ನವದೆಹಲಿ: ಕಳೆದ ಎರಡು ದಶಕಗಳಿಂದ ದೆಹಲಿ ಮತ್ತು ಉತ್ತರಪ್ರದೇಶದಲ್ಲಿ ಸುಮಾರು 33 ಪ್ರಕರಣಗಳಲ್ಲಿ ಭಾಗಿಯಾಗಿದ್ದ ನಟೋರಿಯಸ್ ದರೋಡೆಕೋರನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:Mangaluru: ಇಬ್ಬರು ಮುಸ್ಲಿಂ ಯುವಕರ ಜೊತೆ ಹಿಂದೂ ಯುವತಿ; ಮೂವರು ಪೊಲೀಸ್ ವಶಕ್ಕೆ
ಆರೋಪಿಯನ್ನು ಮೊಹಮ್ಮದ್ ಅಕ್ರಮ್ (45ವರ್ಷ) ಎಂದು ಗುರುತಿಸಲಾಗಿದೆ. ನಿಜಾಮುದ್ದೀನ್ ನಿವಾಸಿಯಾಗಿರುವ ಅಕ್ರಮ್ ಆರಂಭದಲ್ಲಿ ಕಲ್ಲು ಒಡೆಯುವ ಕೆಲಸ ಮಾಡುತ್ತಿದ್ದು, 2004ರಿಂದ ಅಪರಾಧ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇತ್ತೀಚೆಗೆ ಒಂದೇ ಪ್ರದೇಶದಲ್ಲಿ ನಾಲ್ಕು ದರೋಡೆ ಪ್ರಕರಣ ನಡೆದಿತ್ತು. ಆದರೆ ಆರೋಪಿಯ ಸೆರೆ ಹಿಡಿಯಲು ಸಾಧ್ಯವಾಗಿಲ್ಲವಾಗಿತ್ತು. ಈ ಹಿನ್ನೆಲೆಯಲ್ಲಿ ದರೋಡೆಕೋರನ ಬಂಧನಕ್ಕಾಗಿ ಉತ್ತರ ದೆಹಲಿ ಪೊಲೀಸರು ತಂಡವೊಂದನ್ನು ರಚಿಸಿದ್ದರು.
ಜೂನ್ 2ರಂದು ಸಿವಿಲ್ ಲೈನ್ಸ್ ಪೊಲೀಸರು ಮನೆ ದರೋಡೆಯಾದ ಬಗ್ಗೆ ದೂರವಾಣಿ ಕರೆಯೊಂದನ್ನು ಸ್ವೀಕರಿಸಿದ್ದರು. ಮರುದಿನ ಕೂಡಾ ಮತ್ತೊಂದು ದರೋಡೆ ಪ್ರಕರಣದ ಬಗ್ಗೆ ದೂರು ಬಂದಿತ್ತು. ಬಳಿಕ ಪೊಲೀಸರು 50ಕ್ಕೂ ಅಧಿಕ ಸಿಸಿಟಿವಿ ಕ್ಯಾಮರಾಗಳನ್ನು ಪರಿಶೀಲಿಸಿದಾಗ ಅಕ್ರಮ್ ನ ಗುರುತು ಪತ್ತೆಹಚ್ಚಿದ್ದರು.
ಖಚಿತ ಮಾಹಿತಿ ಮೇರೆಗೆ ಪೊಲೀಸರು ರಹಸ್ಯ ಕಾರ್ಯಾಚರಣೆ ನಡೆಸುವ ಮೂಲಕ ದರೋಡೆ ಕೃತ್ಯದ ಆರೋಪಿ ಅಕ್ರಮನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.
ದೆಹಲಿಯ ಸಿವಿಲ್ ಲೈನ್ಸ್ ಪ್ರದೇಶದಲ್ಲಿ ಹಲವಾರು ದರೋಡೆ ಕೃತ್ಯ ಎಸಗಿರುವುದಾಗಿ ಅಕ್ರಮ್ ಪೊಲೀಸರ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದ. ಅಷ್ಟೇ ಅಲ್ಲ ಕದ್ದ ವಸ್ತುಗಳನ್ನು ಮಾರಾಟ ಮಾಡಿರುವುದಾಗಿ ತಿಳಿಸಿರುವುದಾಗಿ ಉತ್ತರ ದೆಹಲಿ ಡಿಸಿಪಿ ಮನೋಜ್ ಕುಮಾರ್ ಮೀನ್ ತಿಳಿಸಿದ್ದಾರೆ.
ಸಹ ಆರೋಪಿ ಶೇಕ್ ಖಾಲಿದ್ ಮೆಹಮೂದ್ ನನ್ನು ಕೂಡಾ ಪೊಲೀಸರು ಬಂಧಿಸಿದ್ದು, ಈತನ ಬಳಿ ಇದ್ದ ಮೊಬೈಲ್ ಫೋನ್ ಹಾಗೂ ಕೆಲವು ಉಪಕರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.