ಬೆಂಗಳೂರು: ಪ್ರೇಯಸಿಯನ್ನು ಮದುವೆ ಯಾಗಲು ಕೆಲಸ ಮಾಡುತ್ತಿದ್ದ ಬ್ಯಾಂಕ್‌ನ ಎಟಿಎಂ ಕೇಂದ್ರದಲ್ಲಿ ಲಕ್ಷಾಂತರ ರೂ. ಕಳವು ಮಾಡಿದ್ದ ಭದ್ರತಾ ಸಿಬ್ಬಂದಿಯನ್ನು ವಿಲ್ಸನ್ ಗಾರ್ಡನ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಅಸ್ಸಾಂ ಮೂಲದ ದಿಪೋಂಕರ್ ನೋಮೋಸುಂದರ್ (23) ಬಂಧಿತ. ಆತನಿಂದ 14.20 ಲಕ್ಷ ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಆರೋಪಿ ವಿರುದ್ಧ ಬ್ಯಾಂಕ್ ನ ಮ್ಯಾನೇಜರ್ ದೂರು ನೀಡಿದ್ದರು ಎಂದು ಪೊಲೀಸರು ಹೇಳಿದರು.
ವಿಲ್ಸನ್ ಗಾರ್ಡನ್‌ನ 13 ನೇ ಕ್ರಾಸ್ ನಲ್ಲಿರುವ ಬ್ಯಾಂಕ್‌ನ ಎಟಿಎಂ ಕೇಂದ್ರದಲ್ಲಿ ಸೆಕ್ಯುರಿಟಿ ಕೆಲಸ ಮಾಡಿಕೊಂಡಿದ್ದ ಆರೋಪಿ, ಎಟಿಎಂಗೆ ಹಣ ತುಂಬಲು ಬರುವ ಸಿಬ್ಬಂದಿ ವಿಶ್ವಾಸ ಗಳಿಸಿದ್ದ. ಜತೆಗೆ ಹಣ ತುಂಬಲು ಸಿಬ್ಬಂದಿ ಬಳಸುತ್ತಿದ್ದ ಐಡಿ ಹಾಗೂ ಪಾಸ್ ವರ್ಡ್ ತಿಳಿದುಕೊಂಡಿದ್ದ. ತಾನು ಕರ್ತವ್ಯ ದಲ್ಲಿದ್ದ ವೇಳೆಯಲ್ಲಿ ಅದೇ ಐಡಿ-ಪಾಸ್ ವರ್ಡ್ ಬಳಸಿ 19.96 ಲಕ್ಷ ರೂ. ದೋಚಿ, ಅಸ್ಸಾಂನ ರಾಹ ಜಿಲ್ಲೆಯ ಚಪರ್ ಮುಖ್ ಗ್ರಾಮಕ್ಕೆ ಹೋಗಿ ತಲೆಮರೆಸಿಕೊಂಡಿದ್ದ ಎಂದು ಪೊಲೀಸರು ಹೇಳಿದರು.
ಈ ಸಂಬಂಧ ಪ್ರಕರಣ ದಾಖಲಿಸಿ ಕೊಂಡು ಆರೋಪಿಯನ್ನು ಅಸ್ಸಾಂನಲ್ಲಿ ಬಂಧಿಸಿ ನಗರಕ್ಕೆ ಕರೆತರಲಾಗಿದೆ. ಈತನ ವಿಚಾರಣೆ ವೇಳೆ ಅಸ್ಸಾಂನಲ್ಲಿ ಯುವತಿ ಯೊಬ್ಬಳನ್ನು ಪ್ರೀತಿಸುತ್ತಿದ್ದು, ಆಕೆಯೊಂದಿಗೆ ಮದುವೆಯಾಗಿ ಐಷಾರಾಮಿ ಜೀವನಕ್ಕಾಗಿ ಕಳ್ಳತನ ಮಾಡಿರುವುದು ಬಾಯಿಬಿಟ್ಟಿದ್ದಾನೆ. ಕದ್ದ ಹಣದಲ್ಲಿ ಮನೆಕಟ್ಟಿಸುವ ಮತ್ತು ಹೋಟೆಲ್ ತೆರೆಯುವ ಯೋಜನೆ ಹಾಕಿ ಕೊಂಡಿದ್ದ ಎಂದು ಪೊಲೀಸರು ಹೇಳಿದರು.
ಲೈಟ್ ಆಫ್ ಮಾಡಿ ಕೃತ್ಯ
ಕೆಲಸ ಮುಗಿದ ಬಳಿಕ ಆರೋಪಿ ಎಟಿಎಂ ಕೇಂದ್ರದ ಲೈಟ್ ಆಫ್ ಮಾಡಿ ಹಣ ದೋಚಿ ಹೈದರಾಬಾದ್‌ಗೆ ಪರಾರಿಯಾಗಿದ್ದ. ಬಳಸುತ್ತಿದ್ದ ಮೊಬೈಲ್ ಮತ್ತು ಸಿಮ್ ಎಸೆದು ಹೊಸ ಸಿಮ್ ಖರೀದಿಸಿ ಬಳಸುತ್ತಿದ್ದ. ಈ ಬಗ್ಗೆ ಮಾಹಿತಿ ತಿಳಿದು ಪೊಲೀಸರು ಹೈದಾರಾಬಾದ್‌ಗೆ ಹೋಗುವಷ್ಟರಲ್ಲಿ ಅಲ್ಲಿಂದ ಆತ ಅಸ್ಸಾಂನ ರಾಹ ಜಿಲ್ಲೆಯ ಚಪರ್ ಮುಖ್ ಗ್ರಾಮಕ್ಕೆ ತೆರಳಿ ಪರಾರಿಯಾಗಿದ್ದ. ಕೃತ್ಯ ಎಸಗಿ ಒಂದು ವಾರದ ಬಳಿಕ ತನ್ನ ಪ್ರಿಯತಮೆಯನ್ನು ಆರೋಪಿ ಭೇಟಿಯಾಗಿದ್ದ. ಜತೆಗೆ ಆಗಾಗ್ಗೆ ಭೇಟಿಯಾಗುತ್ತಿದ್ದ ಬಗ್ಗೆ ಮಾಹಿತಿ ಪಡೆದ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.