ಬೆಂಗಳೂರು: ನಗರ ಮಿಂಟೊ ಆಸ್ಪತ್ರೆಯಲ್ಲಿ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗೊಳಗಾದ 20 ರೋಗಿಗಳಿಗೆ ಶಸ್ತ್ರ ಚಿಕಿತ್ಸೆಯ ನಂತರ ದೃಷ್ಟಿ ಕಾಣಿಸಿಕೊಂಡಿದ್ದು, ಆ ಪೈಕಿ 10 ರೋಗಿಗಳ ಕಣ್ಣಿಗೆ ತೀವ್ರ ಹಾನಿಯಾಗಿದೆ ಎಂದು ಹೇಳಲಾಗುತ್ತಿದೆ.
ವಯೋಸಹಜ ಕಣ್ಣಿನ ಪೊರೆ ಸಮಸ್ಯೆಯಿಂದಾಗಿ 40ರಿಂದ 80 ವರ್ಷ ಮೇಲ್ಪಟ್ಟ 24 ಮಂದಿ ಕಳೆದ ಮಂಗಳವಾರ ಮಿಂಟೋದಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಬುಧವಾರ ಕಣ್ಣಿನ ಪಟ್ಟಿ ಬಿಚ್ಚಿದಾಗ 20ಕ್ಕೂ ಹೆಚ್ಚು ರೋಗಿಗಳಿಗೆ ದೃಷ್ಟಿ ಸಂಪೂರ್ಣ ಹೋಗಿತ್ತು. ಹೀಗಾಗಿ ಅವರನ್ನು ಮತ್ತೂಮ್ಮೆ ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಗಿದೆ. ಬಳಿಕವೂ ದೃಷ್ಟಿ ಸಮಸ್ಯೆ ಕಂಡುಬಂದಿದ್ದು, ಅವರನ್ನು ಮನೆಗೆ ಕಳುಹಿಸದೇ ವೈದ್ಯರು ಚಿಕಿತ್ಸೆ ಮುಂದುವರೆಸಿದ್ದಾರೆ.
ಶಸ್ತ್ರಚಿಕಿತ್ಸೆ ವ್ಯತ್ಯಯವಾದ ರೋಗಿಗಳ ಕಣ್ಣುಗಳಲ್ಲಿ ಕೀವು ತುಂಬಿಕೊಂಡು ಸೋಂಕು ಹೆಚ್ಚಾಗಿದೆ. ಅದಕ್ಕಾಗಿ ಅವರ ಕಣ್ಣಿಗೆ ಮೂರು ದಿನಗಳಿಂದ ಚುಚ್ಚುಮದ್ದು ನೀಡಲಾಗುತ್ತಿದೆ. ಈ ಘಟನೆ ನಡೆದ ನಂತರ ಆಸ್ಪತ್ರೆಯಲ್ಲಿ ಬೇರೆ ಯಾವುದೇ ಶಸ್ತ್ರಚಿಕಿತ್ಸೆ ಕೈಗೊಂಡಿಲ್ಲ. ಜತೆಗೆ ರೋಗಿಗಳನ್ನೂ ದಾಖಲಿಸಿಕೊಂಡಿಲ್ಲ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಈ ಕುರಿತು ಪ್ರತಿಕ್ರಿಯಿಸರುವ ಮಿಂಟೋ ಕಣ್ಣಿನ ಆಸ್ಪತ್ರೆ ನಿರ್ದೇಶಕಿ ಡಾ.ಸುಜಾತಾ ರಾಥೋಡ್, ಮಂಗಳವಾರ ಚಿಕಿತ್ಸೆಗೆ ಒಳದ ರೋಗಿಗಳಿಗೆ ಡ್ರಗ್ ರಿಯಾಕ್ಷನ್ (ಓಷಧದ ಅಡ್ಡ ಪರಿಣಾಮ) ಉಂಟಾಗಿದೆ. ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಮುಂದುವರಿಸಿದ್ದು, ದೃಷ್ಟಿ ಸಮಸ್ಯೆಗೆ ಒಳಗಾದವರ ಲ್ಯಾಬ್ ವರದಿ ಸೋಮವಾರ ಲಭ್ಯವಾಗಲಿದೆ. ಬಳಿಕ ಈ ಕುರಿತು ವಿಚಾರಣೆ ನಡೆಸಲಾಗುವುದು.
ಅಂದು ಶಸ್ತ್ರಚಿಕಿತ್ಸೆಗೆ ಒಳಪಟ್ಟ 4 ರೋಗಿಗಳ ಚಿಕಿತ್ಸೆ ಯಶಸ್ವಿಯಾಗಿದೆ. ಅವರು ಈಗಾಗಲೇ ಗುಣಮುಖರಾಗಿ ಮನೆಗೆ ಹೋಗಿದ್ದಾರೆ. 8 ರೋಗಿಗಳು ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಉಳಿದ 10 ಮಂದಿಗೆ ದೃಷ್ಟಿ ಸಮಸ್ಯೆಯಾಗಿದ್ದು, ಹೆಚ್ಚುವರಿ ಚಿಕಿತ್ಸೆಗೆ ಚರ್ಚಿಸಿ ನಿರ್ಧರಿಸಲಾಗುವುದು ಎಂದು ತಿಳಿಸಿದರು.