ಮಲ್ಪೆ: ಇಲ್ಲಿನ ಬಲರಾಮ ಆಳಸಮುದ್ರ ಬೋಟಿಗೆ 20 ಕೆಜಿ ತೂಕದ ಘೋಲ್ ಮೀನು ದೊರಕಿದ್ದು ಮಂಗಳವಾರ ಮಲ್ಪೆ ಬಂದರಿನಲ್ಲಿ ಹರಾಜಿನಲ್ಲಿ ಕೆ.ಜಿ.ಗೆ 9,000 ರೂ.ಗಳಂತೆ 1.80 ಲಕ್ಷ ರೂ.ಗೆ ಮಾರಾಟವಾಗಿದೆ.
ಸ್ಥಳೀಯವಾಗಿ ಗೋಲಿ ಮೀನು ಎಂದು ಕರೆಯಲಾಗುವ ಇದರ ವೈಜ್ಞಾನಿಕ ಹೆಸರು ಘೋಲ್ ಫಿಶ್.
ಕರ್ನಾಟಕ ವಿಶ್ವನಿದ್ಯಾನಿಲಯದ ಕಡಲಜೀವಿ ಶಾಸ್ತ್ರ ವಿಭಾಗದ ಸಂಶೋಧಕ ಶಿವಕುಮಾರ್ ಹರಗಿ ಮತ್ತು ಶ್ರೀಕಾಂತ ಜಿ.ಬಿ. ಅವರು ಹೇಳುವ ಪ್ರಕಾರ ಈ ಮೀನಿನ ಹೊಟ್ಟೆಯನ್ನು ಬಂಗಾರವೆಂದು ಪರಿಗಣಿಸಲಾಗಿದೆ.
ಔಷಧೀಯ ಗುಣವನ್ನು ಹೊಂದಿರುವ ಈ ಮೀನಿಗೆ ವಿದೇಶದಲ್ಲಿ ಭಾರೀ ಬೇಡಿಕೆ ಇದೆ. ಕರಾವಳಿಯ ಅಳಿವೆಯ ಆಳಕ್ಕೆ ಇರುವ ಮೀನು ಅರಬ್ಬೀ ಸಮುದ್ರದ ಶ್ರೀಲಂಕಾ, ಆಸ್ಟ್ರೇಲಿಯಾ ದವರೆಗೂ ಹಬ್ಬಿವೆ. 1.5 ಮೀಟರ್ ವರೆಗೆ ಉದ್ದ ಬೆಳೆಯುತ್ತದೆ. ಈ ಮೀನಿನ ತೂಕ ಹೆಚ್ಚಾದಂತೆ ದರವೂ ಹೆಚ್ಚಾಗುತ್ತದೆ. 30 ಕೆ.ಜಿ. ಮೀನು 5 ಲಕ್ಷ ರೂ. ವರೆಗೂ ಬೆಲೆಬಾಳುತ್ತದೆ.
ಇದನ್ನೂ ಓದಿ:ಕಾಂಪ್ಲೆಕ್ಸ್ ಗೊಬ್ಬರ ಬಳಕೆಗೆ ಹೆಚ್ಚಿನ ಗಮನ ನೀಡಲು ಕ್ರಮ: ಬಿ.ಸಿ.ಪಾಟೀಲ್
ಈ ಮೀನಿನ ಮಾಂಸ ಅತ್ಯಂತ ರುಚಿದಾಯಕ ಅಷ್ಟೇ ಅಲ್ಲದೆ ಅದರ ವಾಯು ಚೀಲವನ್ನು ಸೌಂದರ್ಯ ವರ್ಧಕ ವಸ್ತುಗಳಲ್ಲಿ ಉಪಯೋಗಿಸಲಾಗುತ್ತದೆ ಎನ್ನುತ್ತಾರೆ.