿಲ್ಲೆಯ ಬೈಕಂಪಾಡಿಯಲ್ಲಿ 541.49 ಎಕ್ರೆ ಭೂಮಿಯನ್ನು ವಿವಿಧ ಉದ್ಯಮಿಗಳಿಗೆ ಈಗಾಗಲೇ ಹಂಚಿಕೆ ಮಾಡಲಾಗಿದೆ. ಜೆಸ್ಕೋದ (ಬೈಕಂಪಾಡಿ) 437.82 ಎಕ್ರೆ ಭೂಮಿಯನ್ನು ಹಂಚಿಕೆ ಮಾಡಿ ಉಳಿದ ಜಾಗ 12 ಎಕ್ರೆ ಸಿಆರ್‌ಜೆಡ್‌ ವ್ಯಾಪ್ತಿಯಲ್ಲಿದೆ. ಮೂಲ್ಕಿಯ ಕಾರ್ನಾಡಿನಲ್ಲಿ 65.85 ಎಕ್ರೆ ಜಮೀನಿದ್ದು, ಇದನ್ನು ಹಂಚಿಕೆ ಮಾಡಲಾಗಿದೆ. ಪುತ್ತೂರಿನಲ್ಲಿ 21.40 ಎಕ್ರೆ ಭೂಮಿಯಿದ್ದು ಇದನ್ನು ಸ್ಥಳೀಯ ಕೈಗಾರಿಕಾ ಸಂಸ್ಥೆಗೆ ಹಸ್ತಾಂತರಿಸಲಾಗಿದೆ. ತಣ್ಣೀರುಬಾವಿಯಲ್ಲಿ 124.50 ಎಕ್ರೆಯ ಪೈಕಿ ಹಂಚಿಕೆ ಮಾಡಿ, ಉಳಿದಿರುವ ಜಾಗ ತಕರಾರಿನಿಂದ ಕೂಡಿದೆ. ಇಪಿಐಪಿ 1ನೇ, 2ನೇ ಹಂತದಲ್ಲಿ 205.16 ಎಕ್ರೆ ಭೂಮಿಯಿದ್ದು, ಇದರಲ್ಲಿ ಮೊದಲನೇ ಹಂತ ಹಂಚಿಕೆ ನೀಡಿದ್ದು, ಎರಡನೇ ಹಂತ ಪ್ಲಾಸ್ಟಿಕ್‌ ಪಾರ್ಕ್‌ ಸ್ಥಾಪನೆ ಬಗ್ಗೆ ಪ್ರಸ್ತಾವಿಸಲಾಗಿದೆ.

ಐಟಿ-ಎಸ್‌ಇಜೆಡ್‌ನ‌ಲ್ಲಿ 81.19 ಎಕ್ರೆ ಭೂಮಿಯನ್ನು ಹಂಚಿಕೆ ನೀಡಿದ್ದು, ಉಳಿದ ಪ್ರದೇಶವನ್ನು ಮಹಿಳಾ ಉದ್ಯಮಿಗಳ ಪಾರ್ಕ್‌ಗೆ ಪ್ರಸ್ತಾವನೆ ಕಳುಹಿಸಲಾಗಿದೆ. ನಾನ್‌-ಎಸ್‌ಇಜೆಡ್‌ನ‌ಲ್ಲಿ 64.93 ಎಕ್ರೆ ಭೂಮಿಯನ್ನು ಹಂಚಿಕೆ ಮಾಡಲಾಗಿದೆ. ಮುಡಿಪು ಸಮೀಪದ ಇರಾ ವ್ಯಾಪ್ತಿಯ ಕೆನರಾ ಕೈಗಾರಿಕಾ ಪ್ರದೇಶದಲ್ಲಿ 585.66 ಎಕ್ರೆ ಭೂಮಿ ಇದ್ದು, ಇದರಲ್ಲಿ ಹಂಚಿ ಉಳಿದ ಜಾಗ (290.39 ಎಕ್ರೆ) ಇತರ ಹಂಚಿಕೆಗೆ ಲಭ್ಯವಿದೆ. ಜತೆಗೆ ಜಿಲ್ಲೆಯಲ್ಲಿ ಏಕಘಟಕ ಸಂಕೀರ್ಣಕ್ಕಾಗಿ 5,471.9549 ಎಕ್ರೆ ಭೂಮಿಯನ್ನು ಈಗಾಗಲೇ ಹಂಚಲಾಗಿದೆ.

ಪ್ರಾರಂಭಿಕ ಪರಿಶೀಲನೆ
ಕರ್ನಿರೆ, ಅತಿಕಾರಿಬೆಟ್ಟುವಿನಲ್ಲಿ ಹೊಸ ಕೈಗಾರಿಕಾ ಪ್ರದೇಶ ಅಭಿವೃದ್ಧಿಗೆ ಉದ್ದೇಶಿಸಲಾಗಿದ್ದು, ಭೂಪರಿಶೀಲನೆಯ ಪ್ರಾಥಮಿಕ ಸಿದ್ಧತೆ ನಡೆಸಲಾಗುತ್ತಿದೆ. ಕೈಗಾರಿಕೆಗಳಿಗೆ ಭೂಮಿ ನೀಡುವಂತೆ ಆಗ್ರಹದ ಮೇರೆಗೆ 200 ಎಕ್ರೆ ಭೂಸ್ವಾಧೀನದ ಪ್ರಕ್ರಿಯೆ ಈಗ ಪರಿಶೀಲನ ಹಂತದಲ್ಲಿದೆ.
 – ದಾಸೇಗೌಡ, ವಿಶೇಷ
ಭೂಸ್ವಾಧೀನಾಧಿಕಾರಿ ಕೆಐಎಡಿಬಿ ಮಂಗಳೂರು

 ಪ್ರಾಥಮಿಕ ಹಂತದ ಸಮೀಕ್ಷೆ
ಮಂಗಳೂರು ತಾಲೂಕಿನ ಕರ್ನಿರೆ, ಅತಿಕಾರಿಬೆಟ್ಟುವಿನಲ್ಲಿ ಭೂಮಿಯನ್ನು ಪರಿಶೀಲಿಸಲಾಗಿದ್ದು, ಪ್ರಾಥಮಿಕ ಹಂತದ ಸಮೀಕ್ಷೆ ನಡೆಯುತ್ತಿದೆ. ವಿವಿಧ ಕೈಗಾರಿಕಾ ಸಂಘಗಳು ಈ ಭೂಮಿಯನ್ನು ಕೆಐಎಡಿಬಿ ಅವರಿಗೆ ತೋರಿಸಿದ್ದು, ಅವರು ಮುಂದಿನ ಪ್ರಕ್ರಿಯೆ ನಡೆಸಲಿದ್ದಾರೆ.
– ಗೋಕುಲ್‌ದಾಸ್‌
ನಾಯಕ್‌, ಜಂಟಿ ನಿರ್ದೇಶಕರು
ಜಿಲ್ಲಾ ಕೈಗಾರಿಕಾ ಕೇಂದ್ರ, ಮಂಗಳೂರು

ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next