Advertisement

20ರಂದು ಜಿಲ್ಲಾ ಮಟ್ಟದ ಜನಮನ?

12:27 PM Jan 12, 2017 | Team Udayavani |

ಮೈಸೂರು: ರಾಜ್ಯ ಸರ್ಕಾರದ ಬಗ್ಗೆ ಜನರ ನಾಡಿಮಿಡಿತ ಅರಿತುಕೊಳ್ಳುವ ಉದ್ದೇಶದಿಂದ ವಿವಿಧ ಭಾಗ್ಯಗಳ ಫ‌ಲಾನುಭವಿಗಳ ಜತೆಗೆ ಜಿಲ್ಲಾ ಉಸ್ತುವಾರಿ ಸಚಿವರು ಸಂವಾದ ನಡೆಸುವ “ಜನಮನ’ ಕಾರ್ಯಕ್ರಮವನ್ನು ಜ.20ರಂದು ಮಾನಸಗಂಗೋತ್ರಿಯ ಸೆನೆಟ್‌ ಭವನದಲ್ಲಿ ಆಯೋಜಿಸಲು ಜಿಲ್ಲಾಡಳಿತ ಸಿದ್ಧತೆ ನಡೆಸಿದೆ. ಜೂನ್‌ ತಿಂಗಳಲ್ಲಿ ಇದೇ ಸಭಾಂಗಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯಮಟ್ಟದ ಜನಮನ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ವಿವಿಧ ಜಿಲ್ಲೆಗಳ ಫ‌ಲಾನುಭವಿಗಳ ಜತೆಗೆ ಮುಖಾಮುಖೀ ಸಂವಾದ ನಡೆಸಿ, ಫ‌ಲಾನುಭವಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡಿ, ತಮ್ಮ ಸರ್ಕಾರದ ಬಗ್ಗೆ ಜನರಲ್ಲಿ ವಿಶ್ವಾಸ ಮೂಡಿಸುವ ಕೆಲಸ ಮಾಡಿದ್ದರು.

Advertisement

ಮುಂದಿನ ದಿನಗಳಲ್ಲಿ ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಉಸ್ತುವಾರಿ ಮಂತ್ರಿಗಳು ಜನಮನ ಕಾರ್ಯಕ್ರಮ ನಡೆಸಲಿದ್ದಾರೆ ಎಂದು ಅದೇ ಕಾರ್ಯಕ್ರಮದಲ್ಲಿ ಸ್ವತಃ ಮುಖ್ಯಮಂತ್ರಿಯವರೇ ಪ್ರಕಟಿಸಿದ್ದರು. ಆದರೆ, ಬೇರೆ ಬೇರೆ ಕಾರಣಗಳಿಂದಾಗಿ ಕಳೆದ ಒಂದೂವರೆ ವರ್ಷಗಳಿಂದ ಜಿಲ್ಲಾಮಟ್ಟದ ಜನಮನ ಕಾರ್ಯಕ್ರಮ ನಡೆಯಲೇ ಇಲ್ಲ. ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರಮಾಪ್ತರೇ ಆಗಿರುವ ಲೋಕೋಪಯೋಗಿ ಸಚಿವ ಡಾ.ಎಚ್‌.ಸಿ.ಮಹಾದೇವಪ್ಪ ಅವರು ಮೈಸೂರು ಜಿಲ್ಲಾ ಉಸ್ತುವಾರಿ ಆಗಿರುವುದರಿಂದ ಜನಮನ ಕಾರ್ಯಕ್ರಮಕ್ಕೆ ಚಾಲನೆ ದೊರೆಯುತ್ತಿದ್ದು, ಎಲ್ಲವೂ ಅಂದು ಕೊಂಡಂತೆ ನಡೆದಿದ್ದರೆ, ಡಿಸೆಂಬರ್‌ ತಿಂಗಳಾಂತ್ಯದಲ್ಲೇ ಜನಮನ ಕಾರ್ಯಕ್ರಮ ನಡೆಯಬೇಕಿತ್ತು.

ಆದರೆ, ಮಾಜಿ ಸಚಿವ ವಿ.ಶ್ರೀನಿವಾಸಪ್ರಸಾದ್‌ ಅವರ ರಾಜೀನಾಮೆಯಿಂದ ತೆರವಾಗಿರುವ ನಂಜನಗೂಡು ವಿಧಾನಸಭಾ ಕ್ಷೇತ್ರಕ್ಕೆ ಪಂಚರಾಜ್ಯಗಳ ವಿಧಾನಸಭಾ ಚುನಾ ವಣೆ ಜತೆಗೆ ಉಪ ಚುನಾವಣೆ ಎದು ರಾಗಬಹುದು ಎಂಬ ಕಾರಣದಿಂದ ಇಡೀ ಸರ್ಕಾರ ನಂಜನಗೂಡು ಕ್ಷೇತ್ರದತ್ತ ವಿಶೇಷ ಗಮನಹರಿಸಿದ್ದರಿಂದ ಜನಮನ ಕಾರ್ಯಕ್ರಮ ಮುಂದೂಡ ಲ್ಪಟ್ಟಿತ್ತು. ಇದೀಗ ಜನವರಿ 20ರಂದು ಮೈಸೂರಲ್ಲಿ ಜಿಲ್ಲಾ ಮಟ್ಟದ ಜನಮನ ಕಾರ್ಯ ಕ್ರಮ ನಡೆಸಲು ಸಿದ್ಧತೆ ನಡೆಸಿರುವ ಜಿಲ್ಲಾಡಳಿತ ಈ ಸಂಬಂಧ ಗುರುವಾರ ಸಭೆ ನಡೆಸಿ, ಜನಮನ ಕಾರ್ಯಕ್ರಮದ ರೂಪುರೇಷೆ ಅಂತಿಮಗೊಳಿಸಲಿದೆ ಎಂದು ತಿಳಿದುಬಂದಿದೆ.

ಸರ್ಕಾರದ ವಿವಿಧ ಭಾಗ್ಯ ಗಳು ಸಮಾಜದ ಎಲ್ಲ ವರ್ಗದ ಜನರನ್ನು ನಿರೀಕ್ಷಿಸಿ ದಂತೆ ತಲುಪುತ್ತಿವೆಯೇ?, ಸರ್ಕಾರದ ಮೂಲ ಉದ್ದೇಶ ಈಡೇರಿದೆಯೇ?, ಇವುಗಳನ್ನು ಜನರಿಗೆ ಇನ್ನಷ್ಟು ಪರಿಣಾಮಕಾರಿಯಾಗಿ ಹೇಗೆ ತಲುಪಿಸಬಹುದು?, ಯೋಜನೆಗಳ ಬಗ್ಗೆ ಜನರ ಅಭಿಪ್ರಾಯವೇನು?, ಜನರು ಸರ್ಕಾರದಿಂದ ನಿರೀಕ್ಷೆ ಮಾಡುವುದೇನು?, ಎನ್ನುವ ಬಗ್ಗೆ ಫ‌ಲಾನುಭವಿಗಳೊಂದಿಗೆ ಮುಖಾಮುಖೀ ಸಂವಾದ ನಡೆಸಲಿದ್ದಾರೆ ಜಿಲ್ಲಾ ಉಸ್ತುವಾರಿ ಸಚಿವರು.

ಅಂದು ಬೆಳಗ್ಗೆ 10.30ಕ್ಕೆ ಸಂವಾದ ಕಾರ್ಯಕ್ರಮ ಆರಂಭಿಸಿ ಮೂರ್‍ನಾಲ್ಕು ಗಂಟೆಗಳ ಕಾಲ ವಿವಿಧ ಯೋಜನೆಗಳ ಫ‌ಲಾನುಭವಿಗಳ ಜತೆಗೆ ಸಂವಾದ ನಡೆಯಲಿದೆ. ಮುಖ್ಯವಾಗಿ ಕೃಷಿ ಭಾಗ್ಯ, ಅನ್ನಭಾಗ್ಯ, ಬಿದಾಯಿ, ವಿದ್ಯಾಸಿರಿ, ಪಶುಭಾಗ್ಯ, ಕ್ಷೀರ ಭಾಗ್ಯ, ಮನಸ್ವಿನಿ, ಮೈತ್ರಿ, ಋಣ ಮುಕ್ತ, ಕ್ಷೀರಧಾರೆ, ವಸತಿ ಭಾಗ್ಯ, ಮುಂತಾದ ಯೋಜನೆಗಳ ಫ‌ಲಾನು ಭವಿಗಳನ್ನು ಜಿಲ್ಲೆಯ ಏಳು ತಾಲೂಕುಗಳಿಂದ ಆಯ್ದು ಕರೆತರಲು ಉದ್ದೇಶಿಸಲಾಗಿದೆ.

Advertisement

ಪ್ರತಿ ಯೋಜನೆಯ ಸುಮಾರು 4ರಿಂದ 6 ಜನ ಫ‌ಲಾನುಭವಿಗಳನ್ನು ಆಯ್ಕೆ ಮಾಡಿ ವೇದಿಕೆಯ ಮೇಲೆ ಕರೆತರಲಾಗುವುದು, ಆರಂಭದಲ್ಲಿ ಒಂದೆರಡು ನಿಮಿಷಗಳ ಕಾಲ ಬೃಹತ್‌ ಪರದೆಯ ಮೇಲೆ ಯೋಜನೆಗೆ ಸಂಬಂಧಿಸಿದ ವೀಡಿಯೋ ತುಣುಕು ಪ್ರಸಾರ ಮಾಡಿದ ನಂತರ ಜಿಲ್ಲಾ ಉಸ್ತುವಾರಿ ಮಂತ್ರಿಗಳು, ಫ‌ಲಾನುಭವಿಗಳ ಜತೆಗೆ ಸಂವಾದ ನಡೆಸಲಿದ್ದಾರೆ. ಜಿಲ್ಲೆಯ ಶಾಸಕರು, ವಿಧಾನಪರಿಷತ್‌ ಸದಸ್ಯರೂ ಸಹ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

* ಗಿರೀಶ್‌ ಹುಣಸೂರು

Advertisement

Udayavani is now on Telegram. Click here to join our channel and stay updated with the latest news.

Next