ಮನಿಲಾ : ಪವಿತ್ರ ಕ್ರಿಸ್‌ಮಸ್ ದಿನದ ಸಾಮೂಹಿಕ ಪ್ರಾರ್ಥನಾ ಸಭೆಯಲ್ಲಿ ಪಾಲ್ಗೊಳ್ಳಲು ಹೋಗುತ್ತಿದ್ದ ಯಾತ್ರಿಕರ ಬಸ್ಸೊಂದು ಇನ್ನೊಂದು ವಾಹನಕ್ಕೆ ಮುಖಾಮುಖೀ ಢಿಕ್ಕಿಯಾಗಿ ಸಂಭವಿಸಿದ ಭೀಕರ ಅಪಘಾತದಲ್ಲಿ 20 ಮಂದಿ ಮೃತಪಟ್ಟ ದಾರುಣ ಘಟನೆ ಉತ್ತರ ಫಿಲಿಪ್ಪೀನ್ಸ್‌ನಲ್ಲಿ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಮನಿಲಾದಿಂದ ಉತ್ತರಕ್ಕೆ 200 ಕಿ.ಮೀ. ದೂರದಲ್ಲಿರುವ ಆ್ಯಗೂ ಪಟ್ಟಣದಲ್ಲಿ ವಿಸ್ತೃತ ಕುಟುಂಬದ ಸದಸ್ಯರನ್ನು ಕ್ರಿಸ್‌ಮಸ್ ಮಾಸ್ ಪ್ರೇಯರ್‌ಗೆ ಒಯ್ಯುತ್ತಿದ್ದ ಸಣ್ಣ ಬಸ್ಸು ಎದುರುಗಡೆಯಿಂದ ಬರುತ್ತಿದ್ದ ದೊಡ್ಡ ಬಸ್ಸಿಗೆ ಮುಖಾಮುಖೀ ಢಿಕ್ಕಿಯಾಯಿತು.
ಸಣ್ಣ ಬಸ್ಸಿನಲ್ಲಿದ್ದವರ ಪೈಕಿ 20 ಮಂದಿ ಮೃತಪಟ್ಟರೆ ಇತರ 9 ಮಂದಿ ಗಾಯಗೊಂಡರು. ದೊಡ್ಡ ಬಸ್ಸಿನಲ್ಲಿದವರ ಪೈಕಿ 15 ಮಂದಿ ಗಾಯಗೊಂಡರು.
ಸಣ್ಣ ಬಸ್ಸಿನಲ್ಲಿದ್ದವರು ಈ ಕ್ಯಾಥೋಲಿಕ್ ರಾಷ್ಟ್ರದ ಶತಮಾನದಷ್ಟು ಹಳೆಯ ಅವರ್ ಲೇಡಿ ಆಫ್ ಮನೋವಾಗ್ ಚರ್ಚಿನಲ್ಲಿ ಕ್ರಿಸ್‌ಮಸ್ ಮಾಸ್ ಪ್ರೇಯರ್‌ನಲ್ಲಿ ಪಾಲ್ಗೊಳ್ಳಲು ಹೋಗುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಸಣ್ಣ ಬಸ್ಸಿನ ಚಾಲಕ ಅಬುಬೋ ಅಪಘಾತ ಸಂಭವಿಸಿದ ವೇಳೆ ನಿದ್ದೆಗೆ ಜಾರಿದ್ದನೇ ಅಥವಾ ಕುಡಿದ ಅಮಲಿನಲ್ಲಿ ಇದ್ದನೇ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಆ್ಯಗೂ ಪೊಲೀಸ್ ಮುಖ್ಯಸ್ಥ ರಾಯ್ ವಿಲಾನುಯೇವ ಹೇಳಿದ್ದಾರೆ.