ಆದರೆ ರಾಜ್ಯದ ನಾಲ್ಕೂವರೆ ದಶಕಗಳ ಅಂಕಿ-ಅಂಶಗಳ ಪ್ರಕಾರ ಸರಾಸರಿ ಎರಡು ವರ್ಷಕ್ಕೊಮ್ಮೆ ಮಾತ್ರ ವಾಡಿಕೆ
ಮಳೆ ಆಗುತ್ತಿದೆ. ಕಳೆದ 46 ವರ್ಷಗಳ ಜೂನ್ 1ರಿಂದ ಜುಲೈ 15ರವರೆಗಿನ ಅಂಕಿ-ಅಂಶಗಳನ್ನು ವಿಶ್ಲೇಷಿಸಿದರೆ,
18 ರಿಂದ 20 ವರ್ಷಗಳು ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಹಾಗಾಗಿ, ಮುಂಗಾರು ಪ್ರವೇಶಿಸಿದ ಮೊದಲೆರಡು ತಿಂಗಳು ವಾಡಿಕೆ ಮಳೆ ಆಗದಿರುವುದು ಕರ್ನಾಟಕದ ಪಾಲಿಗೆ ಸರ್ವೇಸಾಮಾನ್ಯವಾಗಿದೆ.
Advertisement
1971ರಿಂದ 2017ರವರೆಗೆ ಮುಂಗಾರು ಪ್ರವೇಶದ ಮೊದಲ ಒಂದೂವರೆ ತಿಂಗಳಲ್ಲಿ ಹೆಚ್ಚು-ಕಡಿಮೆ 20 ಬಾರಿ ವಾಡಿಕೆಗಿಂತ ಕನಿಷ್ಠ ಶೇ. 10ರಿಂದ ಗರಿಷ್ಠ 43ರಷ್ಟು ಕಡಿಮೆ ಮಳೆಯಾಗಿದೆ. ಕೇವಲ 12 ಬಾರಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಅಂದರೆ, ರಾಜ್ಯದಲ್ಲಿ ಇತ್ತೀಚಿನ ವರ್ಷಗಳಲ್ಲಿ ಮಳೆ ಸುಸ್ಥಿರತೆ ಕಡಿಮೆಯಾಗುತ್ತಿದೆ. ಅದರಲ್ಲೂ 2001ರಿಂದ 2017ರವರೆಗೆ 9 ಬಾರಿ ಈ ಅವಧಿಯಲ್ಲಿ ವಾಡಿಕೆಗಿಂತ ಕನಿಷ್ಠ ಶೇ. 13ರಿಂದ ಗರಿಷ್ಠ ಶೇ. 43ರಷ್ಟು ಕಡಿಮೆ ಮಳೆ ದಾಖಲಾಗಿದೆ. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ, ಹವಾಮಾನ ಇಲಾಖೆ ಈ ಅಂಕಿ-ಅಂಶ ನೀಡಿದೆ.
Related Articles
ಈಗ ಮುಂದಿನ ಒಂದೆರಡು ವಾರಗಳಲ್ಲಿ ಉತ್ತಮ ಮಳೆಯಾದರೆ, ಒಂದೂವರೆ ತಿಂಗಳ ಅಂಕಿ-ಅಂಶಗಳೆಲ್ಲಾ ತಲೆಕೆಳಗಾಗುತ್ತವೆ. ಹಾಗಾಗಿ, ಈಗಲೇ ಈ ಬಗ್ಗೆ ಹೇಳುವುದು ಕಷ್ಟ ಎಂದು ಹವಾಮಾನ ಇಲಾಖೆ ಬೆಂಗಳೂರು ಪ್ರಾದೇಶಿಕ ಕಚೇರಿ ನಿರ್ದೇಶಕ ಎಲ್.ರಮೇಶ್‌ಬಾಬು ಹೇಳುತ್ತಾರೆ.
Advertisement
ದೇಶದಲ್ಲೇ ಎರಡನೇ ಅತಿ ಹೆಚ್ಚು ಒಣಭೂಮಿ ಹೊಂದಿರುವ ಹಾಗೂ ಈ ಒಣಭೂಮಿಯಲ್ಲಿ ಅತ್ಯಧಿಕ ಕೃಷಿ ಚಟುವಟಿಕೆಗಳನ್ನು ಮಾಡುತ್ತಿರುವ ರಾಜ್ಯ ಕರ್ನಾಟಕ. ಅದೆಲ್ಲವೂ ಮಳೆಯನ್ನು ಅವಲಂಬಿಸಿದೆ. ಆದ್ದರಿಂದ ಮಳೆಯ ಸುಸ್ಥಿರತೆಯಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಅದು ಇಡೀ ಕೃಷಿ ಆರ್ಥಿಕತೆಯ ಏರುಪೇರಿಗೆ ಕಾರಣವಾಗಲಿದೆ. ಸತತ ಎರಡು ವರ್ಷಗಳೂ ಇದೇ ಆಗಿದೆ. ಈ ಎರಡೂ “ಬರ ಸಿಡಿಲು’ ಗಳಿಂದ ರೈತರು ಇನ್ನೂ ಚೇತರಿಸಿ ಕೊಂಡಿಲ್ಲ, ಅಷ್ಟರಲ್ಲಿ ಪ್ರಸಕ್ತ ಸಾಲಿಗೂ ಮಳೆ ಕೊರತೆ ಮತ್ತೆ ರೈತರಲ್ಲಿ ಚಿಂತೆಗೆ ಕಾರಣವಾಗಿದೆ.