ಮಾನ್ವಿ: ಪಟ್ಟಣದಲ್ಲಿ ತೆಲಂಗಾಣ ಭಾಗದಿಂದ 50ಕ್ಕೂ ಹೆಚ್ಚು ಕತ್ತೆಗಳನ್ನು ತರಲಾಗಿದ್ದು, ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕತ್ತೆ ಮಾಲೀಕರು 20 ಮಿ.ಲೀ ಹಾಲಿಗೆ 100 ರೂ. ನಂತೆ ಮಾರಾಟ ಮಾಡುತ್ತಿದ್ದಾರೆ.
ಕತ್ತೆಗಳ ಮಾಲೀಕ ಮಲ್ಲಯ್ಯ ಮಾತನಾಡಿ, ಪ್ರತಿ ವರ್ಷ ತೆಲಂಗಾಣ ರಾಜ್ಯದ ಮಂಚಾರಲ ಗ್ರಾಮದಲ್ಲಿ ಕತ್ತೆಗಳನ್ನು ಹಾಲಿಗಾಗಿಯೇ ಸಾಕಲಾಗುತ್ತಿದೆ. ಕತ್ತೆ ಹಾಲಿನಲ್ಲಿ ಹೆಚ್ಚಿನ ಪ್ರಮಾಣ ರೋಗ ನಿರೋಧಕ ಶಕ್ತಿ ಇರುವುದರಿಂದ ಮಕ್ಕಳಿಗೆ ಹಾಲು ಕುಡಿಸಲಾಗುತ್ತದೆ. ಹುಟ್ಟಿದ ಮಗುವಿನಿಂದ 10 ವರ್ಷದ ಮಗುವಿನವರೆಗೂ ಕತ್ತೆ ಹಾಲು ಕುಡಿಯಲು ಕೊಡಲಾಗುತ್ತಿದೆ. ಕತ್ತೆಗಳು ಹಾಲು ನೀಡುವ ಪ್ರಮಾಣ ಕಡಿಮೆ ಇರುವುದರಿಂದ 20 ಮಿ.ಲೀಗೆ 100 ರೂ. ನಂತೆ ಹಾಲು ನೀಡಲಾಗುತ್ತಿದೆ ಎಂದರು.
ಇತ್ತೀಚಿನ ದಿನಗಳಲ್ಲಿ ಕೊರೊನಾ ಬಾರದಂತೆ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಕತ್ತೆ ಹಾಲು ಕುಡಿಸುತ್ತಿರುವುದರಿಂದ ಆಂಧ್ರ ಮತ್ತು ಕರ್ನಾಟಕ, ಮಹಾರಾಷ್ಟ್ರ ರಾಜ್ಯಗಳಲ್ಲಿ ಹಾಲು ನೀಡುವ ಕತ್ತೆಗಳನ್ನು ತೆಗೆದುಕೊಂಡು ಹೋಗಿ ಹಾಲು ಮಾರಾಟ ಮಾಡುತ್ತಿರುವುದಾಗಿ ತಿಳಿಸಿದರು. ತಾಲೂಕು ಆರೋಗ್ಯಾಧಿ ಕಾರಿ ಡಾ| ಚಂದ್ರಶೇಖರಯ್ಯಸ್ವಾಮಿ ಮಾತನಾಡಿ, ಕತ್ತೆ ಹಾಲಿನಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ರೋಗ ನಿರೋಧಕ ಶಕ್ತಿ ಇರುವುದು ವೈಜ್ಞಾನಿಕವಾಗಿ ಸಾಬೀತಾಗಿಲ್ಲ. ಆದ್ದರಿಂದ ಪಾಲಕರು ಮೂಢನಂಬಿಕೆಗೆ ಒಳಗಾಗದೇ ವೈದ್ಯರ ಮಾರ್ಗದರ್ಶನದಲ್ಲಿ ಚಿಕಿತ್ಸೆ ಕೊಡಿಸುವಂತೆ ತಿಳಿಸಿದರು. ಈ ವೇಳೆ ಕತ್ತೆ ಮಾಲೀಕ ಗಂಗಾರಾಮ ಇದ್ದರು