Advertisement

KRS ಸುತ್ತ 20 ಕಿ.ಮೀ. ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಷೇಧಗೊಳಿಸಿ ಹೈಕೋರ್ಟ್‌ ಆದೇಶ

10:18 PM Jan 08, 2024 | Team Udayavani |

ಬೆಂಗಳೂರು: ನಾಡಿನ ಇತಿಹಾಸ ಮತ್ತು ಪರಂಪರೆಯ ಹೆಗ್ಗುರುತಾಗಿರುವ ಕೃಷ್ಣರಾಜ ಸಾಗರ ಅಣೆಕಟ್ಟು ಸುತ್ತಲಿನ 20 ಕಿ.ಮೀ. ವ್ಯಾಪ್ತಿಯಲ್ಲಿ ಎಲ್ಲ ಬಗೆಯ ಗಣಿಗಾರಿಕೆ ಚಟುವಟಿಕೆಗಳನ್ನು ಹೈಕೋರ್ಟ್‌ ನಿಷೇಧಿಸಿದೆ.

Advertisement

ಗಣಿಗಾರಿಕೆಯಿಂದ ಕೆಆರ್‌ಎಸ್‌ ಅಣೆಕಟ್ಟಿಗೆ ಅಪಾಯವಿರುವ ಅಂಶವನ್ನು ಗಂಭೀರವಾಗಿ ಪರಿಗಣಿಸಿರುವ ಹೈಕೋರ್ಟ್‌ ಸೋಮವಾರ ಈ ಮಹತ್ವದ ಆದೇಶ ಹೊರಡಿಸಿದೆ. ತಮ್ಮ ಖಾಸಗಿ ಜಮೀನಿನಲ್ಲಿ ಕಲ್ಲು ಗಣಿಗಾರಿಕೆ ನಡೆಸಲು ಹಲವು ಷರತ್ತುಗಳನ್ನು ವಿಧಿಸಿ ಅನುಮತಿ ನೀಡಿದ್ದ ಮಂಡ್ಯ ಜಿಲ್ಲಾಧಿಕಾರಿ ಆದೇಶ ಪ್ರಶ್ನಿಸಿ ಜಿಲ್ಲೆಯ ಚಿನಕುರಳಿ ಗ್ರಾಮದ ಸಿ.ಜಿ. ಕುಮಾರ್‌ ಅವರು ಸಲ್ಲಿಸಿದ್ದ ತಕರಾರು ಅರ್ಜಿಯನ್ನು ವಿಚಾರಣೆ ನಡೆಸಿದ ಮು|ನ್ಯಾ| ಪ್ರಸನ್ನ ಬಿ. ವರಾಲೆ ಹಾಗೂ ನ್ಯಾ| ಕೃಷ್ಣ ಎಸ್‌. ದೀಕ್ಷಿತ್‌ ಅವರಿದ್ದ ವಿಭಾಗೀಯ ನ್ಯಾಯಪೀಠ, ಮುಂದಿನ ಆದೇಶದವರೆಗೆ ಕೆಆರ್‌ಎಸ್‌ ಅಣೆಕಟ್ಟಿನ 20 ಕಿ.ಮೀ. ವ್ಯಾಪ್ತಿಯಲ್ಲಿ ಸ್ಫೋಟ (ಬ್ಲಾಸ್ಟಿಂಗ್‌) ಸಹಿತ ಎಲ್ಲ ಬಗೆಯ ಗಣಿಗಾರಿಕೆ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ ಎಂದು ಹೇಳಿದೆ.

ನ್ಯಾಯಾಲಯದ ಮುಂದಿರುವ ಅರ್ಜಿ ವ್ಯಕ್ತಿಗತ ಸ್ವರೂಪದ್ದಾಗಿದ್ದರೂ, ಕೆಆರ್‌ಎಸ್‌ ಅಣೆಕಟ್ಟು ವಿಚಾರ ಇದರಲ್ಲಿ ಅಡಕವಾಗಿದೆ. ವಿಷಯದ ಗಾಂಭೀರ್ಯದ ಹಿನ್ನೆಲೆಯಲ್ಲಿ ಈ ಆದೇಶ ಹೊರಡಿಸಲಾಗುತ್ತಿದೆ. ಬ್ಲಾಸ್ಟಿಂಗ್‌ ರಹಿತ ಗಣಿ ಗಾರಿಕೆ ಚಟುವಟಿಕೆಗಳಿಗೆ ಅನುಮತಿ ಕೊಡಿ ಎಂದು ಅರ್ಜಿದಾರರು ಕೇಳಿದ್ದಾರೆ. ಆದರೆ ಅಣೆಕಟ್ಟಿನ ಸುರಕ್ಷೆ ದೃಷ್ಟಿಯಿಂದ ಅದು ಸಾಧ್ಯವಿಲ್ಲ. ಕೆಆರ್‌ಎಸ್‌ ಕೇವಲ ಒಂದು ಡ್ಯಾಂ ಅಲ್ಲ; ಅದು ನಾಡಿನ ಇತಿಹಾಸ ಮತ್ತು ಪರಂಪರೆಯ ಪ್ರತೀಕವಾಗಿದೆ. ಅದರ ಸುತ್ತ ಗಣಿಗಾರಿಕೆಗೆ ಅನುಮತಿ ಕೊಟ್ಟರೆ, ಅದರಿಂದ ಕೇವಲ ಅಣೆಕಟ್ಟಿಗೆ ಅಪಾಯ ಅಲ್ಲ; ಇಡೀ ನಾಡಿಗೆ ದುರಂತ ತಂದೊಡ್ಡಬಹುದು. ಆ ಹಿನ್ನೆಲೆಯಲ್ಲಿ ಗಣಿಗಾರಿಕೆಗೆ ನಿರ್ಬಂಧ ವಿಧಿಸಲಾಗುತ್ತಿದೆ ಎಂದು ಹೈಕೋರ್ಟ್‌ ತನ್ನ ಆದೇಶದಲ್ಲಿ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next